ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ತಿಂಗಳಲ್ಲಿ ಡಿಪಿಆರ್‌ ಸಲ್ಲಿಸಲು ಸೂಚನೆ

ಗಂಜಿಮಠದಲ್ಲಿ ಪ್ಲಾಸ್ಟಿಕ್‌ ಪಾರ್ಕ್: ಕೇಂದ್ರದಿಂದ ತಾತ್ವಿಕ ಅನುಮೋದನೆ
Last Updated 23 ಜನವರಿ 2021, 2:03 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಪ್ಲಾಸ್ಟಿಕ್‌ ಪಾರ್ಕ್‌, ಐದು ವರ್ಷಗಳ ನಂತರ ಮತ್ತೊಂದು ಹೆಜ್ಜೆ ಮುಂದಿರಿಸಿದೆ. ಇದೀಗ ಕೇಂದ್ರ ಸರ್ಕಾರ ಪ್ಲಾಸ್ಟಿಕ್‌ ಪಾರ್ಕ್‌ಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಕೂಡಲೇ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಸೂಚನೆ ನೀಡಿದೆ.

2015 ರಲ್ಲಿ ನಗರಕ್ಕೆ ಭೇಟಿ ನೀಡಿದ್ದ ಆಗಿನ ರಾಸಾಯನಿಕ ಖಾತೆ ಸಚಿವ ಅನಂತಕುಮಾರ್ ಅವರು, ಪ್ಲಾಸ್ಟಿಕ್‌ ಪಾರ್ಕ್‌ ಮಂಜೂರು ಮಾಡುವುದಾಗಿ ಘೋಷಿಸಿದ್ದರು. ಅದರಂತೆ ರಾಜ್ಯ ಸರ್ಕಾರ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ಈ ಪ್ರಸ್ತಾವಕ್ಕೆ ತಾತ್ವಿಕ ಅನುಮೋದನೆ ದೊರೆತಂತಾಗಿದೆ.

ದೇಶದಲ್ಲಿ 8 ಪ್ಲಾಸ್ಟಿಕ್‌ ಪಾರ್ಕ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಅದರಲ್ಲಿ ಮಂಗಳೂರಿನ ಪಾರ್ಕ್‌ ಕೂಡ ಒಂದಾಗಿದೆ. ಸುಮಾರು ₹1 ಸಾವಿರ ಕೋಟಿ ಹೂಡಿಕೆಯ ಈ ಯೋಜನೆಯಿಂದ ನೂರಾರು ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ.

ಕಚ್ಚಾವಸ್ತು ಲಭ್ಯ: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಆರ್‌ಪಿಎಲ್‌ನ ಪಾಲಿಪ್ರಾಪೆಲಿನ್‌ ಘಟಕವು ಕಚ್ಚಾ ಪ್ಲಾಸ್ಟಿಕ್‌ ಪೂರೈಕೆ ಮಾಡಲಿದ್ದು, ಇದು ಇಲ್ಲಿನ ಪ್ಲಾಸ್ಟಿಕ್‌ ಪಾರ್ಕ್‌ನಲ್ಲಿ ತಲೆ ಎತ್ತಲಿರುವ ಉದ್ಯಮಗಳಿಗೆ ಪೂರಕ ವಾತಾವರಣ ನಿರ್ಮಿಸಿದೆ.

ಸದ್ಯಕ್ಕೆ ಎಂಆರ್‌ಪಿಎಲ್‌ನ ಕಚ್ಚಾ ಪ್ಲಾಸ್ಟಿಕ್‌ ಗುಜರಾತ ಮತ್ತು ಮಹಾರಾಷ್ಟ್ರಕ್ಕೆ ಕಳುಹಿಸಲಾಗುತ್ತಿದೆ. ಪ್ಲಾಸ್ಟಿಕ್‌ ಪಾರ್ಕ್ ಆರಂಭವಾದಲ್ಲಿ ಈ ಕಚ್ಚಾ ಪ್ಲಾಸ್ಟಿಕ್‌ ಅನ್ನು ಇಲ್ಲಿಯೇ ಬಳಸಲು ಅನುಕೂಲ ಆಗಲಿದೆ. ಜೊತೆಗೆ ಸಾಗಣೆ ವೆಚ್ಚವೂ ಉಳಿತಾಯ ಆಗಲಿದೆ.

ಪ್ಲಾಸ್ಟಿಕ್‌ ಪಾರ್ಕ್‌ನಲ್ಲಿ ಘಟಕ ಸ್ಥಾಪಿಸಲು ಸಂಬಂಧಿಸಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 32 ಕಂಪನಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿವೆ. ಜೊತೆಗೆ ಹೊರ ಜಿಲ್ಲೆಗಳ ಕಂಪನಿಗಳು ಆಸಕ್ತಿ ತೋರಿವೆ.

ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದಿಂದ ₹40 ಕೋಟಿ ದೊರೆಯಲಿದ್ದು, ಪ್ಲಾಸ್ಟಿಕ್‌ ಪಾರ್ಕ್‌ಗಾಗಿ ಗಂಜಿಮಠದಲ್ಲಿ 104 ಎಕರೆ ಭೂಮಿ ಗುರುತಿಸಲಾಗಿದೆ. ಇನ್ನೂ 50 ಎಕರೆ ಲಭ್ಯವಿದ್ದು, ಕೆಐಎಡಿಬಿಯಿಂದ ಭೂಸ್ವಾಧೀನ ಮಾಡಲು ಅವಕಾಶವಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್‌ ತಿಳಿಸಿದ್ದಾರೆ.

***
ಮಂಗಳೂರಿನ ಪ್ಲಾಸ್ಟಿಕ್ ಪಾರ್ಕ್‌ಗೆ ತಾತ್ವಿಕ ಒಪ್ಪಿಗೆ ನೀಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಆರು ತಿಂಗಳ ಒಳಗೆ ಅಂತಿಮ ಒಪ್ಪಿಗೆ ನೀಡಿ ಯೋಜನೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು.
-ಡಿ.ವಿ. ಸದಾನಂದಗೌಡ,ಕೇಂದ್ರ ಸಚಿವ

**

ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನಿಯವರ ಮೇಕ್ ಇನ್ ಇಂಡಿಯಾ ನನಸಾಗುವಲ್ಲಿ ಈ ಯೋಜನೆ ಮಹತ್ತರ ಪಾತ್ರ ವಹಿಸಲಿದೆ.
-ನಳಿನ್‌ಕುಮಾರ್ ಕಟೀಲ್‌,ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT