ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕೋವಿಡ್‌ ಪ್ಯಾಕೇಜ್‌- ಹಲವರ ಖಾತೆಗಿಲ್ಲ ನಗದು

ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ಕಾರ್ಮಿಕರಿಗಿಲ್ಲ ರಾಜ್ಯ ಸರ್ಕಾರದ ವಿಶೇಷ ಪರಿಹಾರ ಹಣದ ಭಾಗ್ಯ
Last Updated 21 ಜೂನ್ 2021, 7:05 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್‌ ಲಾಕ್‌ಡೌನ್‌ನಿಂದ ತತ್ತರಿಸಿರುವ ಶ್ರಮಿಕ ವರ್ಗದ ಸಂಕಷ್ಟಕ್ಕೆ ಮಿಡಿಯಲು ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್‌ ಹಣ ಇನ್ನೂ ಹಲವರ ಖಾತೆಗೆ ಜಮೆಯೇ ಆಗಿಲ್ಲ. ಪ್ಯಾಕೇಜ್‌ ವ್ಯಾಪ್ತಿಗೆ ಬರುವ ಶ್ರಮಿಕರು ‘ಸೇವಾಸಿಂಧು’ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಕೆಲವರ ಖಾತೆಗೆ ಮಾತ್ರ ಹಣ ಜಮೆ ಆಗಿದೆ.

ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬೀಡಿ ಕಾರ್ಮಿಕರಿಗೆ ಸರ್ಕಾರ ಘೋಷಣೆ ಮಾಡಿರುವ ಪ್ಯಾಕೇಜ್‌ ಪರಿಹಾರ ಸಿಗುತ್ತಿಲ್ಲ. ಗೇರು, ಟೈಲ್ಸ್‌, ಕೈಗಾರಿಕೆಯಲ್ಲಿ ದುಡಿಯುವ ಕಾರ್ಮಿಕ ವರ್ಗಕ್ಕೆ ಪ್ಯಾಕೇಜ್‌ ಅನ್ವಯವಾಗುತ್ತಿಲ್ಲ ಎಂಬ ನೋವು ಕಾರ್ಮಿಕ ವಲಯದಲ್ಲಿ ಇದೆ.

‘ಅಸಂಘಟಿತ ಕಾರ್ಮಿಕರು ಪ್ಯಾಕೇಜ್‌ ಪಡೆಯಲು ಸಾಕಷ್ಟು ಸರ್ಕಸ್ ಮಾಡಬೇಕಾದ ಸ್ಥಿತಿ ಇದೆ. ಎಷ್ಟು ಜನರಿಗೆ ಈ ಯೋಜನೆ ತಲುಪುತ್ತದೆ ಎಂಬುದೇ ಅನುಮಾನ. ಕೆಲ ಶ್ರಮಿಕ ವರ್ಗಕ್ಕೆ ಬಿಪಿಎಲ್‌ ಕಾರ್ಡ್‌ ಕಡ್ಡಾಯ ಮಾಡಲಾಗಿದೆ. ಎಪಿಎಲ್‌ ಕಾರ್ಡ್‌ ಹೊಂದಿದವರಿಗೆ ಈ ಪ್ಯಾಕೇಜ್‌ ಅನ್ವಯ ಆಗುವುದಿಲ್ಲ ಎಂಬ ಸರ್ಕಾರದ ನಿಯಾಮಾವಳಿ ಬಿಸಿ ತುಪ್ಪವಾಗಿದೆ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತೆ ಈ ಪ್ಯಾಕೇಜ್‌ ಘೋಷಣೆ’ ಎಂದು ಕಾರ್ಮಿಕ ಮುಖಂಡ ಜೆ. ಬಾಲಕೃಷ್ಣ ಶೆಟ್ಟಿ ಹೇಳಿದರು.

‘ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವಾಗ ಆಟೊ ಚಾಲಕರ ಬ್ಯಾಡ್ಜ್‌ ಲೈಸನ್ಸ್‌ ಸಂಖ್ಯೆ ನಮೂದಿಸುವ ಆಯ್ಕೆ ಇದೆ. ಬ್ಯಾಡ್ಜ್‌ ಸಂಖ್ಯೆ ನಮೂದಿಸದೆ ಇದ್ದಲ್ಲಿ ಅರ್ಜಿ ತಿರಸ್ಕೃತವಾಗುತ್ತದೆ. ಈಗಾಗಲೇ ಹಲವು ಆಟೊ ಚಾಲಕರ ಬ್ಯಾಡ್ಜ್‌ ಲೈಸೆನ್ಸ್‌ ಅನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರದ್ದು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿ ಆಟೊ ಚಾಲಕರು ಇದ್ದೇವೆ. ಶೇ 60ರಷ್ಟು ಮಂದಿಗೆ ಮಾತ್ರ ₹ 3,000 ಪ್ಯಾಕೇಜ್‌ ಹಣ ಖಾತೆಗೆ ಜಮೆ ಆಗಿದೆ’ ಎಂದು ಮಂಗಳೂರು ನಗರ ಆಟೊರಿಕ್ಷಾ ಚಾಲಕ, ಮಾಲೀಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮೊಹ್ಮದ್‌ ಇರ್ಫಾನ್‌ ಹಾಗೂ ಕಾರ್ಯದರ್ಶಿ ಅರುಣಕುಮಾರ್‌ ತಿಳಿಸಿದರು.

‘ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ ನೋಂದಣಿ ಮಾಡಿಕೊಂಡಿದ್ದ 1,026 ಮಂದಿ ಅಗಸರು, ಕ್ಷೌರಿಕರಿಗೆ ₹ 2,000 ಖಾತೆಗೆ ಜಮೆ ಆಗಿದೆ. ಅಸಂಘಟಿತ ಕಾರ್ಮಿಕರಿಗೆ ಅರ್ಜಿ ಹಾಕಲು ಜುಲೈ 20ರವರೆಗೆ ಅವಕಾಶವಿದೆ. ಬಿಪಿಎಲ್‌ ಕಾರ್ಡ್‌ ಹೊಂದಿರುವ 18 ರಿಂದ 50 ವರ್ಷದೊಳಗಿನವರು ಪ್ಯಾಕೇಜ್‌ ಪಡೆಯಲು ಅರ್ಹರಾಗಿದ್ದಾರೆ. ಜಿಲ್ಲೆ ಯಲ್ಲಿ 3,100 ಮಂದಿ ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಹಾಕಿದ್ದಾರೆ. 10 ಸಾವಿರ ಮಂದಿ ಸ್ಮಾರ್ಟ್‌ ಕಾರ್ಡ್‌ಗೆ ಅರ್ಜಿ ಹಾಕಿದ್ದಾರೆ. ಇಎಸ್‌ಐ, ಪಿಎಫ್‌, ವೇತನ ಪಡೆಯುವ ಸಂಘಟಿತ ಕಾರ್ಮಿಕರಿಗೆ ಪ್ಯಾಕೇಜ್‌ ಅನ್ವಯ ಆಗುವುದಿಲ್ಲ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಪ ವಿಭಾಗದ ಹಿರಿಯ ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೋ ತಿಳಿಸಿದರು.

‘ಜಿಲ್ಲೆಯ ಮೀನುಗಾರರ ಖಾತೆಗೆ ಇನ್ನೂ ಪರಿಹಾರ ಮೊತ್ತ ಜಮೆ ಆಗಿಲ್ಲ. ಸರ್ಕಾರದಿಂದ ಈವರೆಗೆ ಆದೇಶವಾಗದೆ ಇರುವುದರಿಂದ ವಿಳಂಬವಾಗಿದೆ. ಫಲಾನುಭವಿಗಳ ಪಟ್ಟಿ ತಯಾರಿಸಲಾಗುತ್ತಿದೆ. ಉಳಿತಾಯ ಪರಿಹಾರ ಯೋಜನೆ ಅಡಿ 1,318 ಮಂದಿಗೆ ಕೋವಿಡ್‌ ಪ್ಯಾಕೇಜ್‌ನಲ್ಲಿ ಪರಿಹಾರ ನೀಡಲಾಗುತ್ತದೆ. ನಾಡ ದೋಣಿ ಹೊಂದಿದವರು ರಿಯಲ್‌ ಕ್ರಾಫ್ಟ್‌ ಸಾಫ್ಟವೇರ್‌ನಲ್ಲಿ ಪಾತಿ ದೋಣಿ ನೋಂದಣಿ ಮಾಡಿಕೊಂಡಿರಬೇಕು. ಅಂತಹವರಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ’ ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಹರೀಶ್‌ಕುಮಾರ್‌ ತಿಳಿಸಿದರು.

‘ಸವಿತ ಸಮಾಜದ 900 ಮಂದಿಗೆ ಹಣ ಜಮೆ ಆಗಿದೆ. ಉಳಿದ 45 ಮಂದಿಗೆ ಹಣ ಬಂದಿಲ್ಲ. ಜಿಲ್ಲೆಯಲ್ಲಿ ಒಟ್ಟು 5 ಸಾವಿರ ಮಂದಿ ಇದ್ದೇವೆ. ಕಳೆದ ಬಾರಿ ₹ 5,000 ಹಣ ಬಂದಿತ್ತು, ಈ ಬಾರಿ ₹ 2,000 ಹಣ ಜಮೆ ಆಗಿದೆ. ನಮ್ಮನ್ನು ಸರ್ಕಾರ ಗುರುತಿಸಿದೆ ಎಂಬುದೇ ಖುಷಿ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ತಿಳಿಸಿದರು.

‘ಘೋಷಣೆ ಮಾತ್ರ ಆಗಿದೆ. ಹಣ ಬಂದು ತಲುಪವ ವೇಳೆ ಕಲಾವಿದರ ಸ್ಥಿತಿ ಶೋಚನೀಯವಾಗಿರುತ್ತದೆ. ಸರ್ಕಾರಕ್ಕೆ ಕಲಾವಿದರ ಬಗ್ಗೆ ಕಾಳಜಿಯೇ ಇಲ್ಲ. ಕಲಾವಿದರ ಘನತೆಗೆ ತಕ್ಕಂತೆ ಕನಿಷ್ಠ ₹ 10 ಸಾವಿರ ಪರಿಹಾರ ಘೋಷಣೆ ಮಾಡಬೇಕು. 35 ವರ್ಷ ಮೇಲ್ಪಟ್ಟವರಿಗೆ ಯೋಜನೆಗೆ ಸೇರಿಸಲಾಗಿದ್ದು, ಇದಕ್ಕಿಂತ ಚಿಕ್ಕ ವಯಸ್ಸಿನ ಕಲಾವಿದರೂ ಇದ್ದಾರೆ.ಇದು ಕಾಟಾಚಾರಕ್ಕೆ ನೀಡಿದಪ್ಯಾಕೇಜ್‌’ ಎಂದು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಮಾಜಿ ಸದಸ್ಯ ಭಾಸ್ಕರ್‌ ರೈ ಕುಕ್ಕುವಳ್ಳಿ ಹೇಳಿದರು.

ಅರ್ಹ ಫಲಾನುಭವಿಗಳು ಸಂಖ್ಯೆ

ಅಸಂಘಟಿತ ಕಾರ್ಮಿಕರು– 7695,
ಕಟ್ಟಡ ಕಾರ್ಮಿಕರು– 67000,
ಆಟೋ ರಿಕ್ಷಾ ಚಾಲಕರು– 2,5000( ಅಧಿಕ)
ಕಲಾವಿದರು– 1275
ಸವಿತ ಸಮಾಜ– 5000
ಹೂ, ಹಣ್ಣು ಬೆಳೆಗಾರರು – 175
ಮೀನುಗಾರರು – 1,318

‘ನೇರ ನಗದು ಜಮೆ’

‘ಅಗಸರು, ಕ್ಷೌರಿಕರು, ಕುಂಬಾರರು, ಅಕ್ಕಸಾಲಿಗರು, ಚಮ್ಮಾರರು, ಟೇಲರ್‌ಗಳು, ಹಮಾಲಿಗಳು, ಮನೆ ಕೆಲಸ ಮಾಡುವವರಿಗೆ ₹ 2,000 ಪರಿಹಾರ ನೀಡಲಾಗುತ್ತದೆ. ಈ ಪೈಕಿ ಉಳಿದವರು ಇದ್ದರೆ ಅರ್ಜಿ ಸಲ್ಲಿಸಬಹುದು. ಜಿಲ್ಲೆಗೆ ₹ 20.50 ಲಕ್ಷ ಪರಿಹಾರ ಹಣ ಘೋಷಣೆ ಆಗಿದೆ. ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಈ ಪ್ಯಾಕೇಜ್‌ ಅನ್ವಯ. ಆಧಾರ, ಉದ್ಯೋಗ ದೃಢೀಕರಣ ಪತ್ರ, ಬ್ಯಾಂಕ್‌ ಪಾಸ್‌ಬುಕ್‌, ಬಿಪಿಎಲ್‌ ಕಾರ್ಡ್‌ ಕಡ್ಡಾಯವಾಗಿ ಸೇವಾ ಸಿಂಧುವಿನಲ್ಲಿ ಅಪ್‌ಲೋಡ್‌ ಮಾಡಬೇಕು. ಈಗಾಗಲೇ ನೋಂದಣಿ ಮಾಡಿಕೊಂಡಿಕೊಂಡಿರುವ ಕಟ್ಟಡ ಕಾರ್ಮಿಕರಿಗೆ ಪ್ಯಾಕೇಜ್‌ ನಗದು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ. ಜಿಲ್ಲೆಯಲ್ಲಿ 6,7000 ಮಂದಿ ಕಟ್ಟಡ ಕಾರ್ಮಿಕರು ಇದ್ದಾರೆ’ ಎಂದು ಜಿಲ್ಲಾ ಉಪ ವಿಭಾಗದ ಹಿರಿಯ ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೋ ತಿಳಿಸಿದರು.

ಪ್ರಕ್ರಿಯೆ ನಡೆಯುತ್ತಿದೆ: ನಿತಿನ್‌ ಕುಮಾರ್‌

‘ಜಿಲ್ಲೆಯಲ್ಲಿ ಮೀನುಗಾರರಿಗೆ ಪರಿಹಾರ ನೀಡುವುದಕ್ಕೆ ಪ್ರಕ್ರಿಯೆಗಳು ನಡೆಯುತ್ತಿವೆ. ಉಳಿತಾಯ ಪರಿಹಾರ ಯೋಜನೆಯಲ್ಲಿ ಸದಸ್ಯತ್ವ ಹೊಂದಿದ ಮೀನುಗಾರರು ಈ ಪ್ಯಾಕೇಜ್‌ ಪಡೆಯಲು ಅರ್ಹರು. ಮೀನುಗಾರಿಕಾ ವೃತ್ತಿ ವೇಳೆ ಪಿಗ್ಮಿ ಮಾದರಿ ಹಣ ಸಂಗ್ರಹ ಮಾಡಲಾಗುತ್ತದೆ. ಇಂತಹ ಯೋಜನೆಯಲ್ಲಿ ಇರುವವರಿಗೆ ₹ 3000 ಪರಿಹಾರ ನೀಡಲಾಗುತ್ತದೆ. ಸಣ್ಣ ದೋಣಿ ನೋಂದಣಿ ಮಾಡಿಕೊಂಡವರಿಗೆ ಪ್ಯಾಕೇಜ್‌ ಅನ್ವಯವಾಗಲಿದೆ. ಅವರ ಖಾತೆಗೆ ಪ್ಯಾಕೇಜ್‌ ಹಣ ನೇರವಾಗಿ ಖಾತೆಗೆ ಜಮೆ ಆಗಲಿದೆ’ ಎಂದು ಮೀನುಗಾರಿಗಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌ ತಿಳಿಸಿದರು.


‘ಇನ್ನು ಹಣ ಜಮೆ ಆಗಿಲ್ಲ’

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,275 ಮಂದಿ ಕಲಾವಿದರು ಪ್ಯಾಕೇಜ್‌ ಪರಿಹಾರಕ್ಕೆ ಅರ್ಜಿ ಹಾಕಿದ್ದರು. 1,230 ಮಂದಿ ಕಲಾವಿದರ ಅರ್ಜಿ ಸಿಂಧುವಾಗಿವೆ. ಪ್ರತಿ ಕಲಾವಿದರಿಗೆ ₹ 3 ಸಾವಿರ ಪರಿಹಾರ ಸಿಗಲಿದೆ. ರಾಜ್ಯದಲ್ಲಿ ಹೆಚ್ಚುವರಿ ಅರ್ಜಿಗಳು ಬಂದಿರುವುದರಿಂದ ಪರಿಹಾರ ಇನ್ನೂ ಕಲಾವಿದರ ಖಾತೆಗೆ ಜಮೆ ಆಗಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್‌ ತಿಳಿಸಿದರು.

‘ಪಟ್ಟಿ ಕಳುಹಿಸಿ ಕೊಡಲಾಗಿದೆ’

‘ಜಿಲ್ಲೆಯ 130 ಹೂ ಬೆಳೆಗಾರರು ಹಾಗೂ 45 ಮಂದಿ ಹಣ್ಣಿನ ಬೆಳೆಗಾರರಿಗೆ ಪ್ಯಾಕೇಜ್‌ ಹಣ ದೊರೆಯುತ್ತದೆ ಹೆಕ್ಟೇರ್‌ಗೆ ₹ 15 ಸಾವಿರ ನೀಡಲಾಗುತ್ತದೆ. ಕನಿಷ್ಠ ₹ 2 ಸಾವಿರ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ. ಹೂ ಬೆಳೆಗಾರರಿಗೆ ಒಟ್ಟು ₹ 3.25 ಲಕ್ಷ, ಹಣ್ಣು ಬೆಳೆಗಾರರಿಗೆ ₹ 2.24 ಲಕ್ಷ ಹಣ ಬಿಡುಗಡೆ ಆಗಿದೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ತೋಟಗಾರಿಕಾ ಅಧಿಕಾರಿ ಅರ್ಚನಾ ತಿಳಿಸಿದರು.


‘ಜಿಲ್ಲೆಗೆ ಗರಿಷ್ಠ ಮಟ್ಟದ ಲಾಭ’

ಕೋವಿಡ್‌ ಪ್ಯಾಕೇಜ್‌ನಿಂದ ಜಿಲ್ಲೆಯ ಹಲವಾರು ಶ್ರಮಿಕ ವರ್ಗಗಳಿಗೆ ಸಹಾಯವಾಗಿದೆ. ಮಹಿಳಾ ಮೀನುಗಾರರಿಗೆ ಅನುಕೂಲವಾಗಲು ಅವರನ್ನು ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ. ಬೀಡಿ ಕಾರ್ಮಿಕರಿಗೂ ಪ್ಯಾಕೇಜ್‌ ಲಾಭ ಸಿಗಬೇಕಿತ್ತು, ಆದರೆ ಅವರಿಗೆ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಈ ಉದ್ದೇಶದಿಂದ ಪ್ಯಾಕೇಜ್‌ನಿಂದ ಹೊರಗೆ ಇಟ್ಟಿರಬಹುದು. ಆಟೊ ರಿಕ್ಷಾ ಚಾಲಕರಿಗೆ ಬ್ಯಾಡ್ಜ್‌, ಮೀನುಗಾರರಿಗೆ ಪೋರ್ಟ್‌ನಲ್ಲಿ ಅವಕಾಶ ಬಾರದೇ ಇರುವುದು, ಕಟ್ಟಡ ಕಾರ್ಮಿಕರಿಗೆ ನೋಂದಣಿ ಮಾಡದೇ ಇರುವವರಿಗೂ ಅವಕಾಶ ನೀಡುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ಜಿಲ್ಲೆಗೆ ಗರಿಷ್ಠ ಲಾಭ’

ಕೋವಿಡ್‌ ಪ್ಯಾಕೇಜ್‌ನಿಂದ ಜಿಲ್ಲೆಯ ಹಲವಾರು ಶ್ರಮಿಕ ವರ್ಗಗಳಿಗೆ ಸಹಾಯವಾಗಿದೆ. ಮಹಿಳಾ ಮೀನುಗಾರರಿಗೆ ಅನುಕೂಲವಾಗಲು ಅವರನ್ನು ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ. ಬೀಡಿ ಕಾರ್ಮಿಕರಿಗೂ ಪ್ಯಾಕೇಜ್‌ ಲಾಭ ಸಿಗಬೇಕಿತ್ತು, ಆದರೆ ಅವರಿಗೆ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಈ ಉದ್ದೇಶದಿಂದ ಪ್ಯಾಕೇಜ್‌ನಿಂದ ಹೊರಗೆ ಇಟ್ಟಿರಬಹುದು. ಆಟೊ ರಿಕ್ಷಾ ಚಾಲಕರಿಗೆ ಬ್ಯಾಡ್ಜ್‌, ಮೀನುಗಾರರಿಗೆ ಪೋರ್ಟ್‌ನಲ್ಲಿ ಅವಕಾಶ ಬಾರದೇ ಇರುವುದು, ಕಟ್ಟಡ ಕಾರ್ಮಿಕರಿಗೆ ನೋಂದಣಿ ಮಾಡದೇ ಇರುವವರಿಗೂ ಅವಕಾಶ ನೀಡುವ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT