ಗುರುವಾರ , ಜೂನ್ 4, 2020
27 °C
ಮಂಗಳವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಖರೀದಿಗೆ ಅವಕಾಶ

ಕೊರೊನಾ: ಸೋಮವಾರವೂ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಮೂರನೇ ದಿನವಾದ ಸೋಮವಾರವೂ ಸಂಪೂರ್ಣ ಬಂದ್‌ ಆಚರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಭಾನುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದರು.

ಕೊರೊನಾ ವೈರಸ್‌ ಹರಡದಂತೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಸೋಮವಾರವೂ ಬಂದ್ ಮುಂದುವರಿಯಲಿದೆ. ಆದರೆ, ಮಂಗಳವಾರ (ಇದೇ 31) ಬೆಳಿಗ್ಗೆ 6ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ದಿನಸಿ, ಅಗತ್ಯ ಸಾಮಗ್ರಿಗಳನ್ನು ಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ದಿನಸಿ ಅಂಗಡಿ ಮಂಗಳವಾರ ತೆರೆಯಲಿದ್ದು, ಒಂದು ಕುಟುಂಬದ ಒಬ್ಬರಿಗೆ ಮಾತ್ರ ಸಾಮಗ್ರಿ ಖರೀದಿಸಲು ಹೊರಬರಲು ಅವಕಾಶ ನೀಡಲಾಗುವುದು. ಈ ಸಂದರ್ಭದಲ್ಲಿ ಮಳಿಗೆಯವರು ದಿನಸಿ ಸಾಮಗ್ರಿಗಳಿಗೆ ನಿಗದಿಗಿಂತ ಅಧಿಕ ದರ ವಸೂಲಿ ಮಾಡುವುದು ಕಂಡುಬಂದರೆ ಅಂತಹ ಅಂಗಡಿಗಳ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಎರಡು ದಿನ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು ಸಹಕಾರ ನೀಡಿದ್ದು, ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

2 ತಿಂಗಳ ಮುಂಗಡ ಪಡಿತರ: ಬಿಪಿಎಲ್‌ ಪಡಿತರ ಚೀಟಿದಾರರಿಗೆ ಏಪ್ರಿಲ್ ಹಾಗೂ ಮೇ ತಿಂಗಳ ಪಡಿತರ
ವನ್ನು ಮುಂಗಡವಾಗಿ ವಿತರಿಸಲು ಮುಖ್ಯಮಂತ್ರಿ ಆದೇಶಿಸಿದ್ದು, ಏಪ್ರಿಲ್‌ 2 ರಿಂದ ವಿತರಣೆ ಮಾಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಏಪ್ರಿಲ್‌ 2 ರಿಂದ ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಬೆರಳಚ್ಚು ನೀಡುವ ಮೂಲ ಪಡಿತರ ಪಡೆಯಬಹುದು. ಬಿಪಿಎಲ್‌ ಪಡಿತರ ಚೀಟಿದಾರರು ತಮಗೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಡಿತರ ಪಡೆಯಬೇಕು ಎಂದು ತಿಳಿಸಿದರು.

ನ್ಯಾಯಬೆಲೆ ಅಂಗಡಿಗಳಲ್ಲೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪಡಿತರ ಚೀಟಿದಾರರು ಯಾವುದೇ ಆತಂಕವಿಲ್ಲದೇ ಪಡಿತರ ಪಡೆಯಬಹುದು ಎಂದರು.

ಸಂಸದ ನಳಿನ್‌ಕುಮಾರ್ ಕಟೀಲ್‌, ಶಾಸಕ ಡಿ.ವೇದವ್ಯಾಸ ಕಾಮತ್‌, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಇದ್ದರು.

ಸರ್ಕಾರದಿಂದಲೇ ಊಟ, ಉಪಾಹಾರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಾಶ್ರಿತರು, ಕೂಲಿಕಾರ್ಮಿಕರು, ಭಿಕ್ಷುಕರಿಗೆ ಸರ್ಕಾರದ ವತಿಯಿಂದ ಊಟ, ಉಪಾಹಾರ ಒದಗಿಸಲಾಗುವುದು. ಕಾರ್ಮಿಕ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ಈ ಜವಾಬ್ದಾರಿ ವಹಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಎ ದರ್ಜೆಯ ದೇವಸ್ಥಾನಗಳು ಹಾಗೂ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಆಹಾರವನ್ನು ನೀಡಲಾಗುವುದು. ಸಂಘ–ಸಂಸ್ಥೆಗಳಿಗೆ ಈಗಾಗಲೇ ಆಹಾರ ವಿತರಿಸಲು ನೀಡಲಾಗಿದ್ದ ಪಾಸ್‌ಗಳನ್ನು ರದ್ದುಪಡಿಸಿ, ಸರ್ಕಾರದಿಂದಲೇ ಈ ವ್ಯವಸ್ಥೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು