ಬುಧವಾರ, ನವೆಂಬರ್ 30, 2022
21 °C
ಪಾಳು ಭೂಮಿಯಲ್ಲೂ ಭತ್ತದ ಬೆಳೆ,

ಕರಾವಳಿಯ ಯುವಕರನ್ನು ಕೃಷಿಗೆ ಕರೆತಂದ ಕೊರೊನಾ; ಬದುಕು ಕಟ್ಟೋಣ ತಂಡದ ಪ್ರಯೋಗ

ಚಿದಂಬರಪ್ರಸಾದ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಕೊರೊನಾ ಲಾಕ್‌ಡೌನ್‌ ನಿಂದ ತವರಿಗೆ ಮರಳಿರುವ ಜಿಲ್ಲೆಯ ಯುವಕರು ಕೃಷಿಯತ್ತ ವಾಲಿ ದ್ದಾರೆ. ಇದರಿಂದಾಗಿ ಪಾಳುಬಿದ್ದ ಕೃಷಿಭೂಮಿಯಲ್ಲಿ ಮತ್ತೆ ಹಸಿರು ಕಂಗೊಳಿಸುತ್ತಿದೆ.

ಕಳೆದ ವರ್ಷ ನೆರೆಯಿಂದ ಕಂಗಲಾಗಿದ್ದ ಬೆಳ್ತಂಗಡಿ ತಾಲ್ಲೂಕಿನ ಜನರ ಜೀವನವನ್ನು ಮರುರೂಪಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ’ಬದುಕು ಕಟ್ಟೋಣ‘ ತಂಡ ಇದೀಗ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಲಾಕ್‌ಡೌನ್‌ನಿಂದ ಉದ್ಯೋಗ ಇಲ್ಲ
ದಂತಾಗಿರುವ ಯುವಕರ ತಂಡ ದೊಂದಿಗೆ ಪಾಳುಬಿದ್ದ ಭೂಮಿಯಲ್ಲಿ ಭತ್ತದ ಕೃಷಿಯನ್ನು ಹೆಚ್ಚಿಸುವ ಕಾರ್ಯಯೋಜನೆ ರೂಪಿಸಿದೆ.

ಇದರ ಅಂಗವಾಗಿ ಬೆಳ್ತಂಗಡಿ ತಾಲ್ಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್‌ನಲ್ಲಿ 60 ಎಕರೆ ಭತ್ತದ ಕೃಷಿ ಆರಂಭಿಸಿದೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಪಾಳು ಬಿದ್ದ ಕೃಷಿಭೂಮಿಯನ್ನು ದತ್ತು ಪಡೆದು ಕೃಷಿಗೆ ಮುಂದಾಗಿದೆ. 

‘ಕಳೆದ ವರ್ಷ ನೆರೆಪೀಡಿತ ಪ್ರದೇಶಗಳ ಗದ್ದೆಯನ್ನು ಹಸನು ಮಾಡಿ, ಭತ್ತದ ನಾಟಿ ಮಾಡುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಾಗಿತ್ತು. ಈ ವರ್ಷದ ಪಾಳು ಕೃಷಿಭೂಮಿಯಲ್ಲಿ ಭತ್ತದ ಕೃಷಿಗೆ ಒತ್ತು ನೀಡಿದ್ದೇವೆ’ ಎಂದು ತಂಡದ ಮುಖ್ಯಸ್ಥ ಮೋಹನ್‌ಕುಮಾರ್ ಹೇಳುತ್ತಾರೆ.

‘ಜನರು ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಜೀವನಶೈಲಿಯೂ ಬದಲಾಗಬೇಕಿದೆ. ಅದಕ್ಕಾಗಿ ಯುವಕರಲ್ಲಿ ಕೃಷಿಯ ಆಸಕ್ತಿಯನ್ನು ಹೆಚ್ಚಿಸಬೇಕು ಎನ್ನುವ ಉದ್ದೇಶದೊಂದಿಗೆ ಈ ಕಾರ್ಯವನ್ನು ಆರಂಭಿಸಿದ್ದೇವೆ’ ಎಂದೂ ಅವರು ಹೇಳುತ್ತಾರೆ.

ಕರಾಯ ಗ್ರಾಮದ ಉಜಿರ್‌ಬೆಟ್ಟುವಿನ ಬಂಗೇರ್‌ಕಟ್ಟೆ ನಿವಾಸಿ ಯೂಕೂಬ್‌ ಅವರು, ತಣ್ಣೀರುಪಂಥ ಗ್ರಾಮದ ಉರ್ನಡ್ಕ ನಿವಾಸಿ ಆದಂ ಅಲ್‌ ಮದೀನ್‌ ಅವರ ಸಹಕಾರದೊಂದಿಗೆ ಕೆಂಪುಕಲ್ಲು ತೆಗೆದು, 1.74 ಎಕರೆ ಮುರಕಲ್ಲಿನಿಂದ ಕೂಡಿದ್ದ ಬಂಜರು ಭೂಮಿಯನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸಿದ್ದಾರೆ.

‘ಈ ಜಾಗ ಮುರಕಲ್ಲಿನಿಂದ ಕೂಡಿತ್ತು. ಪಾಳು ಬಿಡುವುದಕ್ಕೆ ಮನಸ್ಸು ಇರಲಿಲ್ಲ. ಕೃಷಿ ಇಲಾಖೆಯ ಸಲಹೆ ಪಡೆದು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತಿಸಿದೆವು. ಒಟ್ಟು 1.74 ಎಕರೆ ಭೂಮಿಯಲ್ಲಿ ಅರ್ಧ ಎಕರೆ ಉಳುಮೆ ಮಾಡಿ ಭತ್ತದ ನಾಟಿ ಮಾಡಿದ್ದೇವೆ. ಉಳಿದ ಜಾಗದಲ್ಲಿ ಈಗಾಗಲೇ 450 ಅಡಿಕೆ ಗಿಡ ನೆಡಲಾಗಿದೆ, ಇನ್ನೂ 500 ಗಿಡ ನೆಡುವುದಕ್ಕೆ ತಯಾರಿ ನಡೆಸುತ್ತಿದ್ದೇವೆ’ ಎಂದು ಯಾಕೂಬ್‌ ಹೇಳುತ್ತಾರೆ.

 

ಪಾರಂಪರಿಕ ಕೃಷಿ ಪದ್ಧತಿಗೆ ಮರಳುವ ಸಮಯ ಬಂದಿದೆ. ಇದೀಗ ಯುವಕರು ಊರಿಗೆ ಮರಳಿದ್ದು, ಅವರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡಲಾಗುತ್ತಿದೆ.
-ಮೋಹನ್‌ಕುಮಾರ್,‌ ಬದುಕು ಕಟ್ಟೋಣ ತಂಡ ಮುಖ್ಯಸ್ಥ

ಕಳೆದ ವರ್ಷ 9 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿತ್ತು. ಈ ವರ್ಷ ಈಗಾಗಲೇ 9 ಸಾವಿರ ಹೆಕ್ಟೇರ್‌ನಲ್ಲಿ ಭತ್ತದ ನಾಟಿ ಮುಗಿದಿದೆ. ಜಿಲ್ಲೆಯಲ್ಲಿ ಭತ್ತದ ಕೃಷಿ ಹೆಚ್ಚಾಗುತ್ತಿದೆ.
-ಸೀತಾ,ಕೃಷಿ ಇಲಾಖೆ ಜಂಟಿ ನಿರ್ದೇಶಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು