ಶನಿವಾರ, ಮೇ 28, 2022
30 °C
2ನೇ ಅಲೆ ಕಡಿಮೆಯಾದರೂ ಮೈಮರೆಯುವಂತಿಲ್ಲ: ಸಂಜೀವ ಮಠಂದೂರು

ಮೂರನೇ ಅಲೆಗೆ ಮುಂಜಾಗ್ರತೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪುತ್ತೂರು: ‘ಕೋವಿಡ್ ಸೋಂಕಿನ 2ನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದು, ಮುಂದೆ ರಾಜ್ಯದಲ್ಲಿ ಲಾಕ್‌ಡೌನ್ ವಾಪಸ್‌ ಪಡೆದರೂ ಯಾರೂ ಮೈಮರೆತು ಓಡಾಡುವಂತಿಲ್ಲ. ಕೋವಿಡ್ ಮೂರನೇ ಅಲೆ ಆರಂಭಗೊಳ್ಳುವ ಸಾಧ್ಯತೆ ಇರುವುದರಿಂದ ಮುಂದೆಯೂ ಮುಂಜಾಗ್ರತೆ ವಹಿಸುವುದು ತೀರಾ ಅಗತ್ಯ’ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರಿನ ಪುರಭವನದಲ್ಲಿ ಮಂಗಳವಾರ ನಗರಸಭೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅವರು, ನಗರಸಭಾ ವ್ಯಾಪ್ತಿಯ ಮನೆಗಳಿಗೆ ಪ್ರಥಮ ಹಂತದ ಸೊಳ್ಳೆ ಪರದೆ ವಿತರಣೆ ಮಾಡಿ ಹಾಗೂ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕೋವಿಡ್ ಜಾಗೃತಿ ಮೂಡಿಸಲು ವಾರ್ಡ್‌ವಾರು ಮನೆಭೇಟಿ ಕಾರ್ಯಕ್ರಮದಲ್ಲಿ ಶ್ರಮಿಸಿದ ಸಿಬ್ಬಂದಿಗೆ ಗೌರವಾರ್ಪಣೆ ಮಾಡಿ ಮಾತನಾಡಿದರು.

‘ಜನಜೀವನ ಸಹಜ ಸ್ಥಿತಿಗೆ ಬರುವಂತಾಗಲು ಕೋವಿಡ್ ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಕೋವಿಡ್ ಸೋಂಕು ಹರಡುವುದನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜತೆಗೆ ನಾಗರಿಕ ಪ್ರಜ್ಞೆಯಿಂದ ಸ್ಥಳಿಯಾಡಳಿತಗಳು ಯೋಜನೆಗಳನ್ನು ರೂಪಿಸುವ ಮೂಲಕ ಸರ್ಕಾರದ ಹೊರೆಯನ್ನು ಹಗುರ ಮಾಡಿವೆ. ಮನೆ ಮನೆ ಭೇಟಿ ನೀಡಿ ನಡೆಸಿದ ಕೋವಿಡ್ ಜಾಗೃತಿ ಅಭಿಯಾನದ ಪರಿಣಾಮವಾಗಿ ನಗರಸಭಾ ವ್ಯಾಪ್ತಿಯಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗಿದೆ. ಸಹಜ ಸ್ಥಿತಿಗೆ ಬರಲು ಇನ್ನಷ್ಟು ಕಾರ್ಯಗಳು ಆಗಬೇಕಿದೆ’ ಎಂದರು.

ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಅವರು ಮಾತನಾಡಿ, ಡೆಂಗಿ ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಮೊದಲ ಹಂತದಲ್ಲಿ ಅವಶ್ಯಕತೆ ಇರುವ ಕುಟುಂಬಗಳಿಗೆ ಸೊಳ್ಳೆ ಪರದೆ ವಿತರಿಸಲಾಗುವುದು’ ಎಂದರು.

ನಗರ ಸಭಾ ನೋಡಲ್ ಅಧಿಕಾರಿ ಗಳು, ಸಿಬ್ಬಂದಿ ಹಾಗೂ ಕೋವಿಡ್ ಮಾರ್ಷಲ್‌ಗಳನ್ನು ಗೌರವಿಸಲಾಯಿತು.

ನಗರಸಭೆಯ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸದಸ್ಯರಾದ ಸುಂದರ ಪೂಜಾರಿ ಬಡಾವು, ಬಾಲಚಂದ್ರ ಮರೀಲ್, ಶಶಿಕಲಾ ಸಿ.ಎಸ್, ಪೂರ್ಣಿಮಾ, ಫಾತಿಮತ್ ಝೋರಾ ಅನಿಸಿಕೆ ವ್ಯಕ್ತಪಡಿಸಿದರು.

ನಗರಸಭಾ ಸದಸ್ಯರಾದ ಸಂತೋಷ್ ಬೊಳುವಾರು, ಮನೋಹರ್ ಕಲ್ಲಾರೆ, ಯೂಸೂಫ್ ಡ್ರೀಮ್, ಶಿವರಾಮ ಸಪಲ್ಯ, ಮೋಹಿನಿ ಬನ್ನೂರು, ವಸಂತ ಕಾರೆಕ್ಕಾಡು, ಇಂದಿರಾ ಪುರುಷೋತ್ತಮ, ಪದ್ಮನಾಭ ನಾಯ್ಕ, ರೋಹಿಣಿ, ಪ್ರೇಮ್ ಕುಮಾರ್, ಶೀನಪ್ಪ ನಾಯ್ಕ, ನವೀನ್ ಕುಮಾರ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.