ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ: ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌

ಜಿಲ್ಲೆಯ ಮೊದಲ ಕೋವಿಡ್–19 ರೋಗಿ ಗುಣಮುಖ
Last Updated 5 ಏಪ್ರಿಲ್ 2020, 14:19 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಕೋವಿಡ್‌–19 ಸೋಂಕಿತ ಭಟ್ಕಳದ ಯುವಕ ಸಂಪೂರ್ಣ ಗುಣಮುಖವಾಗಿದ್ದು, ಸೋಮವಾರ (ಇದೇ 6) ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ.

ಮಾರ್ಚ್‌ 19 ರಂದು ದುಬೈನಿಂದ ಬಂದಿದ್ದ ಭಟ್ಕಳದ 22 ವರ್ಷದ ವ್ಯಕ್ತಿಯನ್ನು ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗಿತ್ತು. ರೋಗ ಲಕ್ಷಣಗಳು ಕಂಡು ಬಂದಿದ್ದರಿಂದ ನೇರವಾಗಿ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್‌ 22 ರಂದು ಈ ಯುವಕನಿಗೆ ಕೋವಿಡ್‌–19 ಸೋಂಕು ತಗುಲಿರುವುದು ದೃಢಪಟ್ಟಿತ್ತು.

ನಿರಂತರ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆಯ ಬಳಿಕ ಇದೀಗ ಈ ಯುವಕ ಗುಣಮುಖನಾಗಿದ್ದಾನೆ. ಇದೇ 2 ಮತ್ತು 3 ರಂದು ಈ ಯುವಕನ ಗಂಟಲು ದ್ರವದ ಮಾದರಿಯನ್ನು ಮತ್ತೆ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಸೋಂಕು ಇಲ್ಲದೇ ಇರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಯುವಕನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 12 ಮಂದಿಗೆ ಕೋವಿಡ್‌–19 ಸೋಂಕು ದೃಢಪಟ್ಟಿದೆ. ಇದರಲ್ಲಿ 10 ತಿಂಗಳ ಮಗು ಸೇರಿದೆ. ಈ ಪೈಕಿ ಕಾಸರಗೋಡು ಜಿಲ್ಲೆಯ ನಾಲ್ವರಿದ್ದು, ಬೆಳ್ತಂಗಡಿ ತಾಲ್ಲೂಕಿನ ಕಲ್ಲೇರಿ, ಪುತ್ತೂರು ತಾಲ್ಲೂಕಿನ ಆರ್ಯಾಪು, ಬಂಟ್ವಾಳ ತಾಲ್ಲೂಕಿನ ತುಂಬೆ, ಉಳ್ಳಾಲ ಸಮೀಪದ ತೊಕ್ಕೊಟ್ಟು, ಸುಳ್ಯ ತಾಲ್ಲೂಕಿನ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇದರ ಜತೆಗೆ ದುಬೈನಿಂದ ಬಂದಿದ್ದ ಉಡುಪಿಯ 63 ವರ್ಷದ ಮಹಿಳೆಗೂ ಸೋಂಕು ಖಚಿತವಾಗಿದೆ.

ಈ ಪೈಕಿ ಮಗುವಿನ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿದೆ. 14 ಹಾಗೂ 15 ದಿನದ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅದರಲ್ಲಿ ಸೋಂಕು ಇಲ್ಲದೇ ಇರುವುದು ದೃಢಪಟ್ಟಲ್ಲಿ ಮಗುವನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಉಳಿದ ಎಲ್ಲ ರೋಗಿಗಳ ಆರೋಗ್ಯವೂ ಸ್ಥಿರವಾಗಿದ್ದು, ಯಾವುದೇ ರೋಗಿಯನ್ನು ವೆಂಟಿಲೇಟರ್‌ ಮೇಲೆ ಇಡಲಾಗಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT