ಬುಧವಾರ, ಜೂನ್ 16, 2021
23 °C
ಜೋತಿಷಿಗಳನ್ನು ಅವಮಾನಿಸಿದ ಆರೋಪ

ನಟ ಅರವಿಂದ ಬೋಳಾರ್‌ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಜೋತಿಷಿಗಳನ್ನು ಅವಮಾನಿಸಿದ ಆರೋಪದ ಮೇಲೆ ತುಳು ರಂಗಭೂಮಿ ಕಲಾವಿದ ಮತ್ತು ಚಿತ್ರನಟ ಅರವಿಂದ ಬೋಳಾರ್‌ ಹಾಗೂ ದೈಜಿವರ್ಲ್ಡ್‌ ಸಮೂಹ ಸಂಸ್ಥೆಗಳ ಸಂಸ್ಥಾಪಕ ವಾಲ್ಟರ್‌ ನಂದಳಿಕೆ ವಿರುದ್ಧ ಕುಂಜತ್ತ್‌ಬೈಲ್‌ ನಿವಾಸಿ ಶಿವರಾಜ್‌ ಎಂಬುವವರು ಕಾವೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ದೈಜಿವರ್ಲ್ಡ್‌ ಸುದ್ದಿ ವಾಹಿನಿಯಲ್ಲಿ ಆಗಸ್ಟ್‌ 9ರಂದು ಪ್ರಸಾರವಾದ ‘ಪ್ರೈವೇಟ್‌ ಚಾಲೆಂಜ್‌’ ಕಾರ್ಯಕ್ರಮದಲ್ಲಿ ಕಪಟ ಜೋತಿಷಿಗಳ ಕುರಿತು ಕಾರ್ಯಕ್ರಮದ ನಿರೂಪಕರಾಗಿದ್ದ ವಾಲ್ಟರ್‌ ನಂದಳಿಕೆ ಹಾಗೂ ಅರವಿಂದ ಬೋಳಾರ್‌ ಚರ್ಚಿಸಿದ್ದರು. ಈ ಸಂದರ್ಭದಲ್ಲಿ ಜೋತಿಷಿಗಳನ್ನು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಅಸಂಜ್ಞೆಯ ಪ್ರಕರಣ (ಎನ್‌ಸಿ) ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸೂಚಿಸಿದ್ದಾರೆ.

‘ಇಂತಹ ಪ್ರಕರಣಗಳಲ್ಲಿ ನೇರವಾಗಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಲು ಸಾಧ್ಯವಿಲ್ಲ. ದೂರಿನಲ್ಲಿರುವ ವಿಚಾರದ ಕುರಿತು ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸೂಚಿಸಲಾಗಿದೆ. ಈವರೆಗೂ ಅವರು ಬಂದಿಲ್ಲ. ಮುಂದೆ ಅಗತ್ಯ ಕಂಡುಬಂದಲ್ಲಿ ನ್ಯಾಯಾಲಯದ ಆದೇಶ ಪಡೆದು ಎಫ್‌ಐಆರ್‌ ದಾಖಲಿಸಬೇಕಾಗುತ್ತದೆ’ ಎಂದು ಕಾವೂರು ಠಾಣೆ ಇನ್‌ಸ್ಪೆಕ್ಟರ್‌ ರಾಘವ ಪಡೀಲ್‌ ತಿಳಿಸಿದರು.

ಬೋಳಾರ್‌ಗೆ ಬೆಂಬಲ: ಪ್ರಕರಣದ ಕುರಿತು ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ಜನರು ನಟ ಅರವಿಂದ ಬೋಳಾರ್‌ ಬೆಂಬಲಕ್ಕೆ ನಿಂತಿದ್ದು, ‘ವಿ ಆರ್‌ ವಿತ್‌ ಬೋಳಾರ್‌’ ಎಂಬ ಹ್ಯಾಷ್‌ ಟ್ಯಾಗ್‌ ಮೂಲಕ ಅವರ ಪರವಾಗಿ ಸಂದೇಶಗಳನ್ನು ಹಾಕುತ್ತಿದ್ದಾರೆ.

ವಿಎಚ್‌ಪಿ ಮುಖಂಡರ ಭೇಟಿ: ಅರವಿಂದ ಬೋಳಾರ್‌ ಅವರು ಮಂಗಳವಾರ ಸಂಜೆ ನಗರದ ವಿಶ್ವ ಹಿಂದೂ ಪರಿಷತ್‌ (ವಿಚ್‌ಪಿ) ಕಚೇರಿಗೆ ತೆರಳಿ ಸಂಘಟನೆಯ ಮುಖಂಡರೊಂದಿಗೆ ಚರ್ಚಿಸಿದ್ದಾರೆ. ‘ಅರವಿಂದ ಬೋಳಾರ್‌ ಅವರು ಕ್ಷಮೆ ಕೋರಿದ್ದಾರೆ’ ಎಂದು ವಿಎಚ್‌ಪಿ ವಿಭಾಗೀಯ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದ್ದಾರೆ. ಆದರೆ, ಕ್ಷಮೆ ಕೇಳಿರುವ ಕುರಿತು ಬೋಳಾರ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು