ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ, ಟೈರ್ ಸುಟ್ಟು ರಾಜ್ಯಪಾಲರ ವಿರುದ್ಧ ಆಕ್ರೋಶ ಹೊರಹಾಕಿದರು. ಸಿಟಿ ಬಸ್‌ಗೆ ಕಲ್ಲು ತೂರಿದರು.
ನಾರಾಯಣಗುರು ವೃತ್ತದಿಂದ ಲಾಲ್‌ಬಾಗ್ ಪಾಲಿಕೆ ಕಚೇರಿ ವರೆಗೆ ಸಾಗಿಬಂದ ಮೆರವಣಿಗೆ ಶಾಂತಿಯುತವಾಗಿಯೇ ನಡೆದಿತ್ತು. ಪಾಲಿಕೆ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಪ್ರಕಾಶ ಕೆ. ರಾಠೋಡ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ, ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ರೈ, ಪದ್ಮರಾಜ ಅರ್.ಪೂಜಾರಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಮತ್ತಿತರರು ಮಾತನಾಡಿದರು. ಪ್ರತಿಭಟನೆಯ ಕೊನೆಯ ಹಂತದಲ್ಲಿ ಕಾರ್ಯಕರ್ತರು ಏಕಾಏಕಿ ರಸ್ತೆಗೆ ನುಗ್ಗಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು.
ಒಂದೆಡೆ ಪಕ್ಷದ ಮುಖಂಡರು ಭಾಷಣ ಮಾಡುತ್ತಿದ್ದಂತೆಯೇ, ಯುವ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಇನ್ನೊಂದು ಕಡೆ ಕೆಲ ಕಾರ್ಯಕರ್ತರು ಟೈರ್‌ಗಳಿಗೆ ಬೆಂಕಿ ಹಚ್ಚಿದರು. ತಕ್ಷಣವೇ ಡಿಸಿಪಿ ಸಿದ್ದಾರ್ಥ ಗೋಯಲ್ ನೇತೃತ್ವದಲ್ಲಿ ಪೊಲೀಸರು ಬೆಂಕಿಯನ್ನು ನಂದಿಸಿದರು. ಚೆಂಕಿ ಹಚ್ಚಲು ತಂದಿದ್ದ ಇನ್ನಷ್ಟು ಟೈರ್‌ಗಳನ್ನು ಹಾಗೂ ಇಂಧನವನ್ನು ವಶಕ್ಕೆ ಪಡೆದರು.
ರಸ್ತೆಯಲ್ಲಿ ಮಲಗಿ 'ಅಯ್ಯಯ್ಯೋ ಗೆಹಲೋತ್... ಔಟ್ ಔಟ್ ಗೆಹಲೋತ್' ಎಂದು ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದರು. ಸ್ವಲ ಹೊತ್ತಿನಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಮತ್ತೊಂದು ಗುಂಪು ರಸ್ತೆ ತಡೆ ನಡೆಸಿತು. ಪ್ರತಿಭಟನೆಯಿಂದಾಗಿ ಸುಮಾರು ಅರ್ಧ ಗಂಟೆ ಕಾಲ ವಾಹನ ಸಂಚಾರ ವ್ಯತ್ಯಯ ಉಂಟಾಯಿತು.
ಪ್ರತಿಭಟನೆಯಲ್ಲಿ ಮಾಥನಾಡಿದ ಪ್ರಕಾಶ ಕೆ. ರಾಠೋಡ, ‘ರಾಜ್ಯಪಾಲರು ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳಂಕ ತರಿಸಲು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸಿದ್ದಾರೆ. ರಾಜ್ಯದ ಜನತೆಗೆ, ಸಂವಿಧಾನಕ್ಕೆ ಅಪಮಾನಮಾಡಿದ್ದಾರೆ’ ಎಂದು ಆರೋಪಿಸಿದರು.
ಬಿ.ರಮಾನಾಥ ರೈ, ‘ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಹೈಕಮಾಂಡ್ ಸೇರಿದಂತೆ ನಾವೆಲ್ಲರೂ ಸಿದ್ದರಾಮಯ್ಯ ಅವರ ಜೊತೆ ಇದ್ದೇವೆ’ ಎಂದರು.
ಮಿಥುನ್ ರೈ, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಿಗೆ ತಾಕತ್ತು ದಮ್ಮು ಇದ್ದರೆ ಅದಾನಿ ಅಂಬಾನಿಯಂತಹ ಬಂಡವಾಳಶಾಹಿಗಳ ಪರ ವಹಿಸುವ ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಯನ್ನು ಮೊದಲು ಕೇಳಲಿ. ಇವತ್ತಿನದು ಸಾಂಕೇತಿಕ ಪ್ರತಿಭಟನೆ. ಮುಂದಿನ ದಿನಗಳಲ್ಲಿ ರಾಜ್ಯಪಾಲರಿಗೆ ಘೆರಾವ್ ಹಾಕಲಿದ್ದೇವೆ’ ಎಂದರು.
ಸಂಭ್ರಮಾಚರಣೆ: ಸಿದ್ದರಾಮಯ್ಯ ವಿರುದ್ಧ ತಕ್ಷಣ ಯಾವುದೇ ಕ್ರಮ ಕೈಗೊಳ್ಳದಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶ ನಿಡಿದ್ದನ್ನು ಸ್ವಾಗತಿಸಿ ಕಾಂಗ್ರೆಸ್ ಕಾರ್ಯಕರ್ತರು ಮಲ್ಲಿಕಟ್ಟೆಯಲ್ಲಿರುವ ಪಕ್ಷದ ಕಚೇರಿ ಎದುರು ಸೋಮವಾರ ಸಂಜೆ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.
- ಬಸ್‌ಗೆ ಕಲ್ಲು– ಪ್ರಯಾಣಿಕ ಮಹಿಳೆಗೆ ಗಾಯ
ಈ ವೇಳೆ ರಸ್ತೆಯಲ್ಲಿ ಸಾಗಿಬಂದ 'ಮೌಲಾ' ಸಿಟಿಬಸ್‌ಗೆ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದು ಬಸ್ ಒಳಗಿದ್ದ ಮಹಿಳಾ ಪ್ರಯಾಣಿಕರೊಬ್ಬರು ಗಾಯಗೊಂಡರು. ಸ್ಥಳದಲ್ಲಿದ್ದ ಕೆಲವರು ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಆ ಬಸ್‌ನ ಎದುರು ಭಾಗದ ಗಾಜು ಪುಡಿಯಾಯಿತು. ಸ್ಟೇಟ್ ಬ್ಯಾಂಕ್ ನಿಂದ ಜೋಕಟ್ಟೆಗೆ ಹೋಗುವ ಆ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್‌ನಲ್ಲಿ ಕಳುಹಿಸಿದರು. ಕಲ್ಲು ತೂರಾಟ ನಡೆಸಿದವರನ್ನು ಕಾಂಗ್ರೆಸ್ ಪ್ರಮುಖರೇ ತರಾಟೆಗೆ ತೆಗೆದುಕೊಂಡರು. ಮೂವರ ಬಂಧನ: ‘ ಬಸ್‌ಗೆ ಕಲ್ಲು ತೂರಾಟ ನಡೆಸಿದ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಶಾಹುಲ್ ಹಮೀದ್ ಅನ್ವರ್ ಹಾಗೂ ಕಿಶೋರ್ ಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ. ಕಲ್ಲು ತೂರಾಟದಿಂದ ಗಾಯಗೊಂಡ ಮಹಿಳೆ ಚಿಕಿತ್ಸೆ ಪಡೆದು ಮರಳಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದರು.
ಐವನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ದೂರು
‘ಸಂವಿಧಾನದಡಿ ಪ್ರಮಾಣ ವಚನ ಸ್ವೀಕರಿಸಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ‘ರಾಜ್ಯಪಾಲರ ಮನೆಗೆ ನುಗ್ಗುತ್ತೇವೆ’ ಎಂದು ಹೇಳಿಕೆ ನೀಡಿದ್ದು ಅವರ ವಿರುದ್ದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿ ಬಿಜೆಪಿ ಮುಖಂಡರ ನಿಯೋಗವು ನಗರ ಪೊಲೀಸ್ ಕಮಿಷನರ್‌ಗೆ ದೂರು ನೀಡಿತು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಶಾಸಕರಾದ ವೇದವ್ಯಾಸ ಕಾಮತ್ ಡಾ. ವೈ.ಭರತ್ ಶೆಟ್ಟಿ ಪಾಲಿಕೆ ಸಚೇತಕ ಪ್ರೇಮಾನಂದ ಶೆಟ್ಟಿ ಮತ್ತಿತರರು ನಿಯೋಗದಲ್ಲಿದ್ದರು. ‘ಕಾಂಗ್ರೆಸ್ ಮುಖಂಡರು ದಂಗೆ ಏಳುವಂತೆ ಪ್ರೇರೇಪಿಸಿದ್ದಾರೆ. ಬಸ್ ಹಾಗೂ ಸಾರ್ವಜನಿಕ ಸೊತ್ತುಗಳಿಗೆ ಕಲ್ಲು ತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೂ ತೊಂದರೆ ಉಂಟು ಮಾಡುವ ಮೂಲಕ ಭಯ ಹುಟ್ಟಿಸುವ ರೀತಿ ಗಲಭೆ ನಡೆಸಿದ್ದಾರೆ. ರಾಜ್ಯಪಾಲರು ದಲಿತ ಪಂಗಡಕ್ಕೆ ಸೇರಿದವರಾಗಿದ್ದು ದಲಿತರನ್ನು ದಮನ ಮಾಡಲು ಮತ್ತು ಭಾರತ ದೇಶವನ್ನು ಬಾಂಗ್ಲಾದೇಶದಂತೆ ಛಿದ್ರ ಮಾಡಲು ಹುನ್ನಾರ ನಡೆಸಿದ್ದಾರೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152 ಹಾಗೂ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದ್ದಾರೆ. ಯುವ ಮೋರ್ಚಾ ಪ್ರತಿಭಟನೆ: ಪೊಲೀಸ್ ಇಲಾಖೆ ಕಾಂಗ್ರೆಸ್ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ನಂದನ ಮಲ್ಯ ನೇತೃತ್ವದಲ್ಲಿ ಕಾರ್ಯಕರ್ತರು ಬರ್ಕೆ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.