ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಡಳಿತದಿಂದ ಮತ್ತಷ್ಟು ನಿರ್ಬಂಧ

ಮತ್ತೆ ಮೂವರಿಗೆ ಕೋವಿಡ್‌–19 ಸೋಂಕು; 12ಕ್ಕೇರಿದ ರೋಗಿಗಳ ಸಂಖ್ಯೆ
Last Updated 4 ಏಪ್ರಿಲ್ 2020, 16:52 IST
ಅಕ್ಷರ ಗಾತ್ರ

ಮಂಗಳೂರು: ಎರಡು ದಿನಗಳಿಂದ ಯಾವುದೇ ಪ್ರಕರಣಗಳಿಲ್ಲದೇ ನಿರಾಳವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತೆ ಮೂರು ಕೋವಿಡ್‌–19 ಪ್ರಕರಣ ದೃಢಪಟ್ಟಿವೆ. ಇದರಿಂದ ಸೋಂಕಿತರ ಸಂಖ್ಯೆ 12ಕ್ಕೇರಿದೆ.

ಉಡುಪಿ ಜಿಲ್ಲೆಯ 63 ವರ್ಷದ ಮಹಿಳೆ ಮಾರ್ಚ್‌ 21 ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು, ಅವರನ್ನು ನೇರವಾಗಿ ನಗರದ ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿತ್ತು. ಇದೀಗ ಅವರಲ್ಲಿ ಕೋವಿಡ್‌–19 ಸೋಂಕಿರುವುದು ದೃಢಪಟ್ಟಿದೆ.

ಬಂಟ್ವಾಳ ತಾಲ್ಲೂಕಿನ ತುಂಬೆ ಗ್ರಾಮದ 43 ವರ್ಷದ ವ್ಯಕ್ತಿಯೊಬ್ಬರು ಮಾರ್ಚ್‌ 11 ರಂದು ದೆಹಲಿಗೆ ಪ್ರಯಾಣಿಸಿದ್ದು, 22 ರಂದು ಹಿಂದಿರುಗಿದ್ದಾರೆ. ತೊಕ್ಕೊಟ್ಟು ನಿವಾಸಿ 52 ವರ್ಷದ ವ್ಯಕ್ತಿಯೂ ಫೆಬ್ರುವರಿ 6 ರಂದು ಮುಂಬೈಗೆ ತೆರಳಿದ್ದು, ಅಲ್ಲಿಂದ ದೆಹಲಿಗೆ ಪ್ರಯಾಣಿಸಿದ್ದರು. ಮಾರ್ಚ್‌ 20 ರಂದು ದೆಹಲಿಯಿಂದ ಮಂಗಳೂರಿಗೆ ಮರಳಿದ್ದರು. ಈ ಇಬ್ಬರೂ ವ್ಯಕ್ತಿಗಳ ಗಂಟಲು ದ್ರವದ ಮಾದರಿಯನ್ನು ಇದೇ 2 ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಶನಿವಾರ ವರದಿ ಬಂದಿದ್ದು, ಕೋವಿಡ್‌–19 ಸೋಂಕಿರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಕಟ್ಟುನಿಟ್ಟಿನ ಕ್ರಮ: ಜಿಲ್ಲೆಯಲ್ಲಿ 144 ಕಲಂ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದ್ದು, ಎರಡು ದಿನಗಳ ವಿದ್ಯಮಾನಗಳನ್ನು ಅವಲೋಕಿಸಿ ಕೆಲ ನಿರ್ಬಂಧಗಳನ್ನು ವಿಧಿಸಲಾಗಿದೆ.

ಬ್ಯಾಂಕ್‌ಗಳು ತಮ್ಮ ಸಿಬ್ಬಂದಿಯ ಪಟ್ಟಿಯನ್ನು ಹಾಗೂ ಅವರು ಮನೆಯಿಂದ ಬ್ಯಾಂಕ್‌ಗೆ ಹೋಗುವ ರೂಟ್‌ ಮ್ಯಾಪ್‌ ಅನ್ನು ಕಡ್ಡಾಯವಾಗಿ ಸಲ್ಲಿಸಲು ಸೂಚಿಸಲಾಗಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಪಾಸ್‌ ಇಲ್ಲದೇ ಸಂಚರಿಸುತ್ತಿದ್ದಲ್ಲಿ, ಅಂತಹ ವಾಹನಗಳನ್ನು ವಶಕ್ಕೆ ಪಡೆಯಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.

ತುರ್ತು ವೈದ್ಯಕೀಯ ಸೇವೆಗಳಾದ ಡಯಾಲಿಸಿಸ್‌, ಕಿಮೋಥೆರಪಿ ಹಾಗೂ ಗರ್ಭಿಣಿಯರಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಕಂಟ್ರೋಲ್‌ ರೂಂ ಸಂಖ್ಯೆ 1077 ಗೆ ಕರೆ ಮಾಡಿದಲ್ಲಿ ಅಥವಾ ವಾಟ್ಸ್‌ಆ್ಯಪ್‌ ಸಂಖ್ಯೆ 9483908000 ಗೆ ಸಂದೇಶ ಕಳುಹಿಸಿದಲ್ಲಿ, ಒಂದು ದಿನದ ತುರ್ತು ವೈದ್ಯಕೀಯ ಇ–ಪಾಸ್‌ಗಳನ್ನು ವಿತರಿಸಲಾಗುವುದು. ಉಳಿದ ವೈದ್ಯಕೀಯ ಸೇವೆಗಳಿಗೆ 108 ಅಥವಾ 1077 ಗೆ ಕರೆ ಮಾಡಿದಲ್ಲಿ ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗುವುದು.

ಕಾಸರಗೋಡಿನಲ್ಲಿ ಮತ್ತೆ 6 ಪ್ರಕರಣ

ಕೇರಳದ ಇತರ ಜಿಲ್ಲೆಗಳಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದರೂ, ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಏರಿಕೆಯಾಗುತ್ತಿದೆ. ಶನಿವಾರ ಕಾಸರಗೋಡಿನಲ್ಲಿ ಆರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ ಶನಿವಾರ 11 ಮಂದಿಯಲ್ಲಿ ಕೋವಿಡ್–19 ಸೋಂಕು ಪತ್ತೆಯಾಗಿದ್ದು, ಈ ಪೈಕಿ ಆರು ಪ್ರಕರಣ ಕಾಸರಗೋಡು ಜಿಲ್ಲೆಗೆ ಸೇರಿವೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 141 ಕ್ಕೇರಿದೆ. ಕಾಸರಗೋಡಿನ ಸೋಂಕಿತರ ಪೈಕಿ ಮೂವರು ದುಬೈಯಿಂದ ಮತ್ತು ಒಬ್ಬರು ದೆಹಲಿಯಿಂದ ಬಂದವರೆಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT