ಭಾನುವಾರ, ನವೆಂಬರ್ 17, 2019
24 °C
ಅಸಹಾಯಕ ವ್ಯಕ್ತಿಗೆ ₹25 ಸಾವಿರ ನೀಡಿದ ಪೊಲೀಸ್‌ ಕಾನ್‌ಸ್ಟೆಬಲ್‌

ಆರತಕ್ಷತೆ ವೇದಿಕೆಯಲ್ಲಿ ಉಡುಗೊರೆ ಪಡೆಯಬೇಕಾದ ವರ ನೀಡಿದ್ದು ಕೊಡುಗೆ!

Published:
Updated:
Prajavani

ಪುತ್ತೂರು: ತನ್ನ ಮದುವೆ ಮಂಟಪದಲ್ಲಿ ಉಡುಗೊರೆ ಸ್ವೀಕರಿಸುವ ಬದಲಾಗಿ, ಅಸಹಾಯಕರೊಬ್ಬರಿಗೆ ಮನೆ ನಿರ್ಮಿಸಲು ₹25 ಸಾವಿರ ಹಾಗೂ ಸಾಮಗ್ರಿ ನೀಡುವ ಮೂಲಕ ನಗರ ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ರೋಹಿತ್ ಕುಲಾಲ್ ಆದರ್ಶ ಮೆರೆದಿದ್ದಾರೆ.

ಕಡಬ ತಾಲ್ಲೂಕಿನ ರಾಮಕುಂಜ ಗ್ರಾಮದ ಬೊಳ್ಳೆರೋಡಿ ಚೆನ್ನಪ್ಪ ಕುಲಾಲ್ ಮತ್ತು ಹೇಮಾವತಿ ದಂಪತಿ ಪುತ್ರ ರೋಹಿತ್ ಕುಲಾಲ್ ವಿವಾಹವು ಅಮಿತಾ ಜೊತೆಗೆ ಭಾನುವಾರ ಉಪ್ಪಿನಂಗಡಿಯ ಶಕ್ತಿ ಸಭಾಭವನದಲ್ಲಿ ನಡೆಯಿತು. ಈ ಮದುವೆ ಮಂಟಪದಲ್ಲಿ ಬಳ್ಪ ಸಮೀಪದ ಕೇನ್ಯಾ ಗ್ರಾಮದ ನಿವಾಸಿ ಲಿಂಗು ಎಂಬವರಿಗೆ ನೆರವು ನೀಡಲಾಗಿದೆ.

ಲಿಂಗು ಅವರಿಗೆ ದೃಷ್ಟಿ ಹಾಗೂ ಶ್ರವಣ ದೋಷವಿದೆ. ಅಲ್ಲದೇ, ಬಂಧುಗಳು ದೂರವಾಗಿದ್ದು, ಒಬ್ಬಂಟಿಯಾಗಿದ್ದಾರೆ. ಮನೆ ಇಲ್ಲದ ಕಾರಣ, ಟಾರ್ಪಾಲ್‌ ಹಾಕಿದ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.

ಲಿಂಗು ಅವರ ಅತಂತ್ರ ಬದುಕಿನ ವಿಚಾರವನ್ನು ರೋಹಿತ್‌ ಅವರಿಗೆ ಯುವ ಬ್ರಿಗೇಡ್‌ನ ತಿಲಕ್ ತಿಳಿಸಿದ್ದರು. ಅಲ್ಲದೇ, ಲಿಂಗು ಅವರ ಜಾಗದ ದಾಖಲೆಗಳನ್ನು ಸರಿಪಡಿಸಿ, ಡಿಸೆಂಬರ್‌ನಲ್ಲಿ ಅವರಿಗೆ ಮನೆ ನಿರ್ಮಿಸಿ ಕೊಡಲು ಯುವಬ್ರಿಗೇಡ್ ಮುಂದಾಗಿದೆ.

‘ನನಗೆ ಆಡಂಬರದ ವಿವಾಹ ಇಷ್ಟವಿರಲಿಲ್ಲ. ಮದುವೆಯ ಸವಿನೆನಪಿಗಾಗಿ, ಯಾರಿಗಾದರೂ ಸಹಾಯ ಮಾಡಬೇಕು ಎಂಬ ಆಸೆ ಇತ್ತು. ಅದು ಈಗ ಈಡೇರಿದೆ’ ಎಂದು ರೋಹಿತ್ ಕುಲಾಲ್ ಹೇಳುತ್ತಾರೆ. 

ಪ್ರತಿಕ್ರಿಯಿಸಿ (+)