ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ತಡೆಗೆ ಕಠಿಣ ನಿಲುವು ಅಗತ್ಯ: ಸಚಿವ ಶ್ರೀನಿವಾಸ ಪೂಜಾರಿ

ಪುತ್ತೂರು, ಬಂಟ್ವಾಳ, ಸುಳ್ಯ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ
Last Updated 2 ಮೇ 2021, 6:50 IST
ಅಕ್ಷರ ಗಾತ್ರ

ಪುತ್ತೂರು: ‘ಕೋವಿಡ್ ತಡೆಯುವುದು ಕೇವಲ ಆರೋಗ್ಯ ಇಲಾಖೆಯ ಮಾತ್ರ ಜವಾಬ್ದಾರಿಯಲ್ಲ. ಎಲ್ಲಾ ಇಲಾಖೆಗಳು ಕೈಜೋಡಿಸಿಕೊಂಡು ಅದನ್ನು ತಡೆಯುವ ಕೆಲಸ ನಡೆಯಬೇಕು. ಇದಕ್ಕಾಗಿ ಕಠಿಣ ವರ್ತನೆ ಮತ್ತು ಜಾಗೃತ ಹೆಜ್ಜೆಗಳ ಅಗತ್ಯವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೋವಿಡ್ ನಿಯಂತ್ರಣಕ್ಕೆ ಸಂಬಂಧ ಪುತ್ತೂರು ಪುರಭವನದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು,

‘ಅಧಿಕಾರಿಗಳು ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆ, ವೆಂಟಿಲೇಟರ್ ಇನ್ನಿತರ ಸೌಲಭ್ಯಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಶಾಸಕರೊಂದಿಗೆ ಚರ್ಚೆ ನಡೆಸಿ ಅವರ ಕಾರ್ಯಪಡೆಯ ಸಹಕಾರ, ಬೆಂಬಲವನ್ನು ಇಲಾಖೆಗಳು ಪಡೆದುಕೊಳ್ಳಬೇಕು’ ಎಂದರು.

ತಾಲ್ಲೂಕಿನ ಪ್ರಗತಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ‘ಕೋವಿಡ್ ಮೇಲ್ವಿಚಾರಣೆಗೆ ಅಗತ್ಯ ವ್ಯವಸ್ಥೆಗಳನ್ನು ತಕ್ಷಣವೇ ಮಾಡಿಕೊಳ್ಳಬೇಕು. ರೋಗಿಗಳಿಗೆ ಉತ್ತಮ ಆಹಾರ ನೀಡುವ ಜತೆಗೆ ಅವರ ಬಗ್ಗೆ ಎಲ್ಲಾ ರೀತಿಯ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು’ ಎಂದು ಪುತ್ತೂರು ಮತ್ತು ಕಡಬ ತಹಶೀಲ್ದಾರ್‌ಗೆ ಸೂಚನೆ ನೀಡಿದರು.

ಕೋವಿಡ್ ನಿರ್ವಹಣೆಗೆ ಪುತ್ತೂರಿ ನಲ್ಲಿ ₹ 35 ಲಕ್ಷ ಹಾಗೂ ಕಡಬದಲ್ಲಿ ₹ 18 ಲಕ್ಷ ಅನುದಾನ ಇದೆ ಎಂದು ಉಭಯ ತಹಶೀಲ್ದಾರರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ತಾನು ತಕ್ಷಣವೇ ಇನ್ನು ₹ 25 ಲಕ್ಷ ಅನುದಾನ ನೀಡುತ್ತೇನೆ ಎಂದು ತಿಳಿಸಿದ ಜಿಲ್ಲಾಧಿಕಾರಿ, ಉತ್ತಮ ರೀತಿಯಲ್ಲಿ ಮೇಲ್ವಿಚಾರಣೆ ಮಾಡುವಂತೆ ತಿಳಿಸಿದರು.

ಎಲ್ಲಾ ಖಾಸಗಿ ಆಂಬುಲೆನ್ಸ್‌ಗೆ ಜಿಪಿಎಸ್: ‘ಪುತ್ತೂರಿನಲ್ಲಿ ಒಟ್ಟು 10 ವೆಂಟಿಲೇಟರ್‌ ಗಳಿದ್ದು, ಇದು ಸರ್ವ ಸಮಯಕ್ಕೂ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಹೊರ ಜಿಲ್ಲೆ, ಹಾಗೂ ರಾಜ್ಯಗಳಿಂದ ಬರುವವರು ಕಡ್ಡಾಯ ಕೋವಿಡ್ ಸೆಂಟರ್‌ನಲ್ಲಿ ಕ್ವಾರಂಟೈನ್‌ನಲ್ಲಿರಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

ಕೋವಿಡ್‌ ಸೋಂಕಿತರ ಸಾಗಣೆಗೆ 108 ಆಂಬುಲೆನ್ಸ್‌ ಜತೆಗೆ ಖಾಸಗಿ ಆಂಬುಲೆನ್ಸ್‌ಗಳನ್ನು ಉಪಯೋಗಿಸಿ ಕೊಳ್ಳಲಾಗುವುದು. ರೋಗಿಗಳ ಸಂಚಾರದ ಬಗ್ಗೆ ಮಾಹಿತಿ ಪಡೆದು ಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಖಾಸಗಿ ಆಂಬುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ ಎಂದರು.

ಪುತ್ತೂರಿನಲ್ಲಿ ನರ್ಸ್‌ಗಳ ಕೊರತೆ: ಶಾಸಕ ಸಂಜೀವ ಮಠಂದೂರು ಮಾತನಾಡಿ, ‘ಪುತ್ತೂರಿನ ಆಸ್ಪತ್ರೆಗಳಲ್ಲಿ ನರ್ಸ್‌ಗಳ ಕೊರತೆಯಿದ್ದು, ಅದನ್ನು ಶೀಘ್ರ ಪರಿಹರಿಸಬೇಕು’ ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಖಾಲಿ ಇರುವ ಹುದ್ದೆಗೆ ಅರ್ಜಿ ಪಡೆದು, ತನಗೆ ಕಳುಹಿಸಿದಲ್ಲಿ ಮಂಜೂರಾತಿ ಗೊಳಿಸಲಾಗುವುದು’ ಎಂದು ತಿಳಿಸಿದರು.

ಸಚಿವ ಎಸ್. ಅಂಗಾರ ಮಾತನಾಡಿ, ‘ಕೋವಿಡ್ ಸೋಂಕಿತರು ಹೋಂ ಕ್ವಾರಂಟೈನ್‌ನಲ್ಲಿರುವ ಸಂದರ್ಭದಲ್ಲಿ ಹೊರ ಬಾರದಂತೆ ಹಾಗೂ ಇತರ ಮನೆಗಳಿಗೆ ಹೋಗದಂತೆ ಎಚ್ಚರಿಕೆ ಮೂಡಿಸುವ ಕೆಲಸ ಇಲಾಖೆಯಿಂದ ನಡೆಯಬೇಕು’ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಸಲಹೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕುಮಾರ್, ಪುತ್ತೂರು ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಪುತ್ತೂರು ಎಎಸ್ಪಿ ಡಾ. ಗಾನ ಪಿ. ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT