ಶುಕ್ರವಾರ, ಜುಲೈ 30, 2021
28 °C
ಖಾಸಗಿ ಆಸ್ಪತ್ರೆಯ ದುಬಾರಿ ದರ ಕೇಳಿ ದಂಗಾದ ಆಟೋ ಚಾಲಕ ಸಿರಾಜ್

ಕೊರೊನಾ ದೃಢಪಟ್ಟಿರುವ ಕಾರಣ ಕಾಲಿನ ಶಸ್ತ್ರಚಿಕಿತ್ಸೆ ನಡೆದಿಲ್ಲ: ಆಟೋ ಚಾಲಕನ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ದಯವಿಟ್ಟು ಕಾಪಾಡಿ. ನನ್ನ ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿ ನನ್ನನ್ನು ಬದುಕಿಸಿ. ನನಗೆ ಕೊರೊನಾಕ್ಕಿಂತಲೂ ಕಾಲು ನೋವೇ ತೀವ್ರವಾಗಿದೆ. ನೋವಿನಲ್ಲಿ ನಿದ್ದೆಯೂ ಬರುತ್ತಿಲ್ಲ...’

–ಹೀಗೆ ನೋವು ತೋಡಿಕೊಂಡವರು ತಾಲ್ಲೂಕಿನ ಮಲ್ಲಾರು ಬಜಿಲನಗರದ ಆಟೊ ಚಾಲಕ ಸಿರಾಜ್. ಈಚೆಗೆ ಅಪಘಾತದಲ್ಲಿ ಕಾಲಿಗೆ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋವಿಡ್–19 ಸೋಂಕು ದೃಢಪಟ್ಟಿರುವ ಕಾರಣ ಶಸ್ತ್ರಕ್ರಿಯೆ ನಡೆದಿಲ್ಲ.

‘ಬುಧವಾರ ರಿಕ್ಷಾ ಉರುಳಿಬಿದ್ದು, ನನ್ನ ಕಾಲಿಗೆ ಗಾಯವಾಗಿತ್ತು. ಸ್ಥಳೀಯರು ನನ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು. ಅಲ್ಲಿ ಶುಕ್ರವಾರ ಶಸ್ತ್ರಚಿಕಿತ್ಸೆ ನಡೆಸುವುದಾಗಿ ತಿಳಿಸಿದರು. ಆದರೆ, ಶುಕ್ರವಾರ ಬೆಳಿಗ್ಗೆ ನನ್ನಲ್ಲಿಗೆ ಬಂದ ಆಸ್ಪತ್ರೆಯ ಸಿಬ್ಬಂದಿ, ‘ನಿಮಗೆ ಕೋವಿಡ್–19 ಸೋಂಕು ಇದೆ. ಅದಕ್ಕೂ ಚಿಕಿತ್ಸೆ ಆಗಬೇಕು. ಸುಮಾರು ₹1 ಲಕ್ಷಕ್ಕೂ ಹೆಚ್ಚು ವೆಚ್ಚವಾಗಬಹುದು’ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು’ ಎಂದು ಸಿರಾಜ್ ಆಘಾತಕ್ಕೀಡಾದ ಕ್ಷಣಗಳ ನೋವನ್ನು ತೋಡಿಕೊಂಡರು.

‘ಹಾಗಿದ್ದರೆ, ನನ್ನನ್ನು ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಿ ಎಂದು ಅವರಲ್ಲಿ ಬೇಡಿಕೊಂಡೆನು. ಕೂಡಲೇ ನನ್ನನ್ನು ಕೋವಿಡ್ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ. ಆದರೆ, ಏಪ್ರಿಲ್‌ನಿಂದ ಕೆಲಸವೇ ಇಲ್ಲದ ನನ್ನ ಬಳಿಯೂ ₹23 ಸಾವಿರ ಬಿಲ್ ‘ಕಸಿದುಕೊಂಡ’ ಬಳಿಕ ಬಿಡುಗಡೆ ಮಾಡಿದ್ದಾರೆ’ ಎಂದರು.

‘ನನಗೀಗ ಕಾಲು ನೋವು ತಡೆಯಲು ಆಗುತ್ತಿಲ್ಲ. ಮೂರು ದಿನಗಳಿಂದ ನಿದ್ದೆ ಇಲ್ಲ. ಶೌಚಕ್ಕೂ ಹೋಗುವುದು ಕಷ್ಟವಾಗಿದೆ. ಯಾರಲ್ಲಿ ಕೇಳಿ ದರೂ, ಕೋವಿಡ್ ಚಿಕಿತ್ಸೆ ಮುಗಿಯಲಿ ಎನ್ನುತ್ತಿದ್ದಾರೆ’ ಎಂದು ಗದ್ಗದಿತರಾದರು.

‘ಗಾಯಗೊಂಡ ಕಾಲನ್ನು ಇಟ್ಟು ಕೊಂಡು ನಾನು ಅಷ್ಟುದಿನ ಬದುಕಿ ಉಳಿಯಬಹುದಾ? ದಯವಿಟ್ಟು ಕಾಪಾಡಿ. ನಾನು, ಕೋವಿಡ್‌ನಿಂದಲ್ಲ ಕಾಲು ನೋವಿನಿಂದಲೇ ಸಾಯಬಹುದು. ದಯವಿಟ್ಟು ಬದುಕಿಸಿ’ ಎಂದು ಆತಂಕದಿಂದ ಮನವಿ ಮಾಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು