ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಸಾಗಣೆ ಕುಂಠಿತ, ಅಗತ್ಯ ವಸ್ತುಗಳ ಕೊರತೆಯ ಭೀತಿ

ಲಾಕ್‌ಡೌನ್‌ನಿಂದಾಗಿ ಆಹಾರ ಪದಾರ್ಥಗಳ ಉತ್ಪಾದನೆ
Last Updated 8 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಮಂಗಳೂರು: ಕೊರೊನಾ ವೈರಸ್‌ ಸೋಂಕು ನಿಯಂತ್ರಣಕ್ಕಾಗಿ ‘ಲಾಕ್‌ಡೌನ್‌’ ಜಾರಿಯಾದ ಬಳಿಕ ಮಂಗಳೂರು ನಗರಕ್ಕೆ ದಿನಸಿ, ಆಹಾರ ಧಾನ್ಯ ಮತ್ತು ನಿತ್ಯ ಬಳಕೆಯ ಆಹಾರ ವಸ್ತುಗಳ ಪೂರೈಕೆ ಕುಂಠಿತವಾಗಿದೆ. ಇದರಿಂದಾಗಿ ಅಗತ್ಯ ವಸ್ತುಗಳ ಕೊರತೆ ಎದುರಾಗುವ ಭೀತಿ ಆವರಿಸಿದೆ.

ಮಾರ್ಚ್‌ 24ರಿಂದ ಲಾಕ್‌ಡೌನ್‌ ಜಾರಿಯಲ್ಲಿದೆ. ಮಾರ್ಚ್‌ 26ರಿಂದ ಮೂರು ದಿನಗಳ ಸಂಪೂರ್ಣ ಬಂದ್‌ ಜಾರಿಯಲ್ಲಿತ್ತು. ಆ ಬಳಿಕ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಬಹುತೇಕ ಸೂಪರ್‌ ಮಾರ್ಕೆಟ್‌ಗಳು ಮತ್ತು ಚಿಲ್ಲರೆ ಅಂಗಡಿಗಳಲ್ಲಿ ದಿನಸಿ, ಅಗತ್ಯ ವಸ್ತುಗಳ ದಾಸ್ತಾನು ಖಾಲಿಯಾಗಿದೆ. ನಗರದಲ್ಲಿ ದಿನಬಳಕೆಯ ಕೆಲವು ವಸ್ತುಗಳ ಕೊರತೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ.

ಬೇಳೆ, ಕಾಳು, ಹಿಟ್ಟಿನ ಕೊರತೆ:ಮಿಲ್‌ಗಳ ಮೂಲಕ ಸಂಸ್ಕರಣ ಮತ್ತು ಉತ್ಪಾದನೆಯಾಗುವ ಉತ್ಪನ್ನಗಳ ಪೂರೈಕೆಯಲ್ಲಿ ಸ್ವಲ್ಪ ವ್ಯತ್ಯಯ ಕಾಣಿಸಿಕೊಂಡಿದೆ. ತೊಗರಿ, ಹೆಸರು, ಉದ್ದು, ಕಡಲೆ ಸೇರಿದಂತೆ ಬೇಳೆ ಮತ್ತು ಕಾಳುಗಳ ಲಭ್ಯತೆ ಕಡಿಮೆಯಾಗಿದೆ.

ಕಲಬುರ್ಗಿಯಲ್ಲಿ ಮೊದಲ ಕೋವಿಡ್‌–19 ಪ್ರಕರಣ ದೃಢಪಟ್ಟ ಬಳಿಕ ತೊಗರಿ, ಹೆಸರು ಸೇರಿದಂತೆ ಪ್ರಮುಖ ಬೇಳೆ, ಕಾಳುಗಳ ಪೂರೈಕೆಗೆ ಅಡಚಣೆ ಉಂಟಾಗಿತ್ತು. ಲಾಕ್‌ಡೌನ್‌ ಜಾರಿಯಾದ ಬಳಿಕ ನಗರಕ್ಕೆ ಆಹಾರ ಪದಾರ್ಥ ಹೊತ್ತು ತರುವ ಲಾರಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.

‘ಕೊರೊನಾ ವೈರಸ್‌ ಸೋಂಕು ತಡೆಗೆ ಉತ್ಪಾದನಾ ಘಟಕಗಳನ್ನು ಮುಚ್ಚುವುದು ಅಥವಾ ಕಡಿಮೆ ಕಾರ್ಮಿಕರನ್ನು ಬಳಸಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಇದರಿಂದಾಗಿ ಮಿಲ್‌ಗಳಲ್ಲಿ ಉತ್ಪಾದನೆ ಇಳಿಮುಖವಾಗಿದೆ. ಪರಿಣಾಮವಾಗಿ ನಗರಕ್ಕೆ ಬರುತ್ತಿದ್ದ ಬೇಳೆ, ಕಾಳು, ವಿವಿಧ ಬಗೆಯ ಹಿಟ್ಟು, ರವೆ ಮುಂತಾದ ಉತ್ಪನ್ನಗಳ ಪೂರೈಕೆಯಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಉಂಟಾಗಿದೆ’ ಎನ್ನುತ್ತಾರೆ ಮಂಗಳೂರು ನಗರ ಸಗಟು ದಿನಸಿ ವರ್ತಕರ ಸಂಘದ ಅಧ್ಯಕ್ಷ ಪಾಂಡುರಂಗ ಭಂಡಾರ್ಕರ್‌.

ಎಣ್ಣೆ, ಚಹಾ ಪುಡಿಗೆ ಬೇಡಿಕೆ:ಅಡುಗೆ ಎಣ್ಣೆ, ಚಹಾ ಪುಡಿ, ಬೆಲ್ಲ, ಸಕ್ಕರೆ, ಬೆಳ್ಳುಳ್ಳಿ ಮುಂತಾದ ವಸ್ತುಗಳಿಗೆ ನಗರದಲ್ಲಿ ಭಾರಿ ಪ್ರಮಾಣದ ಬೇಡಿಕೆ ಸೃಷ್ಟಿಯಾಗಿದೆ. ಕೆಲವೊಂದು ಬ್ರಾಂಡ್‌ಗಳ ಅಡುಗೆ ಎಣ್ಣೆ ಮತ್ತು ಚಹಾ ಪುಡಿ ಬಹುತೇಕ ಅಂಗಡಿಗಳಲ್ಲಿ ಲಭ್ಯವಿಲ್ಲ. ಕೆಲವು ದಿನಗಳಿಂದ ಚಹಾ ಪುಡಿ ಪೂರೈಕೆಯಲ್ಲಿ ವ್ಯತ್ಯಯ ಹೆಚ್ಚುತ್ತಿದೆ. ಗ್ರಾಹಕರು ಚಹಾ ಪುಡಿ ಹುಡುಕಿಕೊಂಡು ಅಂಗಡಿಯಿಂದ ಅಂಗಡಿಗೆ ಅಲೆಯುತ್ತಿರುವ ದೃಶ್ಯ ಕಂಡುಬರುತ್ತಿದೆ.

‘ಸಗಟು ವರ್ತಕರಿಗೆ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಅವರಿಗೆ ಲಭ್ಯವಾದರೆ ನಾವು ಖರೀದಿಸಿ ಮಾರಾಟ ಮಾಡಬಹುದು. ಅಡುಗೆ ಎಣ್ಣೆ ಮತ್ತು ಚಹಾ ಪುಡಿ ಬಹುತೇಕ ಹೊರ ರಾಜ್ಯಗಳಿಂದ ಪೂರೈಕೆ ಆಗುತ್ತವೆ. ಈಗ ಲಾರಿಗಳ ಓಡಾಟ ಕಡಿಮೆ ಆಗಿರುವುದರಿಂದ ಸಮಸ್ಯೆ ಆಗಿದೆ’ ಎಂದು ಚಿಲ್ಲರೆ ಅಂಗಡಿಗಳ ಮಾಲೀಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT