ಬುಧವಾರ, ಸೆಪ್ಟೆಂಬರ್ 22, 2021
29 °C
ಮನೆಯಿಂದಲೇ ಕೃಷ್ಣ ವೇಷಧಾರಿ ಮಕ್ಕಳ ವಿಡಿಯೊ ಕಳುಹಿಸಿ

10 ರಂದು ಶ್ರೀಕೃಷ್ಣ ವೇಷ ಸ್ಪರ್ಧೆ: ಕಲ್ಕೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ಆಯೋಜಿಸಲಾಗುವ ರಾಷ್ಟೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆ’ಯನ್ನು ಈ ಬಾರಿ ಕೋವಿಡ್‌–19 ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ನಡೆಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.

ಇದೇ 10ರಂದು ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಸ್ಪರ್ಧಿ ಮಕ್ಕಳ 3 ನಿಮಿಷಗಳ ಕೃಷ್ಣ ವೇಷ ಸ್ಪರ್ಧೆಯ ವಿಡಿಯೊಗಳನ್ನು ಮನೆಯಿಂದಲೇ ಚಿತ್ರೀಕರಿಸಿ ಇದೇ 7ರೊಳಗೆ ಆಯಾ ವಿಭಾಗಕ್ಕೆ ಒದಗಿಸಲಾಗಿರುವ ಇ– ಮೇಲ್ ಮೂಲಕ ಕಳುಹಿಸಬಹುದಾಗಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕನಿಷ್ಠ 30 ಸೆಕೆಂಡ್‌ನಿಂದ ಗರಿಷ್ಠ 3 ನಿಮಿಷದೊಳಗಿನ ವಿಡಿಯೊ ಕಳುಹಿಸಬೇಕು. ಇದೇ 10ರಂದು ಬೆಳಿಗ್ಗೆ 9 ರಿಂದ ರಾತ್ರಿ 9ರವರೆಗೆ ‘ನಮ್ಮ ಕುಡ್ಲ ಚಾನೆಲ್’ನಲ್ಲಿ ನೇರ ಪ್ರಸಾರದಲ್ಲಿ ವಿಜೇತ ಮಕ್ಕಳ ವಿಡಿಯೊ ಪ್ರಸಾರ ಮಾಡಲಾಗುವುದು ಎಂದರು. ಪ್ರತಿ ವರ್ಷ ಕದ್ರಿ ಮಂಜುನಾಥ ಕ್ಷೇತ್ರದ ಆವರಣದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿತ್ತು. ಕೋವಿಡ್‌ನಿಂದಾಗಿ ಈ ಬಾರಿ ಅಸಾಧ್ಯವಾಗಿದೆ. ಆದರೆ ಈ ಬಾರಿ ಮನೆಗಳಲ್ಲಿಯೇ ಪಾಲಕರು, ಮನೆ ಮಂದಿಯೆಲ್ಲಾ ಜತೆಯಾಗಿ ಚಿತ್ರೀಕರಣವನ್ನು ಅವರಿಗೆ ಇಷ್ಟದ ರೀತಿಯಲ್ಲಿ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಈ ಬಾರಿ ತೊಟ್ಟಿಲ ಹಬ್ಬದ ಸಂಭ್ರಮದಲ್ಲಿರುವ ಮಗುವಿಗೆ ಸಾಧಾರಣ ಕೃಷ್ಣನ ವೇಷ ಹಾಕಿಸಿ, ವಿಡಿಯೊ ಮಾಡುವ ಅವಕಾಶವಿದೆ. ಇದೇ ವೇಳೆ ಕೃಷ್ಣನ ವೇಷಧಾರಿಯೊಂದಿಗೆ ಮನೆಮಂದಿಯೆಲ್ಲಾ ಸೇರಿ ಗಿಡ ನೆಡುವ ವಿಡಿಯೊ ಮೂಲಕ ವೃಕ್ಷ ಕೃಷ್ಣ ಸ್ಪರ್ಧೆಯನ್ನೂ ಅಳವಡಿಸಲಾಗಿದೆ ಎಂದು ಹೇಳಿದರು.

ಇದಲ್ಲದೆ ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ ಸೇರಿದಂತೆ ಒಟ್ಟು 32 ವಿಭಾಗಗಳಲ್ಲಿ ವಿವಿಧ ವಯೋಮಾನದ ಮಕ್ಕಳ ಸ್ಪರ್ಧೆ ನಡೆಯಲಿದೆ. ವಿಶ್ವದಾದ್ಯಂತ ಮಕ್ಕಳು ಕೃಷ್ಣ ವೇಷಧಾರಿಯಾಗಿ ಭಾಗವಹಿಸಬಹುದು. ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0824- 2492239, ಮೊ.ಸಂ. 9845083736 ಸಂಪರ್ಕಿಸಬಹುದು ಎಂದು ತಿಳಿಸಿದರು.

ಕೌಶಿಕ್ ಕಲ್ಲೂರಾಯ, ಕದ್ರಿ ನವನೀತ ಶೆಟ್ಟಿ, ದಯಾನಂದ, ಜಿ.ಕೆ. ಭಟ್ ಸೇರಾಜೆ, ವಿಜಯಲಕ್ಷ್ಮೀ, ರತ್ನಾಕರ ಜೈನ್, ಸುಧಾಕರ ರಾವ್ ಪೇಜಾವರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು