ಸೋಮವಾರ, ಜೂನ್ 27, 2022
28 °C
ಕೋವಿಡ್‌ ನಡುವೆಯೂ

ಮುಂಗಾರಿಗೆ ಗರಿಗೆದರಿದ ಕೃಷಿ ಕಾಯಕ- ಕೋವಿಡ್‌ ನಡುವೆಯೂ ಬತ್ತದ ಉಳುವ ಯೋಗಿಯ ಉತ್ಸಾಹ

ಪ್ರದೀಶ್‌ ಎಚ್‌. ಮರೋಡಿ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಉತ್ತಮ ಮುಂಗಾರಿನ ಮುನ್ಸೂಚನೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಕೋವಿಡ್‌ ಕರಿನೆರಳಿನ ನಡುವೆಯೂ ರೈತರಲ್ಲಿ ಉತ್ಸಾಹ ಹೆಚ್ಚಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2020–21ನೇ ಸಾಲಿನ ಮುಂಗಾರಿನಲ್ಲಿ 10,260 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿಯನ್ನು ಕೃಷಿ ಇಲಾಖೆ ನಿಗದಿ ಮಾಡಿತ್ತು. 11,247 ಹೆಕ್ಟೇರ್‌ಗಳಲ್ಲಿ ಭತ್ತ ಬೆಳೆಯುವ ಮೂಲಕ ಗುರಿ ಮೀರಿದ ಪ್ರಗತಿ ಸಾಧಿಸಿತ್ತು. ಅದೇ ಹುಮ್ಮಸ್ಸಿನಲ್ಲಿ 2021–22ನೇ ಸಾಲಿನಲ್ಲಿ 11,070 ಹೆಕ್ಟೇರ್‌ಗಳಲ್ಲಿ ಭತ್ತ ಬಿತ್ತನೆಯ ಗುರಿಯನ್ನು ಹೊಂದಲಾಗಿದೆ.

ಎರಡು ವಾರಗಳ ಹಿಂದೆ ಚಂಡಮಾರುತದ ಪ್ರಭಾವದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಅದರಲ್ಲೂ ಮಂಗಳೂರು ತಾಲ್ಲೂಕಿನಲ್ಲಿ ಎರಡು ದಿನ ವರುಣ ಅಬ್ಬರಿಸಿದ್ದ ಕಾರಣ ಗದ್ದೆಗಳು ಉಳುಮೆಗೆ ಸಿದ್ಧಗೊಂಡಿದ್ದವು. ಅದರ ಫಲವಾಗಿ ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಮಂಗಳೂರು ತಾಲ್ಲೂಕಿನಲ್ಲಿ ಈಗಾಗಲೇ ಸುಮಾರು 570 ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ನಾಟಿ ಕಾರ್ಯ ಪ್ರಗತಿಯಲ್ಲಿದೆ. ಇತರೆ ತಾಲ್ಲೂಕುಗಳಲ್ಲೂ ನಾಟಿಗೆ ಸಿದ್ಧತೆಗಳು ಸದ್ದಿಲ್ಲದೆ ನಡೆಯುತ್ತಿವೆ.

‘ಕೋವಿಡ್‌ ಲಾಕ್‌ಡೌನ್‌ ವೇಳೆ ಕೃಷಿ ಚಟುವಟಿಕೆಗೆ ವಿನಾಯಿತಿ ನೀಡಿರುವುದರಿಂದ ಕೃಷಿಕರು ರಸಗೊಬ್ಬರ ಖರೀದಿ, ಬಿತ್ತನೆ ಬೀಜ ಖರೀದಿಸಿ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಾಂಪ್ರದಾಯಿಕವಾಗಿ ಗದ್ದೆ ಉಳುಮೆ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಗದ್ದೆಗಳಲ್ಲಿ ಟಿಲ್ಲರ್‌, ಟ್ರ್ಯಾಕ್ಟರ್‌ಗಳು ಸದ್ದು ಮಾಡುತ್ತಿವೆ. ಮತ್ತೊಂದೆಡೆ ಕಾರ್ಮಿಕರ ಕೊರತೆ ರೈತರನ್ನು ಕಾಡುತ್ತಿದೆ.

‘ಮುಂಗಾರಿಗೆ ಬೇಕಾದಷ್ಟು ಬಿತ್ತನೆ ಬೀಜ ಮತ್ತು ರಸಗೊಬ್ಬರಗಳು ಸಹಕಾರ ಸಂಘ ಮತ್ತು ಖಾಸಗಿ ಏಜೆನ್ಸಿಗಳಲ್ಲಿ ದಾಸ್ತಾನಿವೆ. ಜಿಲ್ಲೆಗೆ ಸೂಕ್ತವಾದ ಜಯ, ಜ್ಯೋತಿ ಬಿತ್ತನೆ ಬೀಜ ರೈತ ಸಂಪರ್ಕ ಕೇಂದ್ರದಲ್ಲೂ ಲಭ್ಯವಿದೆ. ಪುತ್ತೂರಿನಲ್ಲಿ ಎಂಒ 4 ತಳಿ ಕೂಡ ಇದೆ. ಬಹುತೇಕ ರೈತರು ತಮಗೆ ಬೇಕಾದ ಬಿತ್ತನೆ ಬೀಜವನ್ನು ತಾವೇ ತಯಾರಿಸಿಕೊಂಡಿದ್ದಾರೆ. ಜುಲೈ ಅಂತ್ಯಕ್ಕೆ ಜಿಲ್ಲೆಯಲ್ಲಿ ಮುಂಗಾರು ನಾಟಿ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ತಿಳಿಸಿದ್ದಾರೆ.

‘35 ವರ್ಷಗಳಿಂದ ಭತ್ತ ಕೃಷಿ ಮಾಡುತ್ತಿದ್ದು, ಇದು ಲಾಭದಾಯಕ ಅಲ್ಲದಿದ್ದರೂ ನಷ್ಟವಾಗಿಲ್ಲ. ಮೊದಲು ನಾವು ಗದ್ದೆ ಉಳುಮೆಗೆ ಕೋಣಗಳನ್ನು ಸಾಕುತ್ತಿದ್ದೆವು. 15 ದಿನದ ಉಳುಮೆಗಾಗಿ ವರ್ಷವಿಡೀ ಕೋಣಗಳನ್ನು ಸಾಕುವುದು ದುಬಾರಿ. ಹೀಗಾಗಿ, ಬಜ್ಪೆಯಿಂದ ಟಿಲ್ಲರ್‌ ತಂದು ಉಳುಮೆ ಮಾಡುತ್ತಿದ್ದೇನೆ. ಈ ಬಾರಿ ಭದ್ರ ಮತ್ತು ಎಂ.ಒ.4 ಬಿತ್ತನೆ ಬೀಜವನ್ನು ತಂದಿದ್ದೇನೆ. ಅದು 135 ದಿನಕ್ಕೆ ಫಸಲು ಕೊಡುತ್ತದೆ. ಸ್ಥಳೀಯ ಕಾರ್ಮಿಕರು ಗದ್ದೆ ಕೆಲಸಕ್ಕೆ ಸಿಗುವುದಿಲ್ಲ. ಹೀಗಾಗಿ, ಉತ್ತರ ಕರ್ನಾಟಕದ ಕೆಲ ಕಾರ್ಮಿಕರನ್ನು ಜತೆ ಸೇರಿಸಿಕೊಂಡು ಕೃಷಿ ಮಾಡುತ್ತಿದ್ದೇನೆ’ ಎಂಬುದು ಭಾನುವಾರ ಗದ್ದೆಯ ಉಳುಮೆ ಕಾರ್ಯದಲ್ಲಿ ನಿರತರಾಗಿದ್ದ ಚಿಲಿಂಬಿಯ ಫ್ರಾನ್ಸಿಸ್‌ ಸಲ್ದಾನ ಅಭಿಪ್ರಾಯ.

‘ಈಗಾಗಲೇ ಉತ್ತಮವಾಗಿ ಮಳೆ ಬಂದಿದೆ. ಇನ್ನೂ ಒಂದೆರಡು ದಿನ ಮಳೆ ಬಂದು ಗದ್ದೆಗಳಲ್ಲಿ ನೀರು ನಿಂತ ಬಳಿಕ ಉಳುಮೆ ಆರಂಭಿಸುತ್ತೇವೆ. ಲಾಭದ ಉದ್ದೇಶಕ್ಕೆ ಅಲ್ಲದಿದ್ದರೂ ಮನೆಮಂದಿಯ ಊಟಕ್ಕಾಗಿ ಸುಮಾರು ಒಂದೂವರೆ ಎಕರೆಯಷ್ಟು ಗದ್ದೆಯನ್ನು ಉಳಿಸಿಕೊಂಡಿದ್ದೇವೆ. ಕಾರ್ಮಿಕರ ಕೊರತೆ, ಪ್ರಾಣಿಗಳ ಉಪಟಳ ಇದ್ದಿದ್ದೇ. ಆದರೆ, ನಮ್ಮ ಹಿರಿಯರು ಕಲಿಸಿಕೊಟ್ಟ ಕೃಷಿ ಸಂಸ್ಕೃತಿಯನ್ನು ಉಳಿಸುವ ಉದ್ದೇಶದಿಂದ ಭತ್ತ ಬೆಳೆಯುತ್ತಿದ್ದೇನೆ. ನಮ್ಮದು ಪಕ್ಕಾ ಸಾವಯವ ಕೃಷಿ. ರಸಗೊಬ್ಬರ, ಕ್ರಿಮಿನಾಶಕ ಬಳಸುವುದಿಲ್ಲ. ಹೀಗಾಗಿ, ನಾವೇ ಬೆಳೆದ ಅಕ್ಕಿಯಿಂದ ಹೊಟ್ಟೆ ತುಂಬಾ ಊಟ ಮಾಡುವ ಖುಷಿಯೇ ಬೇರೆ’ ಎನ್ನುತ್ತಾರೆ ಸಿದ್ದಕಟ್ಟೆಯ ಸತೀಶ್‌ ಪೂಜಾರಿ.

ಹಡಿಲು ಗದ್ದೆಯ ಕೃಷಿಗೆ ವಿಶೇಷ ಪ್ರೋತ್ಸಾಹ: ‘ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಆಶಯದಂತೆ ಹಡಿಲು ಬಿದ್ದ ಗದ್ದೆಯಲ್ಲಿ ಭತ್ತದ ಕೃಷಿ ಮಾಡುವ ರೈತರಿಗೆ ಬಡ್ಡಿರಹಿತವಾಗಿ ₹ 10 ಸಾವಿರ ಸಾಲ ನೀಡಲು ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನಿರ್ಧರಿಸಿದೆ. ಅಲ್ಲದೆ, ಸಹಾಯಧನದಲ್ಲಿ ಬಿತ್ತನೆ ಬೀಜ, ಸಂಘದ ವತಿಯಿಂದ ಬಾಡಿಗೆ ಸೇವಾ ಕೇಂದ್ರದ ಮುೂಲಕ ಉಳುಮೆ ಯಂತ್ರವನ್ನೂ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಜತೆಗೆ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ ಮತ್ತು ಬಿ.ಸಿ.ರೋಡ್ ದಿಶಾ ಟ್ರಸ್ಟ್‌ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಭತ್ತದ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯ ಸಹಕಾರದಲ್ಲಿ ಈ ಹೆಜ್ಜೆ ಇಟ್ಟಿದೆ’ ಎನ್ನುತ್ತಾರೆ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ.

‘ಹಡಿಲು ಗದ್ದೆಯಲ್ಲಿ ಭತ್ತ ಬೆಳೆ’

‘ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಶಾಸಕರ ಮುತುವರ್ಜಿಯಿಂದ ಹಡಿಲು ಬಿದ್ದ ಗದ್ದೆಯಲ್ಲಿ ಭತ್ತ ಕೃಷಿ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ವರ್ಷ 5,800 ಎಕರೆಯಷ್ಟು ಹಡಿಲು ಗದ್ದೆಯನ್ನು ಗುರುತಿಸಲಾಗಿದ್ದು, ಅದರಲ್ಲಿ ಕೃಷಿಗೆ ಬಳಸುವ ಯೋಚನೆಯಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ರೈತರು ಮತ್ತು ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ತಿಳಿಸಿದ್ದಾರೆ.

‘ರೈತರಿಂದ ಉತ್ತಮ ಸ್ಪಂದನೆ’

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 200 ಎಕರೆಯಷ್ಟು ಹಡಿಲು ಗದ್ದೆಯನ್ನು ಗುರುತಿಸಲಾಗಿದೆ. ಇದರಲ್ಲಿ ಈ ವರ್ಷ ಕೃಷಿಗೆ ಸಿದ್ಧತೆ ಆರಂಭಿಸಿದ್ದೇವೆ. ಗ್ರಾಮ ಪಂಚಾಯಿತಿಗಳಲ್ಲಿ ಸಭೆ ಕರೆದು ರೈತರ, ಸ್ಥಳೀಯರ ವಿಶ್ವಾಸ ಪಡೆಯುತ್ತಿದ್ದೇವೆ. ರೈತರಿಂದ ಉತ್ತಮ ಸ್ಪಂದನೆ ದೊರಕಿದೆ’ ಎನ್ನುತ್ತಾರೆ ಶಾಸಕ ಡಾ. ವೈ. ಭರತ್‌ ಶೆಟ್ಟಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು