ಬುಧವಾರ, ಮಾರ್ಚ್ 3, 2021
22 °C

ವಿದೇಶದಲ್ಲಿರುವವರನ್ನು ಉಚಿತವಾಗಿ ಕರೆ ತನ್ನಿ: ಕೆಪಿಸಿಸಿ ವಕ್ತಾರ ಪಿ.ವಿ.ಮೋಹನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಗೂಡಿ ಉಚಿತವಾಗಿ ದೇಶಕ್ಕೆ ಕರೆತರಬೇಕು. ಇಂತಹ ಸಂಕಷ್ಟದ ಸಮಯದಲ್ಲಿ ಅವರಿಂದ ವೆಚ್ಚ ವಸೂಲಿ ಮಾಡಬಾರದು ಎಂದು ಕೆಪಿಸಿಸಿ ವಕ್ತಾರ ಪಿ.ವಿ.ಮೋಹನ್‌ ಒತ್ತಾಯಿಸಿದ್ದಾರೆ.

‘ವಲಸೆ ಕಾರ್ಮಿಕರನ್ನು ಊರಿಗೆ ಮರಳಿಸುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಮಾನವೀಯವಾಗಿ ನಡೆದುಕೊಂಡಿವೆ. ಇದರಿಂದ ಆ ಕಾರ್ಮಿಕರು ಸಂಕಷ್ಟ ಅನುಭವಿಸಿದ್ದಾರೆ. ವಿದೇಶಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಯಾತ್ರಿಕರು, ವಿದ್ಯಾರ್ಥಿಗಳು ಮತ್ತು ಕೆಲಸ ಕಳೆದುಕೊಂಡಿರುವವರ ವಿಚಾರದಲ್ಲೂ ಅದೇ ರೀತಿ ವರ್ತಿಸಬಾರದು. ಸಂಕಷ್ಟಕ್ಕೆ ಸಿಲುಕಿರುವವರೇ ವಿಮಾನ ಪ್ರಯಾಣದ ವೆಚ್ಚವನ್ನು ಭರಿಸಬೇಕೆಂಬ ನಿರ್ಧಾರವನ್ನು ಕೈಬಿಡಬೇಕು’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ವಿದೇಶದಲ್ಲಿ ಸಿಲುಕಿರುವವರನ್ನು ಕರೆತರುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ. ರಾಜ್ಯಕ್ಕೆ 12,000 ಜನರು ಮರಳುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ. ಆದರೆ, ಸಚಿವ ಸುರೇಶ್‌ಕುಮಾರ್‌ ಅವರು 10,823 ಮಂದಿ ಮಾತ್ರ ಮರಳುತ್ತಾರೆ ಎಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ 4,000 ಮಂದಿ ಬರಲಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಎಷ್ಟು ಜನರನ್ನು ಕರೆತರಲಾಗುತ್ತಿದೆ? ಅವರನ್ನು ಯಾವ ವಿಮಾನ ನಿಲ್ದಾಣಗಳಲ್ಲಿ ಇಳಿಸಲಾಗುತ್ತಿದೆ ಎಂಬ ಸ್ಪಷ್ಟತೆ ಸರ್ಕಾರದಲ್ಲಿ ಇಲ್ಲ ಎಂದು ಮೋಹನ್‌ ಟೀಕಿಸಿದ್ದಾರೆ.

ಇಳಿದಲ್ಲೇ ಕ್ವಾರಂಟೈನ್‌ ಮಾಡಬೇಕು

ವಿದೇಶಗಳಿಂದ ಬರುವ ಜನರನ್ನು ಅವರು ಇಳಿಯುವ ವಿಮಾನ ನಿಲ್ದಾಣದ ಸಮೀಪದಲ್ಲೇ ಕ್ವಾರಂಟೈನ್‌ ಮಾಡಬೇಕು. ಆಯಾ ಜಿಲ್ಲೆಗಳಿಗೆ ಕಳುಹಿಸುವ ನಿರ್ಧಾರ ಸರಿಯಲ್ಲ. ಇದರಿಂದ ಕೋವಿಡ್‌–19 ಸೋಂಕು ಹರಡಲು ಸರ್ಕಾರವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಒತ್ತಾಯಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು