ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪಡೆದ 192 ಫಲಾನುಭವಿಗಳು

ದಕ್ಷಿಣ ಕನ್ನಡ ಜಿಲ್ಲೆಯ 9 ಕೇಂದ್ರಗಳಲ್ಲಿ ಅಣಕು ಲಸಿಕೆ ಕಾರ್ಯಾಚರಣೆ
Last Updated 9 ಜನವರಿ 2021, 3:52 IST
ಅಕ್ಷರ ಗಾತ್ರ

ಮಂಗಳೂರು: ವೆನ್ಲಾಕ್‌ನ ಆಯುಷ್‌ ಆಸ್ಪತ್ರೆ ಸೇರಿದಂತೆ ಜಿಲ್ಲೆಯ 9 ಕಡೆಗಳಲ್ಲಿ ಕೋವಿಡ್–19 ಲಸಿಕೆಯ ಡ್ರೈರನ್‌ ಅನ್ನು ಶುಕ್ರವಾರ ನಡೆಸಲಾಯಿತು.

ವೆನ್ಲಾಕ್ ಆಯುಷ್‌ ಆಸ್ಪತ್ರೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ‘ಮೊದಲ ಹಂತದಲ್ಲಿ ಲಸಿಕೆ ನೀಡುವಾಗ ರೋಗಿಗಳಿಗೆ ಮಧುಮೇಹ ಅಥವಾ ಇನ್ಯಾವುದೇ ಕಾಯಿಲೆಗಳು ಇವೆಯೇ ಎನ್ನುವ ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ. ಲಸಿಕೆ ನೀಡುವ ಸ್ಥಳದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಬೇಕು ಎಂದು ತಿಳಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದವರ ಹಾಗೂ ಅಂಗಡಿಯವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಕೋವಿಡ್–19 ಮಾರ್ಗಸೂಚಿಗಳನ್ನು ಅನುಸರಿಸದ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸುವಂತೆ ನಿರ್ದೇಶನ ನೀಡಿದರು.

192 ಮಂದಿಗೆ ಡ್ರೈ ರನ್‌: ಜಿಲ್ಲೆಯಾದ್ಯಂತ 192 ಮಂದಿಗೆ ಕೋವಿಡ್–19 ಲಸಿಕೆ ಹಾಕುವ ಅಣಕು ಕಾರ್ಯಾಚರಣೆ (ಡ್ರೈರನ್‌) ನಡೆಸಲಾಯಿತು. ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ಆಯ್ಕೆ ಮಾಡಲಾದವರಿಗೆ ಸ್ಯಾನಿಟೈಸರ್‌ ಹಾಕಿ, ದೇಹದ ಉಷ್ಣಾಂಶ ಪರೀಕ್ಷಿಸಿದ ನಂತರ, ಅವರನ್ನು ವಿಶ್ರಾಂತಿ ಕೊಠಡಿಗೆ ಕಳುಹಿಸಲಾಯಿತು. ಸರದಿಯಂತೆ ಒಟ್ಟು 207 ಜನರ ಪೈಕಿ, 192 ಜನರಿಗೆ ಅಣಕು ಲಸಿಕೆ ಹಾಕಲಾಯಿತು.

ಜಿಲ್ಲಾ ವೆನ್ಲಾಕ್‌ ಆಯುಷ್ ಆಸ್ಪತ್ರೆ, ಸುರತ್ಕಲ್‌ ಪ್ರಾಥಮಿಕ ಆರೋಗ್ಯ ಕೇಂದ್ರ, ಬಂಟ್ವಾಳ ತಾಲ್ಲೂಕು ಆಸ್ಪತ್ರೆ, ಕಡಬ ಸಮುದಾಯ ಆರೋಗ್ಯ ಕೇಂದ್ರ, ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರ, ಯೇನೆಪೋಯ ವೈದ್ಯಕೀಯ ಕಾಲೇಜು, ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜು, ನಗರದ ಇಂಡಿಯಾನಾ ಆಸ್ಪತ್ರೆ ಹಾಗೂ ಕೆ.ಎಸ್‌. ಹೆಗ್ಡೆ ಆಸ್ಪತ್ರೆಗಳಲ್ಲಿ ಡ್ರೈರನ್‌ ನಡೆಸಲಾಯಿತು.

ವೈದ್ಯರು, ಶುಶ್ರೂಷಕರು, ಚಾಲಕರು ಸೇರಿದಂತೆ ಪ್ರತಿ ಕೇಂದ್ರದ ವ್ಯಾಪ್ತಿಯಲ್ಲಿ ತಲಾ 23 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಲಸಿಕೆಗೆ ಸಂಬಂಧಿಸಿದಂತೆ ಇರುವ ಮಾರ್ಗಸೂಚಿಗಳನ್ನು ಅನುಸರಿಸಿ, ಡ್ರೈರನ್‌ ಅನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಜಿಲ್ಲಾ ನೋಡಲ್‌ ಅಧಿಕಾರಿ ಡಾ.ಅಶೋಕ ತಿಳಿಸಿದರು.

ಎಲ್ಲ ಫಲಾನುಭವಿಗಳ ಪಟ್ಟಿಯಂತೆ ಅವರ ಮಾಹಿತಿ, ಆರೋಗ್ಯ ತಪಾಸಣೆ ನಡೆಸಿದ ಬಳಿಕೆ ಅಣಕು ಲಸಿಕೆ ಹಾಕಲಾಯಿತು. ನಂತರ 30 ನಿಮಿಷಗಳ ವಿಶ್ರಾಂತಿಗೆ ಸಲಹೆ ನೀಡಲಾಯಿತು ಎಂದು ಹೇಳಿದರು.

ಸಿದ್ಧತೆಗೆ ಕಾರ್ಯಾಚರಣೆ

ಕೋವಿಡ್–19 ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ಅಣಕು ಲಸಿಕೆ ಕಾರ್ಯಾಚರಣೆಯನ್ನು ನಡೆಸಲಾಗಿದೆ.

ಲಸಿಕೆ ಹಾಕುವ ಕಾರ್ಯಕ್ರಮದ ಯೋಜನೆ, ಸಿದ್ಧತೆ, ಲಸಿಕೆಗೆ ಅಗತ್ಯವಿರುವ ಸಾಮಗ್ರಿಗಳ ಸಿದ್ಧತೆ, ಕೋವಿನ್‌ ಪೋರ್ಟಲ್‌ನಲ್ಲಿ ಲಸಿಕೆ ಪಡೆದವರ ಮಾಹಿತಿಯನ್ನು ಅಪ್‌ಲೋಡ್ ಮಾಡುವುದು, ದಾಖಲೆಗಳ ಪರಿಶೀಲನೆ, ಲಸಿಕೆಯ ನಂತರ ಅವರ ಆರೋಗ್ಯ ಸ್ಥಿತಿಯ ಮಾಹಿತಿ ದಾಖಲಿಸುವುದನ್ನು ನಡೆಸಲಾಯಿತು.

ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದ 39,800 ಮಂದಿಗೆ ಕೋವಿಡ್–19 ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎರಡನೇ ಹಂತದಲ್ಲಿ ಪೊಲೀಸರು, ಪೌರ ಕಾರ್ಮಿಕರಿಗೆ ಲಸಿಕೆ ಹಾಕಲಾಗುವುದು. ಮೂರನೇ ಹಂತದ 50 ವರ್ಷ ಮೇಲಿನವರಿಗೆ ಲಸಿಕೆ ಹಾಕುವ ಯೋಜನೆ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT