ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಜಂಟಿ ಸದನ ಸಮಿತಿ ರಚಿಸಿ

ಕೋವಿಡ್‌ ಭ್ರಷ್ಟಾಚಾರ ಆರೋಪ– ಶಾಸಕ ಯು.ಟಿ.ಖಾದರ್ ಆಗ್ರಹ
Last Updated 15 ಜುಲೈ 2020, 17:23 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌–19 ಸೋಂಕು ನಿಯಂತ್ರಣಕ್ಕಾಗಿ ಮಾಸ್ಕ್, ಪಿಪಿಇ ಕಿಟ್‌ ಸೇರಿದಂತೆ ವಿವಿಧ ಸಲಕರಣೆಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪಕ್ಕೆ ಸಂಬಂಧಿಸಿದ ತನಿಖೆಗೆ ವಿಧಾನ ಮಂಡಲದ ಜಂಟಿ ಸದನ ಸಮಿತಿ ರಚಿಸಬೇಕು ಎಂದು ಶಾಸಕ ಯು.ಟಿ. ಖಾದರ್‌ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೈದ್ಯಕೀಯ ಉಪಕರಣಗಳು, ಸುರಕ್ಷಾ ಸಾಧನಗಳು, ಹಾಸಿಗೆಗಳು ಮತ್ತು ಇತರ ಪರಿಕರಗಳ ಖರೀದಿಯಲ್ಲಿ ಬೃಹತ್‌ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಆರೋಪವಿದೆ. ಮಾರುಕಟ್ಟೆಯಲ್ಲಿನ ವಾಸ್ತವಿಕ ದರ ಮತ್ತು ಖರೀದಿ ದರದ ನಡುವಣ ಭಾರಿ ಅಂತರ ಇರುವುದು ಆರೋಪವನ್ನು ಪುಷ್ಟೀಕರಿಸುತ್ತಿದೆ. ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಿದರೆ ಮಾತ್ರ ಸತ್ಯಾಂಶ ಹೊರಬರುತ್ತದೆ’ ಎಂದರು.

ಕೋವಿಡ್‌ ಸೋಂಕಿನಿಂದಾಗಿ ಜನರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಸಂಸ್ಥೆಗಳು ತಮ್ಮ ನೌಕರರಿಗೆ ನೆರವು ಒದಗಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮೂಲಕ ಕೆಲಸ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಜನರ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸುವತ್ತ ಗಮನಹರಿಸಬೇಕು ಎಂದು ಹೇಳಿದರು.

ಗೊಂದಲ ಪರಿಹರಿಸಿ:

‘ಆಧಾರ್‌ ಕಾರ್ಡ್‌ ಹೊಂದಿರುವ ಎಲ್ಲರಿಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗಿದೆ. ಆಧಾರ್‌ ಕಾರ್ಡ್‌ ಹಿಡಿದು ಚಿಕಿತ್ಸೆ ಪಡೆಯಲು ಹೋಗಿದ್ದವರಿಂದ ಆಸ್ಪತ್ರೆಗಳಲ್ಲಿ ₹ 4,000 ದಿಂದ ₹ 5,000ದವರೆಗೂ ಶುಲ್ಕ ಪಡೆಯುತ್ತಿರುವ ದೂರುಗಳಿವೆ. ಈ ಕುರಿತು ಜಿಲ್ಲಾಡಳಿತ ಸ್ಪಷ್ಟನೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆಯಬೇಕು’ ಎಂದು ಖಾದರ್‌ ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಅಬ್ದುಲ್ ಜಬ್ಬಾರ್, ಕಾಂಗ್ರೆಸ್‌ ಮುಖಂಡ ಸದಾಶಿವ ಉಳ್ಳಾಲ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT