ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣಕನ್ನಡ: ಎ.ಜೆ.ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಹೈಪೆಕ್ ಶಸ್ತ್ರಚಿಕಿತ್ಸೆ

18 ಗಂಟೆಗಳ ಶಸ್ತ್ರಚಿಕಿತ್ಸೆಯ ಮೂಲಕ ಗೆಡ್ಡೆ ತೆಗೆದ ವೈದ್ಯರ ತಂಡ
Last Updated 31 ಆಗಸ್ಟ್ 2018, 13:01 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕುಂಟಿಕಾನದಲ್ಲಿರುವ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇದೀಗ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗೆ ಹೊಸ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಇನ್ನೊಂದು ಸಾಧನೆ ಮಾಡಿದೆ.

ತುಮಕೂರಿನ 59 ವರ್ಷದ ವ್ಯಕ್ತಿಯೊಬ್ಬರು 4 ವರ್ಷದ ಹಿಂದೆ ಸೂಡೋಮಿಸ್ಸೋಮ ಗೆಡ್ಡೆಗಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೆ ಕಾಯಿಲೆ ಮರುಕಳಿಸಿ, ನೋವಿನಿಂದ ಬಳಲುತ್ತಿದ್ದರು. ಅವರನ್ನು ಸಿ.ಟಿ. ಸ್ಕ್ಯಾನ್ ಮೂಲಕ ಶೋಧಿಸಿದಾಗ, ಅವರಿಗೆ ಬಹು ಅಂಗಾಂಗಳ ಶಸ್ತ್ರಚಿಕಿತ್ಸೆಯ ಅಗತ್ಯತೆ ಕಂಡುಬಂತು.

ಶಸ್ತ್ರಚಿಕಿತ್ಸಾ ಪೂರ್ವ ತಪಾಸಣೆ ಮತ್ತು ಪೂರ್ವತಯಾರಿಯ ಬಳಿಕ ರೋಗಿಯನ್ನು ಇದೇ 14ರಂದು ಎ.ಜೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ವಿಶ್ವನಾಥ ನೇತೃತ್ವದ ವೈದ್ಯರ ತಂಡ 18 ಗಂಟೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಗಡ್ಡೆಯನ್ನು ತೆಗೆದು ಹಾಕಿತು. ಕನ್ಸಲ್ಟೆಂಟ್ ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್‌ರಾದ ಡಾ.ರೋಹನ್ ಶೆಟ್ಟಿ, ಡಾ. ಅಶ್ವಿನ್ ಆಳ್ವ, ಮೆಡಿಕಲ್ ಒಂಕಾಲೊಜಿಸ್ಟ್ ಡಾ. ರಚನ್ ಶೆಟ್ಟಿ, ಅರಿವಳಿಕೆ ತಜ್ಞ ಡಾ. ತ್ರಿವಿಕ್ರಮ್ ತಂತ್ರಿ ಈ ತಂಡದಲ್ಲಿದ್ದರು.

ಶಸ್ತ್ರಚಿಕಿತ್ಸೆಯ ವಿಶೇಷತೆ: ದೇಹದ ಪ್ರಮುಖ ಅಂಗಾಂಗಗಳಿಗೆ ರೋಗ ವ್ಯಾಪಿಸಿದ್ದರಿಂದ, ಬಹು ಅಂಗಾಂಗಗಳ ಶಸ್ತ್ರಚಿಕಿತ್ಸೆಯನ್ನು ಅಳವಡಿಸಲಾಯಿತು.

‘ಈ ಮೂಲಕ ಜಠರದ ಒಂದು ಅಂಶ, ಸಣ್ಣ ಕರುಳು, ದೊಡ್ಡ ಕರುಳು ಹಾಗೂ ಸ್ಪ್ಲೀನ್ ಅನ್ನು ತೆಗೆಯುವುದಲ್ಲದೆ ಯಕೃತ್ತು ಮತ್ತು ಮೇದೋಜೀರಕ ಗ್ರಂಥಿಯ ಹೊರಗಿನ ಭಾಗವನ್ನು ಸಂಪೂರ್ಣವಾಗಿ ತೆಗೆಯಬೇಕಾಗಿ ಬಂತು. ಅಲ್ಲದೆ, ಪೆರಿಟೋನಿಯಂ ಅನ್ನು ಕೂಡ ಸಂಪೂರ್ಣವಾಗಿ ತೆಗೆಯಲಾಯಿತು. ಇದೊಂದು ಸಂಕೀರ್ಣ ಶಸ್ತ್ರಚಿಕಿತ್ಸೆ ಆಗಿರುವುದರಿಂದ 18 ಗಂಟೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂತು’ ಎನ್ನುತ್ತಾರೆ ಡಾ. ವಿಶ್ವನಾಥ್.

‘ನಂತರ ಹೈಪರ್ ತರ್ಮಿಕ್ ಇಂಟ್ರಾ ಪೆರಿಟೋನಿಯಾಲ್ ಕೆಮೊಥೆರಪಿ (ಹೈಪೆಕ್) ಯಂತ್ರದ ಮೂಲಕ ಕೀಮೊಥೆರಪಿಯನ್ನು 90 ನಿಮಿಷ, 42ಡಿಗ್ರಿ ತಾಪಮಾನದಲ್ಲಿ ಹೊಟ್ಟೆಯೊಳಗೆ ನಿರ್ವಹಿಸಲಾಯಿತು. ಬಿಸಿಯಾದ ಕೀಮೊಥೆರಪಿಯನ್ನು ನೇರವಾಗಿ ಪೆರಿಟೊನಿಯಲ್ ಕುಳಿಯಲ್ಲಿ ನಿಯಂತ್ರಿಸುವುದರಿಂದ ಮಾನವ ಕಣ್ಣಿಗೆ ಗೋಚರಿಸದ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವಲ್ಲಿ ನೆರವಾಗುತ್ತದೆ. ಹೈಪೆಕ್ ಮೂಲಕ ಕೀಮೋಥೆರಪಿ ಕೊಡುವುದರಿಂದ ಔಷಧಿಯು ಕ್ಯಾನ್ಸರ್ ಜೀವಕೋಶಗಳೊಂದಿಗೆ ನೇರ ಸಂಪರ್ಕದಲ್ಲಿ ಇರುತ್ತದೆ. ಕೀಮೋಥೆರಫಿಯಿಂದ ಆಗುವ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಬಹುದಾಗಿದೆ’ ಎಂದು ತಿಳಿಸಿದ್ದಾರೆ.

‘ಹೈಪೆಕ್ ಕೀಮೋಥೆರಪಿ ಮೊದಲ ಬಾರಿಗೆ ನೀಡಲಾಗಿದ್ದು, ಅನೆಸ್ತೇಸಿಯಾ ವಿಭಾಗದ ಮುಖ್ಯಸ್ಥ ಡಾ.ತ್ರಿವಿಕ್ರಮ ತಂತ್ರಿ ನೇತೃತ್ವದ ವೈದ್ಯರ ತಂಡ, ರೋಗಿಯ ದೇಹ ಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಿತ್ತು. ರೋಗಿಯನ್ನು ಸ್ಥಿರ ಸ್ಥಿತಿಯಲ್ಲಿ 12 ನೇ ದಿನದಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ’ ಎಂದು ಡಾ. ವಿಶ್ವನಾಥ ತಿಳಿಸಿದ್ದಾರೆ.

ಕರಾವಳಿ ಭಾಗದಲ್ಲಿ ಹೈಪೆಕ್ ಸಲಕರಣೆಯ ಮೂಲಕ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನು ಮೊದಲ ಬಾರಿಗೆ ನೀಡಲಾಗಿದ್ದು, ಇನ್ನು ಮುಂದೆ ಇಂತಹ ತಂತ್ರಜ್ಞಾನವನ್ನು ಬಳಸಿ ರೋಗಿಗಳಿಗೆ ಅನುಕೂಲವಾಗುವಂತೆ ಚಿಕಿತ್ಸೆ ನೀಡುವ ಉದ್ದೇಶವಿದೆ ಎಂದು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್‌ ಮಾರ್ಲ ತಿಳಿಸಿದ್ದಾರೆ.

ಈ ಶಸ್ತ್ರಚಿಕಿತ್ಸೆ ಕುರಿತ ಹೆಚ್ಚಿನ ವಿವರಗಳಿಗೆ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ವಿಶ್ವನಾಥ್ (ಮೊ.ಸಂ. 8123567396) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT