ಮಂಗಳವಾರ, ನವೆಂಬರ್ 12, 2019
28 °C
ಚೈಲ್ಡ್‌ಲೈನ್-1098 ಸದಸ್ಯರ ಕಾರ್ಯಾಚರಣೆ

ಅಪಹರಣವಾಗಿದ್ದ ಬಾಲಕನ ರಕ್ಷಣೆ

Published:
Updated:

ಮಂಗಳೂರು: ಅಪಹರಣಕ್ಕೆ ಒಳಗಾಗಿದ್ದ ಆಂಧ್ರಪ್ರದೇಶದ 11 ವರ್ಷದ ಬಾಲಕನನ್ನು ಚೈಲ್ಡ್‌ಲೈನ್‌–1098 ತಂಡದ ಸದಸ್ಯರು ಪುತ್ತೂರು ತಾಲ್ಲೂಕಿನ ಬಲ್ನಾಡು ಬಳಿ ರಕ್ಷಿಸಿದ್ದಾರೆ.

ಆಂಧ್ರಪ್ರದೇಶದ ಶಿಲ್ಪಾ ಎಂಬಾಕೆಯು 11 ವರ್ಷದ ಬಾಲಕನನ್ನು ಅಕ್ರಮವಾಗಿ ಸಾಕುತ್ತಿರುವ ಮತ್ತು ಸ್ಥಳೀಯ ನಿವಾಸಿ ಮಂಜುನಾಥ ಎಂಬುವವರಿಗೆ ಮಾರಲು ಯತ್ನಿಸಿರುವ ಕುರಿತು ಸಂಶಯಗೊಂಡ ಬಲ್ನಾಡು ಗ್ರಾಮ ಪಂಚಾಯಿತಿ ಸದಸ್ಯರು, ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಯನ್ನು ಒಳಗೊಂಡ ತಂಡ, ತಾಯಿಯ ಜತೆಗೆ ಬಾಲಕನನ್ನು ಇಲ್ಲಿನ ಚೈಲ್ಡ್‌ಲೈನ್-1098ರ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ.

ಚೈಲ್ಡ್‌ಲೈನ್ ನಿರ್ದೇಶಕರ ನಿರ್ದೇಶನ ಮೇರೆಗೆ ಆಪ್ತಸಮಾಲೋಚಕರು, ಬಾಲಕನಿಗೆ ಆಪ್ತ ಸಮಾಲೋಚನೆಯನ್ನು ನಡೆಸಿದ್ದು, ‘ನಾನು ಆಂಧ್ರಪ್ರದೇಶದ ಓಂಗೋಳ ಹತ್ತಿರದ ಸೀತಾರಾಮ್ ಪುರದ ಬಾಲಕನಾಗಿದ್ದು, ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ಮಲಗಿದ್ದಾಗ ಶಿಲ್ಪಾ ಎಂಬಾಕೆಯು ಕರೆದುಕೊಂಡು ಬಂದಿದ್ದಾರೆ’ ಎಂದು ಮಾಹಿತಿ ನೀಡಿದ್ದಾನೆ.

ಬಳಿಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರೆನ್ನಿ ಡಿಸೋಜ ಅವರ ಆದೇಶದಂತೆ ಬಾಲಕನನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ಪುನರ್ವಸತಿಯನ್ನು ಕಲ್ಪಿಸಲಾಗಿದೆ.

ನಂತರ ಚೈಲ್ಡ್‌ಲೈನ್ ತಂಡವು ಪುತ್ತೂರಿನ ಸಂಪ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪುತ್ತೂರು ಶಿಶು ಅಭಿವೃದ್ದಿ ಯೋಜನಾಧಿಕಾರಿ, ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ಹಾಗೂ ಬಲ್ನಾಡು ಗ್ರಾಮ ಪಂಚಾಯಿತಿ ಸದಸ್ಯರ ಜತೆಗೆ ತೆರಳಿ ದೂರು ನೀಡಿದ್ದು, ಶಿಲ್ಪಾ ಎಂಬಾಕೆಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ, ಚೈಲ್ಡ್‌ಲೈನ್-1098 ಜಿಲ್ಲಾ ಕೇಂದ್ರ ಸಂಯೋಜಕರಾದ ದೀಕ್ಷಿತ್ ಅಚ್ರಪ್ಪಾಡಿ, ಮಹಿಳಾ ಸಾಂತ್ವನ ಕೇಂದ್ರದ ನಿಶಾ ಹಾಗೂ ಬಳ್ನಾಡು ಗ್ರಾಮ ಪಂಚಾಯಿತಿ ಸದಸ್ಯೆ ಪರಮೇಶ್ವರಿ ಈ ಸಂದರ್ಭದಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)