ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ವೆನ್ಲಾಕ್‌ ಆಸ್ಪತ್ರೆಯಲ್ಲಿ ಕೊರೊನಾ ಪತ್ತೆ ಪ್ರಯೋಗಾಲಯ ಆರಂಭ

₹60 ಲಕ್ಷ ವೆಚ್ಚದಲ್ಲಿ ಯಂತ್ರೋಪಕರಣ; ಒಂದೇ ದಿನದಲ್ಲಿ ಪರೀಕ್ಷಾ ವರದಿ
Last Updated 1 ಏಪ್ರಿಲ್ 2020, 14:50 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಕೊರೊನಾ ವೈರಸ್‌ ಸೇರಿದಂತೆ ವೈರಾಣು ಪತ್ತೆ ಪ್ರಯೋಗಾಲಯ ಆರಂಭಕ್ಕೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದ್ದು, ಇಲ್ಲಿ ಪ್ರಾಯೋಗಿಕ ಪರೀಕ್ಷೆ ಆರಂಭಿಸಲಾಗಿದೆ.

ರಾಜ್ಯದಲ್ಲಿ ಕೋವಿಡ್‌–19 ಪ್ರಕರಣ ಹೆಚ್ಚುತ್ತಿರುವುದರಿಂದ ಮತ್ತು ಪರೀಕ್ಷಾ ಪ್ರಯೋಗಾಲಯಗಳು ಕಡಿಮೆ ಇರುವುದರಿಂದ ಎಲ್ಲ ಜಿಲ್ಲೆಗಳಲ್ಲೂ ಪ್ರಯೋಗಾಲಯ ತೆರೆಯುವ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ನಗರಕ್ಕೆ ಭೇಟಿ ನೀಡಿದ ಸಂದರ್ಭ ಭರವಸೆ ನೀಡಿದ್ದರು.

ಅದರಂತೆ ಸರ್ಕಾರದಿಂದ ಪ್ರಯೋಗಾಲಯಕ್ಕೆ ಮಂಜೂರಾತಿ ಸಿಕ್ಕಿದ್ದು, ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಆರಂಭವಾಗಿದೆ. ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ (ಐಸಿಎಂಆರ್) ನೋಂದಣಿಯಾಗಬೇಕಿದ್ದು, ಕೆಲವು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಂತರ ಪೂರ್ಣ ಪ್ರಮಾಣದಲ್ಲಿ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ.

ರೋಗಿಯ ಗಂಟಲು ದ್ರವ ಮಾದರಿಯನ್ನು ನೇರವಾಗಿ ಈ ಪ್ರಯೋಗಾಲಯದಲ್ಲಿ ತಪಾಸಣೆ ಮಾಡಲಾಗುವುದಿಲ್ಲ. ಜಿಲ್ಲಾ ಸರ್ವೇಕ್ಷಣಾ ವಿಭಾಗದವರು ಕಳುಹಿಸಿದ ಮಾದರಿಗಳನ್ನು ಮಾತ್ರ ಇಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಈ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸಲು ಡಾ.ಶರತ್ ಕುಮಾರ್, ಡಾ. ಮಧುಸೂದನ್ ಅವರೊಂದಿಗೆ ಇತರ ಮೂವರು ಸಿಬ್ಬಂದಿ ಸೇರಿ ಒಟ್ಟು ಐದು ಮಂದಿ ಇರಲಿದ್ದು, ಇವರಿಗೆ ಹಾಸನ ಮತ್ತು ಮೈಸೂರಿನ ಪ್ರಯೋಗಾಲಯಗಳಲ್ಲಿ ತರಬೇತಿ ನೀಡಲಾಗಿದೆ. ಎನ್‌ಐಟಿಕೆ ಸುರತ್ಕಲ್, ಮೀನುಗಾರಿಕಾ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾಲಯದ ವಿಜ್ಞಾನಿಗಳು ವೈದ್ಯರಿಗೆ ಸಹಕಾರ ನೀಡುತ್ತಿದ್ದಾರೆ.

ಮಂಗಳೂರಿನಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರಯೋಗಾಲಯ ಆರಂಭವಾದ ನಂತರ ಗಂಟಲು ದ್ರವದ ಮಾದರಿ ಪರೀಕ್ಷೆಯ ವರದಿಗಾಗಿ ನಾಲ್ಕೈದು ದಿನ ಕಾಯುವ ಅಗತ್ಯವಿಲ್ಲ. ಒಂದೇ ದಿನದಲ್ಲಿ ವರದಿಯನ್ನು ಪಡೆದುಕೊಳ್ಳಬಹುದಾಗಿದೆ. ಈವರೆಗೆ ಕೊರೊನಾ ವೈರಸ್‌ ಶಂಕಿತರ ಗಂಟಲು ದ್ರವದ ಮಾದರಿಯನ್ನು ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿತ್ತು. 3–4 ದಿನಗಳ ನಂತರ ವರದಿ ಕೈಸೇರುತ್ತಿತ್ತು.

ವೆನ್ಲಾಕ್ ಆಸ್ಪತ್ರೆಯ ಪಬ್ಲಿಕ್ ಹೆಲ್ತ್ ಲ್ಯಾಬ್‌ನ ಮುಂಭಾಗದಲ್ಲಿ ಈ ಪ್ರಯೋಗಾಲಯ ಇರಲಿದ್ದು, ಅಗತ್ಯ ಯಂತ್ರಗಳು ಸೇರಿದಂತೆ ವಿವಿಧ ಪ್ರಕ್ರಿಯೆಗಳಿಗೆ ₹60 ಲಕ್ಷ ವೆಚ್ಚವಾಗಿದೆ. ಇತರ ಕೆಲ ಮೂಲ ಸೌಕರ್ಯಗಳಿಗೆ ಹೆಚ್ಚುವರಿ ಹಣವನ್ನು ವ್ಯಯಿಸಲಾಗಿದೆ.

ಖಾಸಗಿ ಆಸ್ಪತ್ರೆಗಳಿಗೂ ಆಯುಷ್ಮಾನ್‌ ಭಾರತ್‌

ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್‌–19 ಚಿಕಿತ್ಸೆಗೆ ಸಂಪೂರ್ಣವಾಗಿ ಬಳಸಲಾಗುತ್ತಿದ್ದು, ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗುತ್ತಿರುವ ಇತರೆ ಅರ್ಹ ರೋಗಿಗಳಿಗೆ ಆಯುಷ್ಮಾನ್ ಭಾರತ್‌ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವೈದ್ಯಕೀಯ ನಿರ್ವಹಣೆ ಕುರಿತು ಖಾಸಗಿ ವೈದ್ಯಕೀಯ ಕಾಲೇಜುಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಸರ್ಕಾರ ಅನುಮತಿ ನೀಡಿದ್ದು, ಅರ್ಹ ರೋಗಿಗಳಿಗೆ ಸಕಾಲದಲ್ಲಿ ಉತ್ತಮ ಚಿಕಿತ್ಸೆ ದೊರಕಲು ಆಯುಷ್ಮಾನ್ ಭಾರತ್‌ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು ಎಲ್ಲ ಅಗತ್ಯ ನೆರವು ನೀಡಲು ಮುಂದೆ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.

ಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ, ವೆನ್ಲಾಕ್‌ ಅಧೀಕ್ಷಕ ಡಾ.ಸದಾಶಿವ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT