ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಂದಾಗ ವದಂತಿ ಸೃಷ್ಟಿಸುವ ಬಿಜೆಪಿ– ಜೆ.ಆರ್‌.ಲೋಬೊ ಆರೋಪ

ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಕಾಂಗ್ರೆಸ್‌ ಮುಖಂಡ ಜೆ.ಆರ್‌..ಲೋಬೊ ಆರೋಪ
Last Updated 29 ನವೆಂಬರ್ 2022, 9:17 IST
ಅಕ್ಷರ ಗಾತ್ರ

ಮಂಗಳೂರು: ‘ನಗರದ ಗರೋಡಿಯಲ್ಲಿ ಇತ್ತೀಚೆಗೆ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣವನ್ನು ಮುಂದಿಟ್ಟುಕೊಂಡು ಊಹಾಪೋಹದ ಸುದ್ದಿಗಳನ್ನು ಹರಡಲಾಗುತ್ತಿದೆ. ಚುನಾವಣೆಗಳು ಬಂದಾಗ ಬಿಜೆಪಿಯವರೇ ಇಂತಹ ವದಂತಿಗಳನ್ನು ಸೃಷ್ಟಿಸುತ್ತಾರೆ’ ಎಂದು ಕಾಂಗ್ರೆಸ್‌ ಮುಖಂಡ ಜೆ.ಆರ್‌.ಲೋಬೊ ಆರೋಪಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಮೊಹಮ್ಮದ್‌ ಶಾರಿಕ್‌ನನ್ನು ವಿಚಾರಣೆಗೆ ಒಳಪಡಿಸಿಲ್ಲ. ಆರೋಪಿಯು ನಿರ್ದಿಷ್ಟ ಪ್ರದೇಶಗಳನ್ನು ಗುರಿಯಾಗಿಸಿದ್ದರ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ನಿಜವಲ್ಲ ಎಂದು ಸ್ವತಃ ಪೊಲೀಸ್‌ ಕಮಿಷನರ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಲ್ಲೂ ಅತಿರಂಜಿತ ಸುದ್ದಿಗಳು ಪ್ರಕಟವಾಗುತ್ತಿವೆ. ಇಂತಹ ಊಹಾಪೋಹದ ಸುದ್ದಿಗಳಿಗೆ ಜನ ಕಿವಿಗೊಡಬಾರದು’ ಎಂದರು.

‘ಸಾಮಾಜಿಕ ಮಾಧ್ಯಮದಲ್ಲಿ ಗರ್ಭಿಣಿಯ ದೇಹಕ್ಕೆ ಚಿರತೆಯ ಮುಖ ಅಂಟಿಸಿದ ಚಿತ್ರ ಪ್ರಕಟಿಸಿದ್ದಕ್ಕೆ ಮಂಗಳೂರು ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದರು. ದೇಶದ ಭದ್ರತೆಗೆ ಸಂಬಂಧಿಸಿ ಊಹಾಪೋಹ ಹಬ್ಬಿಸುತ್ತಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಏಕೆ’ ಎಂದು ಅವರು ಪ್ರಶ್ನಿಸಿದರು.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಪರೇಶ್‌ ಮೇಸ್ತ ಎಂಬ ಯುವಕ ಮೃತಪಟ್ಟಾಗಲೂ ಬಿಜೆಪಿ ಈ ಪ್ರಕರಣವನ್ನು ರಾಜಕೀಯ ದಾಳವನ್ನಾಗಿ ಬಳಸಿದೆ. ವಿವಿಧ ಧರ್ಮಗಳ ಜನ ಸೌಹಾರ್ದದಿಂದ ಬದುಕುವುದನ್ನು ಅವರು ಬಯಸುವುದಿಲ್ಲ’ ಎಂದರು.

’ಇಂತಹ ಬೆಳವಣಿಗೆಯಿಂದ ಇಲ್ಲಿನ ಕೈಗಾರಿಕಾ ಚಟುವಟಿಕೆ, ವ್ಯಾಪಾರ, ವಹಿವಾಟು, ಪ್ರವಾಸೋದ್ಯಮಗಳಿಗೆ ಪೆಟ್ಟು ಬೀಳುತ್ತದೆ. ಇಲ್ಲಿನ ದೇವಸ್ಥಾನಗಳಿಗೆ ಬರಲು ಜನ ಹಿಂದೇಟು ಹಾಕುತ್ತಾರೆ. ಇಲ್ಲಿನ ವಿದ್ಯಾಸಂಸ್ಥೆಗಳಿಗೆ ದಾಖಲಾತಿ ಈಗಾಗಲೇ ಕ್ಷೀಣಿಸಿದೆ. ಇಲ್ಲಿ ಶಿಕ್ಷಣ, ಪ್ರವಾಸೋದ್ಯಮ, ಹಾಗೂ ಸೇವಾಕ್ಷೇತ್ರದ ಉದ್ದಿಮೆಗಳ ಸ್ಥಾಪನೆಗೆ ಇಲ್ಲಿ ಹೇರಳ ಅವಕಾಶಗಳಿದ್ದರೂ ಹೂಡಿಕೆ ಆಗುತ್ತಿಲ್ಲ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಶೃಂಗದಲ್ಲೂ ಹುಬ್ಬಳ್ಳಿ ಧಾರವಾಡ ಪ್ರದೇಶಕ್ಕೆ ಬಂದಷ್ಟು ಹೂಡಿಕೆ ಕರಾವಳಿಯ ಉಭಯ ಜಿಲ್ಲೆಗಳಿಗೆ ಬಂದಿಲ್ಲ’ ಎಂದು ತಿಳಿಸಿದರು.

‘ಕರಾವಳಿಯ ಜನ ಎಚ್ಚೆತ್ತುಕೊಳ್ಳಬೇಕು. ಕರಾವಳಿಯ ಹಿತರಕ್ಷಣೆಯ ಹೊಣೆಯನ್ನು ಜನರೇ ಹೊತ್ತುಕೊಳ್ಳಬೇಕು’ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಶಶಿಧರ್ ಹೆಗ್ಡೆ, ಲುಕ್ಮಾನ್ ಬಂಟ್ವಾಳ, ಅಬ್ದುಲ್ ಸಲೀಮ್, ಶಾಲೆಟ್ ಪಿಂಟೊ, ಅಪ್ಪಿ, ಟಿ. ಕೆ. ಸುಧೀರ್, ಸಂತೋಷ ಶೆಟ್ಟಿ, ಶುಭೋದಯ ಆಳ್ವ, ಪ್ರಕಾಶ್ ಸಾಲ್ಯಾನ್, ಶಾಂತಲಾ ಗಟ್ಟಿ ಇದ್ದರು.

***

‘ಸಮುದಾಯವನ್ನೇ ಸಂಶಯದಿಂದ ನೋಡದಿರಿ’

‘ಯಾರೇ ಭಯೋತ್ಪಾದನಾ ಕೃತ್ಯ ನಡೆಸಿದರೂ ಅದನ್ನು ಖಂಡಿಸಲೇ ಬೇಕು. ಆದರೆ, ಇದನ್ನೇ ಮುಂದಿಟ್ಟುಕೊಂಡು ಒಂದು ಸಮುದಾಯವನ್ನೇ ಸಂಶಯದಿಂದ ನೋಡುವುದು ಸರಿಯಲ್ಲ’ ಎಂದು ಜೆ.ಆರ್‌.ಲೋಬೊ ಹೇಳಿದರು.

‘ಎಂಐಟಿಯಲ್ಲಿ ವಿದ್ಯಾರ್ಥಿಯನ್ನು ಉಪನ್ಯಾಸಕರೇ ಭಯೋತ್ಪಾದಕ ಎಂದು ಜರೆದಿದ್ದಾರೆ. ಸಹಪಾಠಿಗಳು ಬಸ್ಸಿನಲ್ಲಿ ಒಟ್ಟಿಗೆ ಪ್ರಯಾಣಿಸುವಾಗ ನಂತೂರಿನಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಯಿತು. ನಾವು ಎಂಥಹ ಮನಸ್ಥಿತಿಗಳನ್ನು ಸೃಷ್ಟಿಸುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಯಾರೇ ಅಪರಾಧ ಕೃತ್ಯ ನಡೆಸಿದರೂ ಕಠಿಣ ಕ್ರಮ ಕೈಗೊಳ್ಳುವುದು ಪೊಲೀಸ್‌ ಇಲಾಖೆಯ ಜವಾಬ್ದಾರಿ. ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ವಿರುದ್ಧ ಗೋಡೆ ಬರಹ ಪ್ರಕರಣದಲ್ಲೂ, ಭಯೋತ್ಪಾದನಾ ನಿಗ್ರಹಕ್ಕಾಗಿ ರೂಪಿಸಿರುವ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಆ ಬಳಿಕವೂ ಆತನ ಚಟುವಟಿಕೆ ಮೇಲೆ ನಿಗಾ ಇಡದೇ ಇರುವುದು ಸರ್ಕಾರದ ಹಾಗೂ ಪೊಲೀಸ್‌ ಇಲಾಖೆಯ ವೈಫಲ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT