ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಅಂತರ ಕಾಯಲು ಮುಂದುವರಿದ ಹರಸಾಹಸ

ದಿನಸಿ, ಔಷಧಿ ಖರೀದಿ ವೇಳೆ ಗುಂಪುಗೂಡುತ್ತಿರುವ ಜನ
Last Updated 27 ಮಾರ್ಚ್ 2020, 16:33 IST
ಅಕ್ಷರ ಗಾತ್ರ

ಮಂಗಳೂರು: ‘ಕೊರೊನಾ’ ವೈರಸ್‌ ಸೋಂಕು ಹರಡುವುದನ್ನು ನಿಯಂತ್ರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರನ್ನು ಮನವೊಲಿಸುವುದರಲ್ಲಿ ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ. ದಿನಸಿ, ಹಾಲು, ತರಕಾರಿ, ಔಷಧಿಯಂತಹ ಅಗತ್ಯ ವಸ್ತುಗಳ ಖರೀದಿ ವೇಳೆ ಜನರು ಗುಂಪುಗೂಡುವುದನ್ನು ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯವೇ ಆಗುತ್ತಿಲ್ಲ.

‘ಕೋವಿಡ್‌– 19’ ಸೋಂಕು ಪ್ರಕರಣಗಳು ದೃಢಪಟ್ಟ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಅವಕಾಶ ನೀಡುವ ನಿರ್ಧಾರ ಮಾರ್ಚ್‌ 24ರಿಂದಲೇ ಜಾರಿಗೆ ಬಂದಿದೆ. ಆದರೆ, ಖರೀದಿ ವೇಳೆ ಜನರು ಗುಂಪುಗೂಡಬಾರದು ಮತ್ತು ಕನಿಷ್ಠ 3 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂಬ ಮಾರ್ಗಸೂಚಿಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ.

ನಗರದಲ್ಲಿ ಹಲವು ದಿನಸಿ ಮಳಿಗೆಗಳು, ಅಂಗಡಿಗಳು, ನಂದಿನಿ ಹಾಲಿನ ಮಾರಾಟ ಕೇಂದ್ರಗಳು, ಔಷಧಿ ಅಂಗಡಿಗಳಲ್ಲಿ ಗ್ರಾಹಕರು ಅಂತರ ಕಾಯ್ದುಕೊಳ್ಳಬೇಕೆಂಬ ಸೂಚನೆಗಳನ್ನು ಪ್ರಕಟಿಸಲಾಗಿದೆ. 3ರಿಂದ 6 ಅಡಿ ಅಂತರದಲ್ಲಿ ವೃತ್ತಾಕಾರ ಮತ್ತು ಚೌಕಾಕಾರದ ಗುರುತುಗಳನ್ನು ಹಾಕಲಾಗಿದೆ. ಈ ಗುರುತುಗಳಲ್ಲಿ ನಿಂತು ಖರೀದಿಗೆ ಕಾಯುವಂತೆ ಸೂಚಿಸಲಾಗಿದೆ. ಆದರೆ, ಖರೀದಿಯ ತರಾತುರಿಯಲ್ಲಿ ಜನರು ಈ ಸೂಚನೆಗಳನ್ನೇ ಮರೆಯುತ್ತಿದ್ದಾರೆ.

ಸರದಿಯನ್ನೇ ಪಾಲಿಸುವುದಿಲ್ಲ

ಬಹುತೇಕ ಅಂಗಡಿಗಳಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಪ್ರಯತ್ನಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಳಿಗೆಗಳ ಸಿಬ್ಬಂದಿ ಪ್ರಯಾಸಪಡುತ್ತಿದ್ದಾರೆ. ಆದರೆ, ಸರದಿಯಲ್ಲಿ ನಿಂತು ಖರೀದಿಸಲು ಜನರು ಆಸಕ್ತಿಯನ್ನೇ ತೋರುತ್ತಿಲ್ಲ. ಸರದಿಯಲ್ಲಿ ನಿಂತವರನ್ನು ಮೀರಿ ಕೌಂಟರ್‌ಗಳತ್ತ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ತಿಳಿಹೇಳಿ ‘ಅಂತರ’ ಕಾಯುವಲ್ಲಿ ಮಳಿಗೆಗಳ ಮಾಲೀಕರು, ಸಿಬ್ಬಂದಿ ಹೈರಾಣಾಗುತ್ತಿದ್ದಾರೆ.

ದಿನಸಿ ಅಂಗಡಿಗಳು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಪೊಲೀಸರು, ಮಹಾನಗರ ಪಾಲಿಕೆ ಮತ್ತು ಇತರ ಸ್ಥಳೀಯ ಆಡಳಿತ ಸಂಸ್ಥೆಗಳ ಸಿಬ್ಬಂದಿ ಖರೀದಿಯ ಅವಧಿಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಂತರ ಕಾಯ್ದುಕೊಳ್ಳಲು ಒಪ್ಪದ ಕೆಲವರಿಗೆ ಲಾಠಿ ಏಟಿನ ರುಚಿಯನ್ನೂ ತೋರಿಸುತ್ತಿದ್ದಾರೆ.

‘ಜಿಲ್ಲಾಡಳಿತದ ಸೂಚನೆಯಂತೆ ನಾವು ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದ್ದೇವೆ. ಗುಂಪಾಗಿ ಖರೀದಿಗೆ ಬಾರದಂತೆ ಜನರಿಗೆ ಸೂಚನೆ ನೀಡಲಾಗುತ್ತಿದೆ. ಕನಿಷ್ಠ ಅಂತರ ಕಾಯ್ದುಕೊಂಡು ಸರದಿಯಲ್ಲಿ ಬರುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಎಲ್ಲವನ್ನೂ ಮೀರಿ ಜನರು ನುಗ್ಗಿ ಬರುತ್ತಾರೆ. ಇದನ್ನು ನಿಯಂತ್ರಿಸುವುದೇ ಕಷ್ಟ’ ಎನ್ನುತ್ತಾರೆ ವ್ಯಾಪಾರಿಗಳು ಮತ್ತು ಮಳಿಗೆಗಳ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT