ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾರ್ಶ್ವವಾಯು ಸಮಸ್ಯೆ; ಜನಜಾಗೃತಿ ಅಗತ್ಯ’

ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಶಿವಾನಂದ ಪೈ
Last Updated 20 ಮೇ 2022, 16:29 IST
ಅಕ್ಷರ ಗಾತ್ರ

ಮಂಗಳೂರು: ಅಕ್ಯೂಟ್ ಎಶ್ಚಿಮಿಕ್ ಸ್ಟ್ರೋಕ್ (ಪಾರ್ಶ್ವವಾಯು) ಮಾರಣಾಂತಿಕ ಅಸ್ವಸ್ಥತೆಯಾಗಿದ್ದು, ಈ ಬಗ್ಗೆ ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯವಿದೆ ಎಂದು ನಗರದ ಕೆಎಂಸಿ ಆಸ್ಪತ್ರೆಯ ಸಹ ಪ್ರಾಧ್ಯಾಪಕ, ಸಲಹಾ ವೈದ್ಯ ಡಾ.ಶಿವಾನಂದ ಪೈ ಹೇಳಿದರು.

ನಗರದ ಐಎಂಎ ಸಭಾಂಗಣದಲ್ಲಿ ಮಂಗಳೂರು ಐಎಂಎ ಬುಧವಾರ ರಾತ್ರಿ ಆಯೋಜಿಸಿದ್ದ ನಿರಂತರ ವೈದ್ಯಕೀಯ ಶಿಕ್ಷಣ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.

ಭಾರತದಲ್ಲಿ ಪ್ರತಿ ವರ್ಷ ಒಂದು ಲಕ್ಷ ಮಂದಿಯ ಪೈಕಿ 73 ಮಂದಿ ಪಾರ್ಶ್ವವಾಯು ಸಮಸ್ಯೆಗೆ ತುತ್ತಾಗುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ಇದು ಅಂಗವೈಕಲ್ಯ ಅಥವಾ ಜೀವನ ಪರ್ಯಂತ ಇತರರನ್ನು ಅವಲಂಬಿಸಿ ಇರಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ಪಾರ್ಶ್ವವಾಯು ಪೀಡಿತರನ್ನು ಶೀಘ್ರವಾಗಿ ಆಸ್ಪತ್ರೆಗೆ ಕರೆತಂದಲ್ಲಿ ಅಂಗವೈಕಲ್ಯವನ್ನು ತಡೆಯಬಹುದು ಎಂದು ವಿಶ್ಲೇಷಿಸಿದರು.

ಮುಪ್ಪು, ಧೂಮಪಾನ, ವ್ಯತಿರಿಕ್ತ ಆಹಾರ ಪದ್ಧತಿ ಅನುಸರಿಸುವುದರಿಂದ ಪಾರ್ಶ್ವವಾಯು ಸಾಧ್ಯತೆ ಹೆಚ್ಚುತ್ತದೆ. ರಕ್ತ, ರಕ್ತನಾಳ ಅಥವಾ ದೇಹದ ಇತರ ಪ್ರಮುಖ ಅಂಗಗಳಲ್ಲಿನ ದೋಷ ಪಾರ್ಶ್ವವಾಯುವಿಗೆ ಪ್ರಮುಖ ಕಾರಣ. ಹೃದಯ ಸಮಸ್ಯೆ, ರಕ್ತನಾಳ ಸಮಸ್ಯೆ ಇರುವವರಿಗೆ ಅಪಾಯ ಸಾಧ್ಯತೆ ಅಧಿಕ ಎಂದು ಅಭಿಪ್ರಾಯಪಟ್ಟರು.

ಹಿರಿಯ ವೈದ್ಯ ಡಾ.ಐ.ಜಿ.ಭಟ್ ಗೋಷ್ಠಿಯನ್ನು ನಿರ್ವಹಿಸಿ, ತಮ್ಮ ಸುದೀರ್ಘ ವೃತ್ತಿಜೀವನದ ಅನುಭವದ ಹಿನ್ನೆಲೆಯಲ್ಲಿ ವಿಭಿನ್ನ ರೀತಿಯ ಪಾರ್ಶ್ವವಾಯು ಪ್ರಕರಣಗಳನ್ನು ವಿವರಿಸಿದರು.

ಮಂಗಳೂರು ಐಎಂಎ ಅಧ್ಯಕ್ಷ ಡಾ.ಸತ್ಯಮೂರ್ತಿ ಐತಾಳ್ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಡಾ.ಆನಂದ್ ವೇಣುಗೋಪಾಲ್ ವಿಶೇಷ ಅತಿಥಿಗಳಾಗಿದ್ದರು. ರಾಜ್ಯ ಐಎಂಎ ಉಪಾಧ್ಯಕ್ಷ ಡಾ.ಕೆ.ಆರ್.ಕಾಮತ್, ಮಂಗಳೂರು ಐಎಂಎ ಕಾರ್ಯದರ್ಶಿ ಸದಾನಂದ ಪೂಜಾರಿ, ಖಜಾಂಚಿ ಡಾ.ಜಿ.ಕೆ.ಭಟ್ ಸಂಕಬಿತ್ತಿಲು, ಪಿಆರ್‍ಓ ಡಾ.ಅಣ್ಣಯ್ಯ ಕುಲಾಲ್ ಉಪಸ್ಥಿತರಿದ್ದರು. ಡಾ.ಸುಧೀಂದ್ರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT