ಬುಧವಾರ, ನವೆಂಬರ್ 13, 2019
23 °C

ನಕಲಿ ನೋಟು ಚಲಾವಣೆ: ಇಬ್ಬರ ಬಂಧನ

Published:
Updated:
Prajavani

ಕಾರ್ಕಳ : ತಾಲ್ಲೂಕಿನ ವಿವಿಧೆಡೆ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬ್ರೀಜಾ ಕಾರಿನಲ್ಲಿ ಬಂದು ತಾಲ್ಲೂಕಿನ ನಿಟ್ಟೆ ಲೆಮಿನಾ ಸಮೀಪದ ಅಂಗಡಿಯೊಂದರಲ್ಲಿ ₹ 200ರ ಮುಖಬೆಲೆಯ ನೋಟನ್ನು ಕೊಟ್ಟು ₹ 30ರ ವಸ್ತು ಖರೀದಿಸಿ ₹ 170 ಪಡೆದ ಆರೋಪಿಗಳು ಮುಂದೆ ಹಾಳೆಕಟ್ಟೆ ಎಂಬಲ್ಲಿ ಸುಧಾಕರ ಕೋಟ್ಯಾನ್ ಅವರ ಕಟ್ಟಡದ ಅಂಗಡಿಯಿಂದ ವಸ್ತು ಖರೀದಿಸಿ ಅಲ್ಲಿಂದ ಕೆದಿಂಜೆ ಎಂಬಲ್ಲಿ ಮೆಡಿಕಲ್ ಶಾಪ್‌ವೊಂದರಿಂದ ವೀಕೋ ಟರ್ಮರಿಕ್ ಕ್ರೀಮ್‌ನ್ನು ಖರೀದಿಸಿ ₹200ರ ಮುಖಬೆಲೆಯ ನೋಟು ನೀಡಿ ಚಿಲ್ಲರೆ ಪಡೆದಿದ್ದಾರೆ. ಆಗ ಅಂಗಡಿಯವರಿಗೆ ಗುಮಾನಿ ಬಂದು ನೋಟ್‌ನ್ನು ಬ್ಯಾಂಕಿಗೆ ಹೋಗಿ ಪರಿಶೀಲಿಸಿದಾಗ ಅದು ನಕಲಿ ನೋಟು ಎಂದು ತಿಳಿದಿದೆ.

ತಕ್ಷಣ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆದಿಂಜೆ ಸುಪ್ರೀತ್ ಶೆಟ್ಟಿ ತಂಡ ಆರೋಪಿಗಳನ್ನು ಹಿಂಬಾಲಿಸಿದೆ. ಬೆಳ್ಮಣ್‌ನ ಕ್ರೀಮ್ ಪಾರ್ಲರ್‌ನಲ್ಲಿ ವಸ್ತು ಖರೀದಿಸಿದ ತಂಡ ತಕ್ಷಣ ಸಾಂತರ್‌ಕೊಪ್ಪಲ ಎಂಬಲ್ಲಿಯೂ ಖರೀದಿಸಲು ತೊಡಗಿದಾಗ ತಮ್ಮನ್ನು ಹಿಂಬಾಲಿಸುವುದನ್ನು ಗಮನಿಸಿ ಆರೋಪಿಗಳ ಬ್ರೀಜಾ ಕಾರು ಮುಂದೆ ಸಾಗಿದೆ. ಆಗ ಪಡುಬಿದಿರೆ ಪೊಲೀಸ್ ಠಾಣೆಗೆ ಸುದ್ದಿ ನೀಡಲಾಗಿತ್ತು. ಆದರೆ ಆರೋಪಿಗಳು ಮೂಲ್ಕಿಯತ್ತ ಕಾರನ್ನು ಓಡಿಸಿ ಅಲ್ಲಿ ಟಾಲ್‌ಗೇಟ್ ಗಮನಿಸಿ ಕಾರನ್ನು ವೇಗವಾಗಿ ಹಿಂತಿರುಗಿಸಿ ಕಾಪುವಿನತ್ತ ಸಾಗಿದರು. ಅಲ್ಲಿಯ ಪೊಲೀಸರು ಸಾರ್ವಜನಿಕರ ಸಹಾಯದಿಂದ ಆರೋಪಿಗಳಾದ ಚೇತನಗೌಡ (23) ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿಯ ಅರ್ಪಿತಾ ನವಲೆ (22) ಅವರನ್ನು ಬಂಧಿಸಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)