ಶನಿವಾರ, ಫೆಬ್ರವರಿ 29, 2020
19 °C
ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ರ ಸಲಹೆ ಪಡೆಯಲು ಆಗ್ರಹ

ಹಳಿ ತಪ್ಪಿದ ಮೋದಿ ಆಡಳಿತ: ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದೇಶದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ, ಆಡಳಿತ ಹೇಗೆ ನಡೆಸಬೇಕು ಎಂಬ ಅರಿವು ಕೇಂದ್ರ ಸರ್ಕಾರಕ್ಕೆ ಇಲ್ಲ. ಪ್ರಧಾನಿಗೆ ಸಲಹೆ ನೀಡುವವರು ಯಾರೂ ಇಲ್ಲ. ಬ್ಯಾಂಕುಗಳು ಮುಳುಗಿ ಹೋಗುತ್ತಿವೆ. ಜಗತ್ತಿನಲ್ಲಿ ಭಾರತ ತನ್ನ ತೂಕ ಕಳೆದುಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಟೀಕಿಸಿದರು.

ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಜಿಡಿಪಿ ಶೇ 3.30 ಗೆ ಇಳಿದಿದೆ. ಆರ್ಥಿಕ ಸ್ಥಿತಿ ಕುಸಿದು ಹೋಗಿದೆ. ಎನ್‌ಆರ್‌ಸಿ, ಸಿಎಎ ಬಗ್ಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೂ ಗೊಂದಲ ಇದೆ ಎಂದರು.

ಉನ್ನತ ವ್ಯಾಸಂಗ ಮಾಡಿದವರು ಉದ್ಯೋಗವಿಲ್ಲದೇ, ಅಲೆದಾಡುತ್ತಿದ್ದಾರೆ. ಕತ್ತೆ ಬಾಲಕ್ಕೆ ಡಬ್ಬ ಕಟ್ಟಿ ಬಿಟ್ಟಂತಾಗಿದೆ ಇವರ ಪರಿಸ್ಥಿತಿ. ಸಂವಿಧಾನವೇ ನಮಗೆ ಧರ್ಮಗ್ರಂಥ. ಸಂವಿಧಾನ ಹೇಳಿದಂತೆ ನಡೆಯಬೇಕು. ನಿರ್ಮಲಾ ಸೀತಾರಾಮನ್‌ ಅವರು, ಆರ್ಥಿಕ ಸ್ಥಿತಿಗೂ ತಮಗೂ ಸಂಬಂಧ ಇಲ್ಲದಂತೆ ಇದ್ದಾರೆ ಎಂದು ದೂರಿದರು.

ಬಿಜೆಪಿ ನಾಯಕರಾದ ಎಲ್‌.ಕೆ. ಅಡ್ವಾನಿ ಅವರೇ ಪಾಕಿಸ್ತಾನದ ಮೂಲದವರಾಗಿದ್ದರೂ, ಪೌರತ್ವ ಪಡೆದಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವ ಬೇಡಿಕೆ ಇಲ್ಲದೇ ಇದ್ದರೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.

ದೇಶದಲ್ಲಿ ಒಳ್ಳೆಯ ಆಡಳಿತ ನೀಡಿ. ಅದನ್ನು ಬಿಟ್ಟು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಬೇಡಿ ಎಂದ ಇಬ್ರಾಹಿಂ, ಪೌರತ್ವ ಸಾಬೀತುಪಡಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್‌ ಶಾ ಅವರು ತಮ್ಮ ಮದುವೆ ಪ್ರಮಾಣಪತ್ರಗಳನ್ನು ಹಾಜರುಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಬಾಂಗ್ಲಾ ದೇಶದ ಜಿಡಿಪಿ ಶೇ 8 ರಷ್ಟಿದೆ. ಆದರೆ, ನಮ್ಮ ದೇಶದ ಜಿಡಿಪಿ ಶೇ 3.30ಕ್ಕೆ ಇಳಿದಿದೆ. ಕೇಂದ್ರದ ಬಿಜೆಪಿ ಆಡಳಿತ ಹಳಿ ತಪ್ಪಿದೆ. ತಮ್ಮ ಹಳೆಯ ತಪ್ಪುಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಹೊಸ ತಪ್ಪುಗಳನ್ನು ಮಾಡುತ್ತಲೇ ಹೊರಟಿದ್ದಾರೆ ಎಂದರು.

ದೇಶದ ಹಣಕಾಸು ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರೊಂದಿಗೆ ಸಮಾಲೋಚನೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.

ಈಗಾಗಲೇ ಮುಸ್ಲಿಮರು ಎಚ್ಚೆತ್ತುಕೊಂಡಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯ ಹೋರಾಟಗಳನ್ನು ಆರಂಭಿಸಿದ್ದಾರೆ ಎಂದರು.

ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು