ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರಿಗೆ ಕಾರ್ಯಾಚರಣೆ ಸಂಕೇತ: ಎಸ್‌.ಪಿ ಡಾ.ಹರ್ಷ ಪ್ರಸ್ತಾವ

ಕರಾವಳಿ ಕಾವಲು ಪಡೆಯ ಕಾರ್ಯಾಗಾರ
Last Updated 7 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಮಂಗಳೂರು: ‘ಮೀನುಗಾರರ ಸುರಕ್ಷತೆ ಹಾಗೂ ದೇಶದ ಭದ್ರತೆ ನಿಟ್ಟಿನಲ್ಲಿ ಪ್ರತಿ ಮೀನುಗಾರರು ಹಾಗೂ ದೋಣಿಗಳಿಗೆ ‘ಕಾರ್ಯಾಚರಣೆ ಸಂಕೇತ’ವನ್ನು ನೀಡುವ ಅಗತ್ಯವಿದೆ’ ಎಂದು ಮಂಗಳೂರು ಪೊಲೀಸ್‌ ಕಮಿಷನರ್ ಡಾ.ಹರ್ಷ ಪಿ.ಎಸ್. ಹೇಳಿದರು.

ನಗರದ ಪಣಂಬೂರಿನಲ್ಲಿರುವ ಕರಾವಳಿ ಕಾವಲು ಪಡೆಯ ಕೇಂದ್ರ ಕಚೇರಿಯಲ್ಲಿ ಗುರುವಾರ ‘ಮೀನುಗಾರರು ನಮ್ಮ ಸ್ನೇಹಿತರು– ಕಡಲ ಶೋಧ ಮತ್ತು ರಕ್ಷಣಾ ಕಾರ್ಯ’ (ಎಸ್‌ಎಆರ್) ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬೋಟ್‌ ಮೂಲಕವೂ ದೇಶದ ಭದ್ರತೆಗೆ ಅಪಾಯ ಬರಬಹುದು ಎಂಬುದಕ್ಕೆ ಮುಂಬೈ ತಾಜ್‌ ಪ್ರಕರಣವೇ ಸಾಕ್ಷಿ. ಈ ನಿಟ್ಟಿನಲ್ಲಿ ಪ್ರತಿ ದೋಣಿ ಹಾಗೂ ಮೀನುಗಾರರನ್ನು ಗುರುತಿಸಲು ‘ಕಾರ್ಯಾಚರಣೆ ಸಂಕೇತ’ವನ್ನು ನೀಡಬೇಕು. ಆಗ, ತಾಂತ್ರಿಕ ನಿರ್ವಹಣೆಯು ಭದ್ರತಾ ಪಡೆಗಳಿಗೆ ಸುಲಭ ಸಾಧ್ಯವಾಗಲಿದೆ’ ಎಂದರು.

‘ಯಾವುದೇ ಇಲಾಖೆ, ಪಡೆ, ತುಕುಡಿಗಳೆಲ್ಲವೂ ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ‘ಮೀನುಗಾರರು ನಮ್ಮ ಸ್ನೇಹಿತರು’ ಎಂಬ ಕಾರ್ಯಾಗಾರದ ಘೋಷ ವಾಕ್ಯವು ಖುಷಿ ನೀಡಿದೆ. ಆದರೆ, ಮೀನುಗಾರರ ಹೆಸರಿನಲ್ಲಿ ನುಸುಳುವ ಆತಂಕಕಾರಿಗಳ ಬಗ್ಗೆ ಎಚ್ಚರಿಕೆ ಇಡಬೇಕಾಗಿದೆ’ ಎಂದರು.

‘ಎಸ್‌ಎಆರ್ ಎಷ್ಟೊಂದು ಕ್ಲಿಷ್ಟಕರ ಎಂಬುದನ್ನು ನಾನು 2014ರ ಮಾರ್ಚ್‌ನಲ್ಲಿ ಸಂಭವಿಸಿದ ಎಂಎಚ್‌ 370 ವಿಮಾನ ನಾಪತ್ತೆ ಪ್ರಕರಣದಲ್ಲಿ ಕಂಡಿದ್ದೇನೆ. ಹವಾಮಾನ ವೈಪರೀತ್ಯ, ಸಮುದ್ರದ ಏರಿಳಿತ, ಒತ್ತಡಗಳು, ಕ್ಲಿಷ್ಟಕರ ಸನ್ನಿವೇಶಗಳು, ತಾಂತ್ರಿಕ ಸವಾಲುಗಳನ್ನು ಎದರಿಸಿಕೊಂಡು ಕಾರ್ಯಚರಿಸುವ ಕರಾವಳಿ ಕಾವಲು ಪಡೆಯ ಕಾರ್ಯಗಳಿಗೆ ಸೆಲ್ಯೂಟ್‌’ ಎಂದರು.

‘ಯಾವುದೇ ಕಾರ್ಯಾಚರಣೆಯಲ್ಲಿ ಸಂವಹನ, ಸ್ಲಷ್ಟತೆ, ಸಂಪರ್ಕ, ಸ್ಪಂದನೆ, ತಾಂತ್ರಜ್ಞಾನದ ಬಳಕೆ, ಸಾಮರ್ಥ್ಯಗಳು ಪ್ರಮುಖವಾಗುತ್ತವೆ. ಚಿನ್ನದ ವಿಮಾನ ಹೊಂದಿದ ಸಿರಿವಂತನಿಗಿಂತಲೂ ಸಮವಸ್ತ್ರದಲ್ಲಿರುವ ಸೈನಿಕನಿಗೆ ಸಿಗುವ ಗೌರವವು ಹಿರಿದಾಗಿದೆ’ ಎಂದರು.

ಕರಾವಳಿ ಕಾವಲು ಪಡೆ (ಕರ್ನಾಟಕ–3) ಡಿಐಜಿ ಎಸ್.ಎಸ್. ದಸ್ಸಿಲಾ ಮಾತನಾಡಿ ‘ಕರಾವಳಿ ಕಾವಲು ಪಡೆಯ ಸಿಬ್ಬಂದಿ ಬದುಕು ಕೌತುಕ ಹಾಗೂ ಅನುಭವದಿಂದ ತುಂಬಿರುತ್ತದೆ. ಪ್ರತಿ ಕ್ಷಣವೂ ಸವಾಲುಗಳನ್ನು ಎದುರಿಸುವ ವೃತ್ತಿಯಾಗಿದೆ. ‘ಮಹಾ’ ಮತ್ತು ‘ಕ್ಲಾರ್’ ಚಂಡಮಾರುತದ ಸಂದರ್ಭದ ಕಾರ್ಯಾಚರಣೆ, ಪ್ರವಾಹ ಸಂದರ್ಭ ಕೈಗೊಂಡ ರಕ್ಷಣಾ ಕಾರ್ಯಗಳು ಸಾಹಸಮಯವಾಗಿತ್ತು’ ಎಂದರು.

‘ಯಾರೂ ತಮ್ಮ ತಮ್ಮ ಸಾಮರ್ಥ್ಯವನ್ನು ಕೀಳರಿಮೆಯಿಂದ ನೋಡಬಾರದು. ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಶ್ರೇಯಸ್ಸು ನಮ್ಮದಾಗುತ್ತದೆ. ಕರಾವಳಿ ಕಾವಲು ಪಡೆಯು ಕೇವಲ ಭಾರತೀಯರನ್ನು ಮಾತ್ರವಲ್ಲ ಸಮೀಪದ ಮಾಲ್ಡೀವ್ಸ್, ಒಮನ್, ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾದ ಜನರಿನ್ನೂ ರಕ್ಷಣೆ ಮಾಡಿದೆ’ ಎಂದರು.

ಕಮಾಂಡೆಂಟ್‌ಗಳಾದ ಆರ್.ಕೆ. ಶರ್ಮಾ, ನೀರಜ್ ಸಿಂಗ್, ಆರ್.ಕೆ. ಸಿನ್ಹಾ, ಡೆಪ್ಯುಟಿ ಕಮಾಂಡೆಂಟ್‌ಗಳಾದ ದೀಪಿಕಾ ಧೀಮಾನ್, ಗೌತಮ್ ಸೋನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT