ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ಪಡುಮಲೆಯಲ್ಲಿ ಬ್ರಹ್ಮಕಲಶ ಸಂಪನ್ನ

ಸೀಮಿತ ಜನರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ
Last Updated 27 ಏಪ್ರಿಲ್ 2021, 4:04 IST
ಅಕ್ಷರ ಗಾತ್ರ

ಪುತ್ತೂರು: ತಾಲ್ಲೂಕಿನ ಪಡುವನ್ನೂರಿನ ಪಡುಮಲೆಯಲ್ಲಿರುವ ನಾಗ ಬೆರ್ಮೆರ ಗುಡಿ, ನಾಗ ಸನ್ನಿಧಿ, ರಕ್ತೇಶ್ವರಿ, ತೀರ್ಥಬಾವಿ ಮತ್ತು ದೇಯಿ ಬೈದೆತಿ ಸಾನ್ನಿಧ್ಯ (ಸಮಾಧಿ)ದ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಶನಿವಾರ ಬ್ರಾಹ್ಮಿ ಮುಹೂರ್ತದಲ್ಲಿ ಸರಳವಾಗಿ ನಡೆಯಿತು.

ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಶನಿವಾರ ನಸುಕಿನ ಜಾವ 3 ಗಂಟೆಗೆ ಅಲ್ಪ ಪ್ರಾಸಾದ ಶುದ್ಧಿ, ಪ್ರಾಸಾದ ಪ್ರತಿಷ್ಠೆ, 3.58 ರಿಂದ 4.21ರ ಮೀನ ಸುಮುಹೂರ್ತದಲ್ಲಿ ಪ್ರತಿಷ್ಠೆ ಜೀವಕಲಶಾಭಿಷೇಕ, ಮಹಾಪೂಜೆ, ಗಣಪತಿ ಹವನ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ ಸೇರಿದಂತೆ ವಿವಿಧ ಪೂಜಾವಿಧಿವಿಧಾನ ನಡೆಯಿತು.

ಈ ಮೂಲಕ ಪಡುಮಲೆ ಸಾನ್ನಿಧ್ಯದಲ್ಲಿ 550 ವರ್ಷದಿಂದ ನಿಂತಿದ್ದ ಪೂಜಾ ವಿಧಿವಿಧಾನಗಳಿಗೆ ಶನಿವಾರ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಹಾಗೂ ಸೀಮಿತ ಭಕ್ತರ ಸಮ್ಮುಖದಲ್ಲಿ ಚಾಲನೆ ದೊರೆಯಿತು. ಕುಂಬಳೆ ಸೀಮೆ ಅರ್ಚಕರ ವೈಭವದ ವೇದಘೋಷ ಆರಂಭಗೊಳ್ಳುತ್ತಿದ್ದಂತೆ ಸಾನ್ನಿಧ್ಯದಡೆಗೆ ನಾಗರಹಾವು ಬಂದಿರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿತು.

ದೈವಜ್ಞರಿಂದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ತಲೆಯಲ್ಲಿ ನಾಗಾಭರಣದ ಕಿರೀಟವನ್ನು ಧರಿಸಿ ಅಶ್ವಾರೂಢ ಭಂಗಿಯಲ್ಲಿರುವ ಬೆರ್ಮೆರೆ ಗುಂಡ, ಕೋಟಿ ಚೆನ್ನಯರ ಕುಲದೇವರಾದ ನಾಗಬೆರ್ಮೆರ್ ಅವರ ಶಿಲಾಮಯವಾದ ಮೂಲಸ್ಥಾನ, ಜತೆಗೆ ಬಲಬದಿಯಲ್ಲಿ ಚಿತ್ರಕೂಟ ಸಂಕಲ್ಪದಲ್ಲಿ ನಾಗಬ್ರಹ್ಮ, ನಾಗಕನ್ನಿಕೆ, ನಾಗರಾಜ ಮತ್ತು ನಾಗ ಸನ್ನಿಧಿ ಮತ್ತು ಎಡಬದಿಯಲ್ಲಿ ರಕ್ತೇಶ್ವರಿ ದೈವದ ಸ್ಥಾನ ನಿರ್ಮಾಣವಾಗಿದೆ. ಮುಂಭಾಗದಲ್ಲಿ ಅರಮನೆ ವತಿಯಿಂದ ಅಂತ್ಯಸಂಸ್ಕಾರಗೊಂಡ ದೇಯಿಬೈದೆದಿಯ ಸಮಾಧಿ ಸ್ಥಳ, ದೈವೀಶಕ್ತಿಯ ನಾಗಗಳು ನೀರು ಕುಡಿಯುವ ಪವಿತ್ರ ತೀರ್ಥ ಸ್ಥಳ ನವೀಕರಣಗೊಂಡಿದೆ.

‘ಕೋವಿಡ್‌ ಮಾರ್ಗಸೂಚಿಯ ಅನ್ವಯ ಕಾರ್ಯಕ್ರಮ ಮುಂದೂಡಲು ಚಿಂತನೆ ನಡೆಸಿದ್ದೆವು. ಆದರೆ, ಪಡುಮಲೆ ಸಾನ್ನಿಧ್ಯದಲ್ಲಿ ಆರಾಧನೆ ಆರಂಭಕ್ಕೆ ಶನಿವಾರವೇ ಶ್ರೇಷ್ಠ ಕಾಲ. ಈ ಕಾಲಘಟ್ಟದಲ್ಲಿ ಆರಾಧನಾ ಕ್ರಮಗಳು ಆರಂಭಗೊಳ್ಳದಿದ್ದರೆ ಮುಂದಿನ 5- 6 ಶತಮಾನಗಳವರೆಗೆ ಮತ್ತೆ ಕಾಯಬೇಕಾಗಬಹುದು ಎಂಬ ಮಾತು ಪ್ರಶ್ನಾ ಚಿಂತನೆಯಲ್ಲಿ ಮೂಡಿಬಂದ ಕಾರಣ ಸರಳವಾಗಿ ಬ್ರಹ್ಮಕಲಶದ ವಿಧಿಗಳನ್ನು ನೆರವೇರಿಸಲಾಗಿದೆ’ ಎಂದು ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT