ಭಾನುವಾರ, ಆಗಸ್ಟ್ 1, 2021
21 °C
ಸರದಿಯಲ್ಲಿ ನಿಂತು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಗಾದ ಭಕ್ತರು

ಚರ್ಚ್‌ ಪ್ರಾರಂಭ: ಮಾರ್ಗಸೂಚಿಯಂತೆ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಧರ್ಮಪ್ರಾಂತದ ವ್ಯಾಪ್ತಿಯ ಚರ್ಚ್‌ಗಳು ಶನಿವಾರ ಪ್ರಾರಂಭವಾಗಿದ್ದು, ಕ್ರಿಶ್ಚಿಯನ್‌ರು ಮಾರ್ಗಸೂಚಿಯಂತೆ ಚರ್ಚ್‌ಗಳಿಗೆ ಬಂದು ಪ್ರಾರ್ಥನೆ ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ನಗರದ ಹಲವು ಚರ್ಚ್‌ಗಳಿಗೆ ಜನರು ಭೇಟಿ ನೀಡಿದರು. ಸುರಕ್ಷಿತ ಅಂತರ ಕಾಪಾಡಿಕೊಂಡು, ಸರದಿಯಲ್ಲಿ ನಿಂತು, ಥರ್ಮಲ್‌ ಸ್ಕ್ಯಾನಿಂಗ್ ಮೂಲಕ ತಪಾಸಣೆಗೆ ಒಳಗಾದರು. ನಂತರ ಚರ್ಚ್‌ನಲ್ಲಿಯೂ ಸುರಕ್ಷಿತ ಅಂತರದಲ್ಲಿ ಕುಳಿತುಕೊಂಡು ಪ್ರಾರ್ಥನೆ ಸಲ್ಲಿಸಿದರು.

ಸರ್ಕಾರ ಅನುಮತಿ ನೀಡಿದ್ದರಿಂದ ಮಂಗಳೂರು ಧರ್ಮ ಪ್ರಾಂತದ ಚರ್ಚ್‌ಗಳಲ್ಲಿ ಶನಿವಾರದಿಂದ ಪ್ರಾರ್ಥನೆ ಆರಂಭಿಸಲಾಗಿದ್ದು, ಇದಕ್ಕಾಗಿಯೇ ಮಾರ್ಗಸೂಚಿಗಳನ್ನು ರಚಿಸಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕರ್ನಾಟಕ ಪ್ರಾದೇಶಿಕ ಕೆಥೋಲಿಕ್‌ ಬಿಷಪರ ಪರಿಷತ್ತು ಕೆಲವೊಂದು ನಿರ್ದೇಶನಗಳನ್ನು ರೂಪಿಸಿದೆ ಎಂದು ಬಿಷಪ್‌ ರೆ.ಡಾ.ಪೀಟರ್‌ ಪಾವ್ಲ್ ಸಲ್ಡಾನ ತಿಳಿಸಿದ್ದಾರೆ.

ಮಾರ್ಗಸೂಚಿಗಳು: 10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷ ಮೇಲಿನ ವಯೋಮಾನದವರು ಚರ್ಚ್, ಆರಾಧನಾಲಯಗಳಲ್ಲಿ ಭಾಗವಹಿಸದಿರುವುದು ಉತ್ತಮ. ಕೊರೊನಾ ಸೋಂಕು ಕಾರಣದಿಂದ ಕಂಟೇನ್‌ಮೆಂಟ್‌ ಪ್ರದೇಶದ ಜನರು ಪಾಲ್ಗೊಳ್ಳುವಂತಿಲ್ಲ. ಸಂಕೀರ್ಣ ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿಯರು, ಹೋಂ ಕ್ವಾರಂಟೈನ್‌ನಲ್ಲಿ ಇರುವವರು ಭಾಗವಹಿಸುವಂತಿಲ್ಲ.

ಬಲಿಪೂಜೆಗೆ ಮಾರ್ಗಸೂಚಿ: ಬಲಿ ಪೂಜೆಗಳನ್ನು 45 ನಿಮಿಷದೊಳಗೆ ಮುಕ್ತಾಯಗೊಳಿಸಬೇಕು. ಬಲಿಪೂಜೆ ಆರಂಭಿಸುವ ಮೊದಲು ಧರ್ಮಗುರುಗಳು ಕೈಗಳನ್ನು ತೊಳೆದು ಸ್ವಚ್ಛಗೊಳಿಸಬೇಕು. ಪರಮ ಪ್ರಸಾದವನ್ನು ಕೈಯಲ್ಲಿ ಮಾತ್ರ ಸ್ವೀಕರಿಸಬೇಕು.

ಚರ್ಚ್‌ ತೆರೆಯಲು ಮಾರ್ಗಸೂಚಿ

ಚರ್ಚ್‌ಗಳನ್ನು ತೆರೆಯಲು ಮಂಗಳೂರು ಧರ್ಮಪ್ರಾಂತದಿಂದ ಕೆಲ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ಮಾಸ್ಕ್ ಧಾರಣೆ, ಸುರಕ್ಷಿತ ಅಂತರ, ಸ್ಯಾನಿಟೈಸೇಶನ್‌ ಬಗ್ಗೆ ಮಾಹಿತಿ ನೀಡಲು ಸ್ವಯಂ ಸೇವಕರ ನೇಮಕ ಮಾಡಬೇಕು. ಚರ್ಚ್‌ನ ಒಳಗೆ ಮತ್ತು ಭಕ್ತರು ಸ್ಪರ್ಶಿಸಬಹುದಾದ ಎಲ್ಲ ತಾಣಗಳನ್ನು ಕಾಲ ಕಾಲಕ್ಕೆ ಸ್ಯಾನಿಟೈಸೇಶನ್‌ ಮಾಡಿ ಸ್ವಚ್ಛತೆಯನ್ನು ಕಾಪಾಡಬೇಕು. ಸುರಕ್ಷಿತ ಅಂತರ (ಕನಿಷ್ಠ 6 ಅಡಿ) ಮತ್ತಿತರ ಸುರಕ್ಷತೆ ಕುರಿತಂತೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ಎಲ್ಲ ಭಕ್ತರು ಒಂದೇ ದ್ವಾರದ ಮೂಲಕ ಥರ್ಮಲ್‌ ಸ್ಕ್ರೀನಿಂಗ್‌ ನಡೆಸಿ, ಒಳಗೆ ಪ್ರವೇಶಿಸಬೇಕು.

***

ಚರ್ಚ್‌ಗಳಲ್ಲಿ ಬಲಿಪೂಜೆ ಆರಂಭಿಸಬಹುದಾಗಿದ್ದು, ಭಕ್ತರ ಸುರಕ್ಷತೆಗೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚ್‌ನ ಧರ್ಮ ಗುರುಗಳು ಜವಾಬ್ದಾರಿ ವಹಿಸಿಕೊಳ್ಳಬೇಕು

-ರೆ.ಡಾ.ಪೀಟರ್‌ ಪಾವ್ಲ್‌ ಸಲ್ಡಾನ, ಮಂಗಳೂರು ಬಿಷಪ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು