ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿಲ್ಲ: ಡಿಸಿ ಡಾ.ರಾಜೇಂದ್ರ

ಆರ್‌ಟಿಪಿಸಿಆರ್‌ ಪರೀಕ್ಷೆಯ ಪ್ರಮಾಣ ಹೆಚ್ಚಳ
Last Updated 20 ಜೂನ್ 2021, 5:18 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್‌–19 ಪಾಸಿಟಿವಿಟಿ ದರ ಹೆಚ್ಚಳವಾಗಿಲ್ಲ. ವಾರದಿಂದೀಚೆಗೆ ಏರಿಳಿತ ಕಂಡುಬರುತ್ತಿದೆ. ಪ್ರಮುಖವಾಗಿ ಕೋವಿಡ್‌ ಪರೀಕ್ಷೆಯ ಪ್ರಮಾಣ ಇದೀಗ ಹೆಚ್ಚಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಜಿಲ್ಲಾಡಳಿತ, ಭಾರತೀಯ ರೆಡ್‌ಕ್ರಾಸ್ ಜಿಲ್ಲಾ ಘಟಕ, ರೋಟರಿ ಮಂಗಳೂರು ಹಾಗೂ ಬ್ಯಾಂಕ್ ಆಫ್ ಬರೋಡ ಸಹಯೋಗದೊಂದಿಗೆ ಅಶಕ್ತರ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ಸಂಚಾರಿ ಲಸಿಕಾ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಾಸಿಟಿವಿಟಿ ದರ ಹೆಚ್ಚಾಗುತ್ತಿದೆ ಎಂಬ ಆತಂಕ ಜನರಿಗೆ ಬೇಡ. ಶುಕ್ರವಾರ ಒಂದೇ ದಿನ 11 ಸಾವಿರ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಹಾಗಾಗಿ ಪಾಸಿಟಿವಿಟಿ ದರ ಹೆಚ್ಚಳದಂತೆ ಕಂಡುಬರುತ್ತಿದೆ. ಕಳೆದ ವಾರ ಶೇ 18ರಷ್ಟಿದ್ದ ದರ, ಈ ವಾರ ಶೇ 9ಕ್ಕೆ ಇಳಿಕೆಯಾಗಿದೆ ಎಂದು ಹೇಳಿದರು.

ಜಿಲ್ಲಾಡಳಿತದ ವತಿಯಿಂದ ರೆಡ್‌ಕ್ರಾಸ್ ಮೂಲಕ ಕೆಎಎಸ್‌ರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಚಾಲಕರು– ನಿರ್ವಾಹಕರಿಗೂ ಆದ್ಯತೆ ಮೇಲೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ರೆಡ್‌ಕ್ರಾಸ್ ಜಿಲ್ಲಾ ಘಟಕ ಎಲ್ಲ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಿದ್ದು, ಅನಿವಾಸಿ ಭಾರತೀಯರಿಗೆ ಲಸಿಕೆ ನೀಡುವ ಕಾರ್ಯವನ್ನೂ ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.

ಸೋಮವಾರದಿಂದ ಬಳಿಕ ಹೆಚ್ಚಿನ ಪ್ರಮಾಣದ ಲಸಿಕೆ ಜಿಲ್ಲೆಗಳಿಗೆ ಲಭ್ಯವಾಗಲಿದೆ. ಆ ಬಳಿಕ ಇನ್ನೂ ಉತ್ತಮವಾಗಿ ಯೋಜನೆ ರೂಪಿಸಿಕೊಂಡು ಎಲ್ಲರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನೋಂದಣಿ ಮಾಡಿಕೊಂಡು ಒಂದು ಪ್ರದೇಶದಲ್ಲಿ 10ಕ್ಕಿಂತ ಹೆಚ್ಚು ದೀರ್ಘಕಾಲೀನ ಅನಾರೋಗ್ಯದಿಂದ ಹಾಸಿಗೆ ಹಿಡಿದವರು, ಮನೆಯಿಂದ ಹೊರಬರಲಾಗದ ವಯೋವೃದ್ಧರು ಹಾಗೂ ಎಂಡೋ ಪೀಡಿತರಿಗೆ ಲಸಿಕೆ ನೀಡುವ ಕಾರ್ಯವನ್ನು ಸಂಚಾರಿ ಘಟಕದ ಮೂಲಕ ಹಂತ ಹಂತವಾಗಿ ಮಾಡಲಾಗುವುದು ಎಂದು ಹೇಳಿದರು.

ಬ್ಯಾಂಕ್ ಆಫ್ ಬರೋಡದ ಡಿಜಿಎಂ ಗಾಯತ್ರಿ ಮಾತನಾಡಿ, ಜಿಲ್ಲಾಡಳಿತ ರೆಡ್‌ಕ್ರಾಸ್, ರೋಟರಿ ಕ್ಲಬ್‌ಗಳ ಸಹಯೋಗದೊಂದಿಗೆ ಬ್ಯಾಂಕ್ ಕೂಡಾ ಅಶಕ್ತರಿಗೆ ಮನೆಗೆ ತೆರಳಿ ಲಸಿಕೆ ನೀಡುವ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ರೆಡ್‌ಕ್ರಾಸ್ ಜಿಲ್ಲಾ ಘಟಕದ ವತಿಯಿಂದ ಈಗಾಗಲೇ ಅನಿವಾಸಿ ಭಾರತೀಯರಿಗೆ ಲಸಿಕೆ ನೀಡುವ ಕಾರ್ಯ ನಡೆಸಲಾಗಿದೆ. ಆಟೋ ರಿಕ್ಷಾ ಬಸ್ಸು ಚಾಲಕರಿಗೆ ಲಸಿಕೆ ನೀಡಲಾಗುತ್ತಿದೆ. ಇದೀಗ ಬಹು ಮುಖ್ಯಮುಖ್ಯವಾಗಿ ಅಶಕ್ತರ ಮನೆಗಳಿಗೆ ತೆರಳಿ ಲಸಿಕೆ ನೀಡಲು ಸಂಚಾರಿ ಲಸಿಕಾ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ಈ ಕಾರ್ಯ ಹಂತ ಹಂತವಾಗಿ ಜಿಲ್ಲೆಯಾದ್ಯಂತ ನಡೆಸಲಾಗುವುದು ಎಂದು ಎಂದು ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಾರಾಮ ಶೆಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT