ಗ್ರಾಮ ಪಂಚಾಯಿತಿಯಲ್ಲೇ ಜಾತಿ, ಆದಾಯ ಪ್ರಮಾಣಪತ್ರ: ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೇ ಜಾತಿ ಮತ್ತು ಆದಾಯ ಪ್ರಮಾಣಪತ್ರ ನೀಡುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಂಟ್ವಾಳದಲ್ಲಿ ನಡೆಯುತ್ತಿರುವ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು, ಜನನ–ಮರಣ ಪ್ರಮಾಣಪತ್ರಗಳನ್ನೂ ಪಂಚಾಯಿತಿಗಳಲ್ಲೇ ನೀಡಲಾಗುವುದು. ಕೇರಳದ ಮಾದರಿಯಲ್ಲಿ ವಿವಾಹ ನೋಂದಣಿಯನ್ನೂ ಪಂಚಾಯಿತಿ ಮಟ್ಟದಲ್ಲಿಯೇ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಪಂಚಾಯಿತಿ ಸದಸ್ಯರಿಗೆ ಈ ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಗೌರವ ಧನ ನೀಡಲು ಪ್ರಾರಂಭಿಸಿತ್ತು. ಇದೀಗ ಗೌರವಧನವು ₹1 ಸಾವಿರ ಇದ್ದು, ಅದನ್ನು ₹2 ಸಾವಿರಕ್ಕೆ ಹೆಚ್ಚಿಸಲು ಸಚಿವ ಕೆ.ಎಸ್. ಈಶ್ವರಪ್ಪ ಕ್ರಮ ಕೈಗೊಳ್ಳಬೇಕು. ಇದಕ್ಕೆ ₹100 ಕೋಟಿ ಅನುದಾನ ಅಗತ್ಯವಿದೆ ಎಂದು ತಿಳಿಸಿದರು.
15ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯಿತಿಗಳಿಗೆ ತಲಾ ₹1 ಕೋಟಿ ಅನುದಾನ ಬರುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಮದ ಅಭಿವೃದ್ಧಿ ಮಾಡಬೇಕು. ಬಿಜೆಪಿ ಗ್ರಾಮಾಭಿವೃದ್ಧಿಗೆ ಹೊಂದಿರುವ ಆದ್ಯತೆಯನ್ನು ನೀಡುತ್ತಿದೆ ಎಂಬುದನ್ನು ಗ್ರಾಮೀಣ ಜನರಿಗೆ ತಿಳಿಸಿಕೊಡುವ ಮೂಲಕ ಪಕ್ಷದ ಬಲವರ್ಧನೆ ಮಾಡಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.