ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಕ್ಲಸ್ಟರ್ ತಪಾಸಣೆಗೆ ಒತ್ತು

ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಕಡಿಮೆ; ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲಿ ಶೂನ್ಯ
Last Updated 24 ಜೂನ್ 2022, 2:23 IST
ಅಕ್ಷರ ಗಾತ್ರ

ಮಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಪ್ರಮಾಣ ತುಸು ಏರಿಕೆ ಕಾಣುತ್ತಿದ್ದರೂ, ಮೂರನೇ ಅಲೆಯ ವೇಳೆ ಗರಿಷ್ಠ ಪ್ರಕರಣಗಳು ದಾಖಲಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಪ್ರಸ್ತುತ ಕೋವಿಡ್ ರೋಗಿಗಳ ಸಂಖ್ಯೆ ಒಂದಕಿಯಲ್ಲಿದೆ.

ಒಂದು ವಾರದಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿದ್ದರೂ, ಗಣನೀಯವಾಗಿ ಹೆಚ್ಚಳ ಆಗದಿರುವುದು ಆರೋಗ್ಯ ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ.

ಜೂನ್‌ 21ರಂದು 13 ಪಾಸಿಟಿವ್ ಪ್ರಕರಣಗಳು ಇದ್ದರೆ, 22ರಂದು 4 ಪ್ರಕರಣ ದಾಖಲಾಗಿದೆ. ಮುಂಗಾರು ಆರಂಭ ಆಗಿದ್ದರಿಂದ ಅಲ್ಲಲ್ಲಿ ಶೀತ, ಜ್ವರ ಪ್ರಕರಣಗಳು ಹೆಚ್ಚಿವೆ. ಇವನ್ನೆಲ್ಲ ಕೋವಿಡ್ ಎನ್ನಲಾಗದು. ವೈರಲ್‌ ಜ್ವರಗಳು ಕಾಣಿಸಿಕೊಳ್ಳುತ್ತಿವೆ. ಕೆಲವೆಡೆ ಡೆಂಗಿ, ಮಲೇರಿಯಾ ಪ್ರಕರಣಗಳು ಕೂಡ ಇವೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

‘ಮೂರು ಅಲೆಯ ಅನುಭವದ ಆಧಾರದಲ್ಲಿ ಜ್ವರದ ಲಕ್ಷಣ ಗಮನಿಸಿ, ತಕ್ಷಣ ಪರೀಕ್ಷೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಕಂಡು ಬಂದರೆ, ಸಂಬಂಧಿಸಿದ ಕ್ಲಸ್ಟರ್‌ನಲ್ಲಿ ತಪಾಸಣೆ ಮಾಡಲಾಗುತ್ತದೆ. ಪಾಸಿಟಿವ್ ಬಂದವರು ಹೊರ ಜಿಲ್ಲೆಗಳಿಂದ ಅಥವಾ ಹೊರ ರಾಜ್ಯದಿಂದ ಬಂದಿದ್ದರೆ ಪ್ರಯಾಣದ ವಿವರವನ್ನು ಮೊದಲು ಸಂಗ್ರಹಿಸಲಾಗುತ್ತದೆ. ಸ್ಥಳೀಯರಾಗಿದ್ದಲ್ಲಿ ವ್ಯಕ್ತಿಯ ಕುಟುಂಬದವರ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಕ್ಲಸ್ಟರ್ ಪ್ರಕರಣಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತೇವೆ’ ಎಂದು ಕೋವಿಡ್ ನೋಡಲ್ ಅಧಿಕಾರಿ ಡಾ. ಅಶೋಕ್ ಮಾಹಿತಿ ನೀಡಿದರು.

‘ನೆರೆಯ ರಾಜ್ಯ, ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಊರಿನಿಂದ ಮರಳಿ ಹಾಸ್ಟೆಲ್ ಸೇರಿದ ಮೇಲೆ ಜ್ವರ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಮಾಹಿತಿ ನೀಡಲು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ, ಜನರು ಎಚ್ಚರಿಕೆಯಿಂದ ಇರಬೇಕು. ಗುಂಪು ಸೇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಮರೆಯಬಾರದು’ ಎಂದು ಎಚ್ಚರಿಸಿದರು.

ಎರಡು ತಿಂಗಳುಗಳಿಂದ ದಿನಕ್ಕೆ ನಾಲ್ಕಾರು ಕೋವಿಡ್ ಪ್ರಕರಣ ಪತ್ತೆಯಾಗುತ್ತಿದ್ದರೂ, ಬಹುತೇಕ ಎಲ್ಲರೂ ಮನೆಯಲ್ಲೇ ಕ್ವಾರಂಟೈನ್‌ ಆಗಿ ಚಿಕಿತ್ಸೆ ಪಡೆದಿದ್ದಾರೆ. ಆಮ್ಲಜನಕ ಸಹಿತ ಯಾವುದೇ ಹೆಚ್ಚುವರಿ ಚಿಕಿತ್ಸೆ ನೀಡುವ ಸಂದರ್ಭ ಬರಲಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ 44 ಸಕ್ರಿಯ ಪ್ರಕರಣ ಇದ್ದು, ನಾಲ್ಕು ಜನರು ಮಾತ್ರ ಆಸ್ಪತ್ರೆಯ ಸಾಮಾನ್ಯ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಪಾಸಿಟಿವ್ ಪ್ರಮಾಣ ಶೂನ್ಯ ಇದೆ ಎಂದು ಅವರು ವಿವರಿಸಿದರು.

16 ವೈದ್ಯಕೀಯ ಆಮ್ಲಜನಕ ಘಟಕ

ಮೂರನೇ ಅಲೆಯ ನಂತರ ಜಿಲ್ಲೆಯಲ್ಲಿ ಒಟ್ಟು 5,725 ಎಲ್‌ಪಿಎಂ ಸಾಮರ್ಥ್ಯದ 16 ಆಮ್ಲಜನಕ ಉತ್ಪಾದನಾ ಘಟಕಗಳು ನಿರ್ಮಾಣವಾಗಿವೆ.

ನಗರದ ವೆನ್ಲಾಕ್‌ ಜಿಲ್ಲಾ ಆಸ್ಪತ್ರೆಯಲ್ಲಿ 1,000 ಎಲ್‌ಪಿಎಂ ಸ್ಥಾವರವನ್ನು ಪಿಎಂ ಕೇರ್ಸ್‌ ಫಂಡ್‌, 930 ಎಲ್‌ಪಿಎಂ ಸ್ಥಾವರವನ್ನು ಎಂಆರ್‌ಪಿಎಲ್‌ನಿಂದ ಹಾಗೂ ರಾಜ್ಯ ಸರ್ಕಾರದಿಂದ 500 ಎಲ್‌ಪಿಎಂನ ಸ್ಥಾವರ ಹೀಗೆ ಮೂರು ಘಟಕಗಳನ್ನು ಆರಂಭಿಸಲಾಗಿದೆ. ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಕ್ರೆಡೈ ಸಂಸ್ಥೆಯ ನೆರವಿನಲ್ಲಿ 500 ಎಲ್‌ಪಿಎಂ ಸಾಮರ್ಥ್ಯದ ಘಟಕ ಕಾರ್ಯಾರಂಭ ಮಾಡಿದೆ.

ಒಟ್ಟು 16 ಘಟಕಗಳಲ್ಲಿ 12 ಘಟಕಗಳನ್ನು ವಿವಿಧ ಕಂಪನಿಗಳ ಸಿಎಸ್‌ಆರ್‌ ಅನುದಾನದಲ್ಲಿ ನಿರ್ಮಿಸಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಆಮ್ಲಜನಕ ಘಟಕಗಳು ಇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT