ಉಪ್ಪಿನಂಗಡಿ: ಇಲ್ಲಿನ ಶಿಬಾಜೆ ಸರ್ಕಾರಿ ರಕ್ಷಿತಾರಣದಲ್ಲಿ ಮರಗಳ ಮಾರಣ ಹೋಮ, ಅವ್ಯಾಹತವಾಗಿ ನಡೆಯುತ್ತಿರುವ ಮರ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪೂರಕ ಮಾಹಿತಿ ನೀಡಿದ ಶಿಬಾಜೆ ಗ್ರಾಮದ ನಿವಾಸಿ ಕುರಿಯಾಕೋಸ್ ಅವರ ನಿವಾಸಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ, ಅರಣ್ಯ ಸಚಿವರಿಗೆ ದೂರು ನೀಡಲಾಗಿದೆ.
ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗೆ ಕುರಿಯಾಕೋಸ್ ಪೂರಕ ಮಾಹಿತಿ ನೀಡಿದ್ದರು. ‘ಗುರುವಾರ ಮಧ್ಯಾಹ್ನ ವಾಹನದಲ್ಲಿ ಬಂದ ಅರಣ್ಯ ಅಧಿಕಾರಿಗಳು ನನ್ನನ್ನು ಮನೆಯಿಂದ ಹೊರಗೆ ಕರೆದು ಮರಗಳ್ಳತನದ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿರುವ ಕಾರಣಕ್ಕೆ ಬೆದರಿಸುವ ರೀತಿಯಲ್ಲಿ ಆಕ್ಷೇಪಾರ್ಹ ಮಾತುಗಳನ್ನಾಡಿ, ಇನ್ನು ಮುಂದೆ ಮರಕಳ್ಳತನ ಆಗುವ ಬಗ್ಗೆ ಮಾಹಿತಿ ಬಂದಲ್ಲಿ ನಮಗೆ ತಿಳಿಸಿ, ಪತ್ರಿಕೆಯವರಿಗೆ ತಿಳಿಸಬೇಡಿ ಎಂದು ನನ್ನ ಫೋಟೊ ತೆಗೆದುಕೊಂಡು ಹೋಗಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
‘ಪತ್ರಿಕೆಯಲ್ಲಿ ಬಂದ ಮರಗಳ್ಳತನದ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಅದರ ಸಲುವಾಗಿ ಅವರಲ್ಲಿ ಇನ್ನಷ್ಟು ಮಾಹಿತಿ ಇದ್ದರೆ ತಿಳಿದುಕೊಳ್ಳುವ ಸಲುವಾಗಿ ಗ್ರಾಮಸ್ಥ ಕುರಿಯಕೋಸ್ ಅವರನ್ನು ಭೇಟಿ ಮಾಡಲಾಗಿದೆ. ನಾವು ಅವರಿಗೆ ಬೆದರಿಕೆ ಹಾಕಿಲ್ಲ’ ಎಂದು ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.