ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗಾ ಕೇಂದ್ರಕ್ಕೆ 15 ಮಂದಿ ದಾಖಲು: ಏಳು ಮಾದರಿಗಳ ಪರೀಕ್ಷಾ ವರದಿ ನೆಗೆಟಿವ್‌

Last Updated 8 ಏಪ್ರಿಲ್ 2020, 16:00 IST
ಅಕ್ಷರ ಗಾತ್ರ

ಮಂಗಳೂರು: ಶಂಕಿತ ಕೋವಿಡ್‌–19 ಲಕ್ಷಣಗಳು ಕಂಡುಬಂದ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯ 15 ಮಂದಿಯನ್ನು ಬುಧವಾರ ವೈದ್ಯಕೀಯ ನಿಗಾಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಮಂಗಳವಾರ ಸಂಗ್ರಹಿಸಿದ್ದ ಏಳು ಮಂದಿಯ ಗಂಟಲಿನ ದ್ರವಗಳ ಮಾದರಿಯ ಪರೀಕ್ಷಾ ವರದಿ ಬುಧವಾರ ಬಂದಿದೆ. ಯಾರಿಗೂ ಕೋವಿಡ್‌–19 ಸೋಂಕು ಇಲ್ಲ (ನೆಗೆಟಿವ್‌) ಎಂಬುದು ವರದಿಯಲ್ಲಿ ದೃಢಪಟ್ಟಿದೆ. ಈ ಎಲ್ಲ ಮಾದರಿಗಳನ್ನೂ ವೆನ್ಲಾಕ್‌ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭವಾಗಿರುವ ಪ್ರಯೋಗಾಲಯದಲ್ಲೇ ಪರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬುಧವಾರ ಒಂಭತ್ತು ಮಂದಿಯ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ. ಈವರೆಗೆ ಒಟ್ಟು 357 ಮಾದರಿಗಳನ್ನು ಸಂಗ್ರಹಿಸಿದ್ದು, 348 ಮಾದರಿಗಳ ವರದಿಗಳು ಬಂದಿವೆ. 12 ಜನರಲ್ಲಿ ಮಾತ್ರ ಸೋಂಕು ಇರುವುದು ಪತ್ತೆಯಾಗಿದೆ. 336 ಜನರಲ್ಲಿ ಕೋವಿಡ್‌–19 ಸೋಂಕು ಇಲ್ಲ ಎಂಬ ವರದಿಗಳು ಲಭಿಸಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 38,701 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಪೈಕಿ 20 ಜನರ ಆರೋಗ್ಯ ತಪಾಸಣೆ ಬುಧವಾರ ನಡೆದಿದೆ. 2,311 ಜನರು 28 ದಿನಗಳ ಹೋಂ ಕ್ವಾರಂಟೈನ್‌ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಅವರಲ್ಲಿ ಕೋವಿಡ್‌–19 ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. 3,635 ಜನರು ಇನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ವಿವರ ನೀಡಿದ್ದಾರೆ.

ಮೂರು ಜಿಲ್ಲೆಗಳ ವ್ಯಾಪ್ತಿ: ವೆನ್ಲಾಕ್‌ ಆಸ್ಪತ್ರೆಯಲ್ಲಿ ಆರಂಭವಾಗಿರುವ ಕೊರೊನಾ ವೈರಸ್‌ ಸೋಂಕು ಪತ್ತೆ ಪ್ರಯೋಗಾಲಯಕ್ಕೆ ಮೂರು ಜಿಲ್ಲೆಗಳ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಗ್ರಹಿಸುವ ಮಾದರಿಗಳನ್ನು ಈ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT