ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲಿನ ಅಲೆಯ ಮೇಲೆ ವಿಚಾರಗೋಷ್ಠಿ: ಪ್ರಕೃತಿಯ ಮಡಿಲಲ್ಲಿ ಪಡವುದಪ್ಪೆನ ಆರಾಧನೆ

Last Updated 21 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಮಂಗಳೂರು: ಹಳೆ ಬಂದರು ಪ್ರದೇಶಕ್ಕೆ ಕಾಲಿಟ್ಟಾಗ ಬೆಳಿಗ್ಗೆ 10 ಗಂಟೆ. ಬೆಳಗಿನ ಚುರುಕು ಬಿಸಿಲ ಜತೆಗೆ ಮೀನಿನ ಸುವಾಸನೆಯ ತಂಗಾಳಿ ಮೂಗಿಗೆ ಬಡಿಯಿತು. ಕತ್ತು ಹೊರಳಿಸಿ ಅತ್ತಿತ್ತ ದೃಷ್ಟಿ ಹಾಯಿಸಿದರೆ ಹಸಿರು ಬಣ್ಣದಲ್ಲಿ ಕಂಗೊಳಿಸುತ್ತಿದ್ದ ಗುರುಪುರ ನದಿಯ ಚೆಲುವು ಕಂಡಿತು. ಲಂಗರು ಹಾಕಿ ನಿಲ್ಲಿಸಿದ್ದ ರಾಣಿ ಅಬ್ಬಕ್ಕ ಕ್ರೂಸ್‌ನ ಮೇಲ್ಭಾಗದಲ್ಲಿ ‘ಕಡಲ ಜಾನಪದ ವಿಚಾರಗೋಷ್ಠಿಯ’ ಕೊನೆ ಕ್ಷಣದ ಸಿದ್ಧತೆಗಳು ಭರದಿಂದ ಸಾಗಿದ್ದವು.

‘ಕಡಲು’ ಮತ್ತು ‘ಹಡಗು’ ಈ ಎರಡೂ ವಿಚಾರಗಳ ಬಗ್ಗೆ ಮಾತನಾಡುವ, ಚರ್ಚಿಸುವ ವಿಚಾರಗೋಷ್ಠಿಯನ್ನು ಹಡಗಿನಲ್ಲಿ ಕುಳಿತು, ಕಡಲಿನಲ್ಲಿ ತೇಲುತ್ತಾ ಕೇಳುವ ಅವಕಾಶವನ್ನು ತುಳು ಸಾಹಿತ್ಯಪ್ರೇಮಿಗಳಿಗೆ ಒದಗಿಸಿಕೊಟ್ಟಿದ್ದು ಮಂಗಳೂರಿನ ತುಳು ಪರಿಷತ್‌. ಹಾಗಾಗಿ, ಇದೊಂದು ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮ ಎನ್ನಲು ಅಡ್ಡಿ ಇಲ್ಲ. ಇದಕ್ಕೆ ಮಂಗಳೂರು ವಿವಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ವಿವಿ ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಕೈಜೋಡಿಸಿದ್ದವು.

ಹೊಸತೊಂದು ಅನುಭವವನ್ನು ಎದೆಗೆ ಇಳಿಸಿಕೊಳ್ಳುವ ತವಕ ಅಲ್ಲಿ ಸೇರಿದ್ದ ಎಲ್ಲ ಜನರ ಕಣ್ಣುಗಳಲ್ಲೂ ಮಡುಗಟ್ಟಿತ್ತು. ಕಾತರ ಕೈಗೂಡುವ ಸಮಯ ಸಮೀಪಿಸಿತು. ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ್‌ ರಾವ್‌ ‘ಕಡಲ್ದ ಬಗೆಟ್‌ ಪಾತೆರಕತೆ’ಗೆ ಚಾಲನೆ ನೀಡಿದರು. ಅದೇ ಸಮಯಕ್ಕೆ ಪುಟ್ಟ ಹಡಗಿನ ಲಂಗರು ಬಿಚ್ಚಿಕೊಂಡಿತು. ಗಣೇಶ್‌ ರಾವ್‌ ಅವರ ಸ್ಫೂರ್ತಿದಾಯಕ ಮಾತಿಗೆ ಹಡಗಿನ ಚಲನೆಯೂ ಜತೆಯಾಗಿ ಕೇಳುಗರ ಮೈ ಮನಸ್ಸು ಪುಳಕಗೊಂಡಿತು. ಸಾಹಿತ್ಯ ‍ಪ್ರೇಮಿಗಳ ಉತ್ಸಾಹಕ್ಕೆ ಮಂಗಳೂರು ವಿವಿ ಕುಲಸಚಿವ ಪ್ರೊ. ಎ.ಎಂ.ಖಾನ್‌, ಎಸ್‌ಸಿಡಿಸಿಸಿ ಬ್ಯಾಂಕ್‌ ಸಿಇಒ ಬಿ.ರವೀಂದ್ರ ಅವರ ಮಾತುಗಳು ಇಂಧನ ತುಂಬಿದವು.

ನಮ್ಮ ದೇಶದ ಬಹುಭಾಗ ಕಡಲಿನಿಂದ ಆವೃತ್ತವಾಗಿದೆ. ನಮ್ಮ ಜನರ ಬದುಕು ಕಡಲಿನೊಟ್ಟಿಗೆ ಹೊಂದಿಕೊಂಡಿದೆ. ಕಡಲಿನ ಜತೆಗೆ ವ್ಯವಹಾರ ನಡೆಸುವುದರ ಜತೆಗೆ ಭಾವನಾತ್ಮಕ ನಂಟೂ ಉಂಟು! ಆದರೂ, ಭಾರತೀಯ ಸಾಹಿತ್ಯ ಪರಂಪರೆ ಅಥವಾ ಜಾನಪದದಲ್ಲಿ ಕಡಲಿನ ಬಗ್ಗೆ ಬಂದಿರುವಂತಹ ಪ್ರಕಟಣೆಗಳು, ಸಾಹಿತ್ಯ ತುಂಬ ಕಡಿಮೆ.

‘ಕಡಲಿನ ಜತೆಗೆ ಉಸಿರಾಡುತ್ತಿರುವವರ ಜ್ಞಾನ ಭಂಡಾರ, ಜಾನಪದ ನಂಬಿಕೆಗಳು, ಆಚರಣೆ, ದಿನಚರಿಗಳು ಇವೆಲ್ಲವೂ ನಮಗೆ ಸಾಹಿತ್ಯದ ಸ್ವರೂಪದಲ್ಲಿ ಸಿಗುವುದಿಲ್ಲ. ಸಿಕ್ಕರೂ ಅತ್ಯಂತ ಕಡಿಮೆ. ಈ ಒಂದು ವಿಚಾರವನ್ನು ನಮ್ಮ ಜನರ ಜತೆಗೆ ಪುನರ್‌ ಮನನ ಮಾಡಬೇಕು, ಅದು ಚರ್ಚೆಗೆ ಒಳಗಾಗಬೇಕು ಮತ್ತು ಅದು ಹೊರ ಜಗತ್ತಿಗೆ ತಿಳಿಸಬೇಕು ಎಂಬ ಆಶಯದಿಂದ ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸಿದ್ದೇವೆ’ ಎಂದರು ತುಳು ಪರಿಷತ್‌ ಅಧ್ಯಕ್ಷ ತಾರನಾಥ್‌ ಗಟ್ಟಿ ಕಾಪಿಕಾಡ್‌.

ಮಲಬಾರ್‌ ಪ್ರಾಂತ್ಯದ ಕಡಲು ಅಥವಾ ಹಡಗಿನಲ್ಲಿ ಹುಟ್ಟಿಕೊಂಡಂತಹ ಒಂದು ದೈವ ಇದೆ. ಅದಕ್ಕೆ ತುಳುವಿನಲ್ಲಿ ಪಡವುದಪ್ಪೆನ, ಮಲಯಾಳಂನಲ್ಲಿ ಮರಕಲತಮ್ಮ ಎಂದು ಹೇಳುತ್ತಾರೆ. ಪಡವು ಅಂದರೆ ಹಡಗು. ಹಡಗಿನಲ್ಲಿ ಹುಟ್ಟಿಕೊಂಡಂತ ದೈವ ಪಡವುದಪ್ಪೆ. ಕರಾಳಿಯಲ್ಲಿ ಭೂತಾರಾಧನೆಯನ್ನು ಕೇರಳದಲ್ಲಿ ತೆಯ್ಯಂ ಅನ್ನುತ್ತಾರೆ, ಇವೆರಡಕ್ಕೂ ಸಾಮ್ಯತೆ ಇದೆ. ಅಲ್ಲಿಯ ಆಚರಣೆಯನ್ನು ಅಧ್ಯಯನ ಮಾಡಿ, ಮಾಹಿತಿ ಸಂಗ್ರಹಿಸಿ ಕೇರಳ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಕಟಿಸಿತ್ತು. ಅದನ್ನು ಡಾ. ಕೆ.ಎಂ.ರಾಘವ ನಂಬಿಯಾರ್‌ ಅವರು ತುಳುವಿಗೆ ಭಾಷಾಂತರ ಮಾಡಿ ‘ಪಡವುದಪ್ಪೆನ ಪಾರ್ದನ’ ಪುಸ್ತಕವನ್ನು ಹೊರತಂದಿದ್ದಾರೆ. ಇಂಹತದ್ದೊಂದು ಪುಸ್ತಕ ಬಂದಿದೆ ಎಂಬ ವಿಚಾರವೇ ಹೊರ ಜಗತ್ತಿಗೆ ತಿಳಿದಿಲ್ಲ. ಹಾಗಾಗಿ, ಈ ಬಗ್ಗೆ ಚರ್ಚೆ ಮಾಡಬೇಕು, ತುಳುವರಿಗೆ ತಿಳಿಸಬೇಕು ಎಂಬ ಹಿನ್ನೆಲೆಯಲ್ಲಿ ‘ಪಡವುದಪ್ಪೆನ ಪಾರ್ದನ’ ಪರಿಚಯ ಗೋಷ್ಠಿಯಲ್ಲಿ ವಿದ್ವಾಂಸ ಡಾ. ಕೆ.ಎಂ.ರಾಘವ ನಂಬಿಯಾರ್‌ ವಿಚಾರ ಮಂಡಿಸಿದರು.

‘ಹಳೆ ಕಾಲದ ಕಡಲ ಬದುಕಿನ ತಂತ್ರಜ್ಞಾನ’ದ ಬಗ್ಗೆ ವಿಚಾರ ಮಂಡಿಸಿದ ಎಂಆರ್‌ಪಿಎಲ್‌ನ ರುಡಾಲ್ಛ್‌ ಜೆ. ನೊರೋನ್ಹಾ ಅವರು ‘ಎ ಹಿಸ್ಟರಿ ಆಫ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಆಫ್‌ ತುಳುನಾಡು ಡ್ಯೂರಿಂಗ್‌ ಕಲೋನಿಯಲ್‌ ಪಿರೇಡ್‌’ ಎಂಬ ವಿಚಾರವಾಗಿ ಅಧ್ಯಯನ ಮಾಡಿದ್ದಾರೆ. ಅವರ ಸಂಶೋಧನೆಯ ವಿಚಾರಗಳು ಕಡಲ ಬದುಕಿನ ಬಗ್ಗೆ ಬೆಳಕು ಚೆಲ್ಲಿ ಕೇಳುಗರ ಜ್ಞಾನ ಭಂಡಾರವನ್ನು ಹಿಗ್ಗಿಸಿದವು.

‘ಕಡಲ ತೀರದಿ ನಿಂತು, ಅಲೆಗಳ ಜೊತೆ ಮಾತಿಗಿಳಿಯೋಣ... ಒಂದೊಂದು ಅಲೆಗಳಿಗೂ ನಮ್ಮ ಪ್ರೀತಿ ಹಂಚೋಣ’ ಎಂಬ ಕವಿ ಧ್ವನಿಯಂತೆ ಪರುಶುರಾಮ ಸೃಷ್ಟಿಯ ಕರಾವಳಿಯ ಸುಂದರ ಪರಿಸರದಲ್ಲಿ, ಅರಬ್ಬಿ ಸಮುದ್ರದ ಸೆರಗಿನಲ್ಲಿ ಆಯೋಜಿಸಿದ್ದ ‘ಕಡಲ ಜಾನಪದ ವಿಚಾರಗೋಷ್ಠಿ’ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತ್ಯಾಸಕ್ತರು ಮಾಹಿತಿಯ ಹೂರಣದ ಜತೆಗೆ ಸುಮಧುರ ನೆನಪುಗಳನ್ನೂ ಎದೆಗಿಳಿಸಿಕೊಂಡು ಮನೆಗೆ ತೆರಳಿದರು.

‘ಪಾತೆರಕತೆ’ ಜತೆಗೆ ಹಡಗು ಸಾಗಿದ ಹಾದಿ

ಶುಕ್ರವಾರ ಬೆಳಿಗ್ಗೆ 10ಕ್ಕೆ ಹಳೆ ಬಂದರಿನಿಂದ ಹೊರಟ ರಾಣಿ ಅಬ್ಬಕ್ಕ ಕ್ರೂಸ್‌ ಅಳಿವೆ ಬಾಗಿಲು ಮೂಲಕ ಬೋಳಾರ ದಾಟಿ ಉಳ್ಳಾಲ ಬ್ರಿಡ್ಜ್‌ ಬಳಿ ಇರುವ ರಿವರ್‌ ಡೆಲ್‌ (ಜಪ್ಪಿನ ಮೊಗರು) ತಿರುವು ಪಡೆದುಕೊಂಡು ಮತ್ತೆ ಹಳೆ ಬಂದರಿಗೆ ಬಂದು ಲಂಗರು ಹಾಕಿತು. ಈ ಅವಧಿಯಲ್ಲಿ ಹಡಗು ಕ್ರಮಿಸಿದ ದೂರ 10 ಕಿ.ಮೀ. ಈ ಹಡಗು ಗಂಟೆಗೆ 10 ನಾಟಿಕಲ್‌ ಮೈಲಿ ವೇಗದಲ್ಲಿ ಸಾಗಿತು.

ಅಲ್ಪ ವಿಶ್ರಾಂತಿ ಬಳಿಕ ಲಂಗರು ಬಿಚ್ಚಿದ ಹಡಗು ಕುದ್ರೋಳಿ, ಸುಲ್ತಾನ್‌ ಬತ್ತೇರಿ ಮಾರ್ಗವಾಗಿ ತಣ್ಣೀರು ಬಾವಿ ತಲುಪಿ ಹಳೆ ಬಂದರಿಗೆ ವಾಪಾಸಾಯಿತು.

ಗುರುಪುರ ನದಿ, ನೇತ್ರಾವತಿ ನದಿ ಮತ್ತು ಅರಬ್ಬಿ ಸಮುದ್ರ ಸಂಧಿಸುವ ಜಾಗವನ್ನು ಕಣ್ತುಂಬಿಕೊಂಡ ಅನೇಕರು ವ್ಹಾವ್‌! ಎಂಬ ಉದ್ಗಾರವನ್ನು ಹೊರ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT