ಮಂಗಳವಾರ, ಆಗಸ್ಟ್ 3, 2021
28 °C
ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್‌ ಪೂರ್ಣಗೊಳಿಸವರಿಗೆ ಸೋಂಕು

ದಕ್ಷಿಣ ಕನ್ನಡ : 17 ಜನರಿಗೆ ಕೋವಿಡ್‌ 19 ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿರುವ 17 ಜನರಲ್ಲಿ ಭಾನುವಾರ ಕೋವಿಡ್–19 ಸೋಂಕು ದೃಢವಾಗಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 200ರ ಗಡಿಗೆ ಬಂದು ತಲುಪಿದೆ.

ಮುಂಬೈನಿಂದ ಬಂದು ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್‌ ಪೂರ್ಣಗೊಳಿಸಿ ಮೂಡುಬಿದಿರೆಗೆ ತೆರಳಿದ್ದ 14, 17 ವರ್ಷದ ಬಾಲಕರು, 33, 37, 38, 40, 41, 50, 57 ವರ್ಷದ ಪುರುಷರು ಹಾಗೂ 32 ವರ್ಷದ ಮಹಿಳೆಗೆ ಭಾನುವಾರ ಸೋಂಕು ಖಚಿತವಾಗಿದೆ.

ಮೇ 14 ರಂದು ಮುಂಬೈನಿಂದ ಬಂದು ಉಡುಪಿಯಲ್ಲಿ ಕ್ವಾರಂಟೈನ್‌ ಪೂರ್ಣಗೊಳಿಸಿ, ನಗರಕ್ಕೆ ಬಂದಿರುವ 52 ವರ್ಷದ ಪುರುಷ, ಮುಂಬೈನಿಂದ ಮರಳಿ, ಉಡುಪಿಯಲ್ಲಿ ಕ್ವಾರಂಟೈನ್‌ ಪೂರೈಸಿ, ಬೆಳ್ತಂಗಡಿಗೆ ಬಂದಿರುವ 15 ವರ್ಷದ ಬಾಲಕ, 32, 34, 41 ವರ್ಷದ ಪುರುಷರು ಹಾಗೂ 41 ವರ್ಷದ ಮಹಿಳೆಗೆ ಕೋವಿಡ್‌–19 ಇರುವುದು ದೃಢವಾಗಿದೆ. ಇನ್ನೊಂದೆಡೆ ಗೋವಾದಿಂದ ಬಂದು ಉಡುಪಿಯಲ್ಲಿ ಕ್ವಾರಂಟೈನ್‌ ಪೂರ್ಣಗೊಳಿಸಿ, ಮೂಡುಬಿದಿರೆಗೆ ಮರಳಿರುವ 32 ವರ್ಷದ ಪುರುಷನಿಗೂ ಸೋಂಕು ಇರುವುದು ಖಚಿತಗೊಂಡಿದೆ.

ಉಡುಪಿಯಲ್ಲಿ ಕ್ವಾರಂಟೈನ್‌: ಮಹಾರಾಷ್ಟ್ರದಿಂದ ಬಂದ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಸೋಂಕಿತರು ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿದ್ದಾರೆ. ಎಲ್ಲ ಪ್ರಕರಣಗಳಲ್ಲೂ ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್ ಪೂರೈಸಿ, ದಕ್ಷಿಣ ಕನ್ನಡ ಜಿಲ್ಲೆಯ ತಮ್ಮ ಊರುಗಳಿಗೆ ಮರಳಿದವರಲ್ಲಿ ಸೋಂಕು ಪತ್ತೆಯಾಗಿದೆ.

ಮುಂಬೈನಿಂದ ತವರಿಗೆ ಮರಳು ತವಕದಲ್ಲಿದ್ದ ಜಿಲ್ಲೆಯ ಜನರಿಗೆ ಆರಂಭದಲ್ಲಿ ಬರಲು ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಜಿಲ್ಲೆಯ ಜನರು ಉಡುಪಿಯ ವಿಳಾಸ ನೀಡಿ, ಉಡುಪಿವರೆಗೂ ಬಂದು ಅಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಮೇ ಎರಡು ಮತ್ತು ಮೂರನೇ ವಾರದಲ್ಲಿ ಮುಂಬೈನಿಂದ ಬಂದಿರುವ ಜಿಲ್ಲೆಯ ಅನೇಕರು ಉಡುಪಿಯಲ್ಲಿಯೇ ಸಾಂಸ್ಥಿಕ ಕ್ವಾರಂಟೈನ್‌ ಪೂರೈಸಿದ್ದಾರೆ.

ಶತಕದತ್ತ ಗುಣಮುಖರಾದವರ ಸಂಖ್ಯೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಮತ್ತೆ ಐವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೀಗ ಗುಣಮುಖರಾದವರ ಸಂಖ್ಯೆ ಶತಕದ ಸಮೀಪ ಬಂದಿದ್ದು, ಒಟ್ಟು 96 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಮಹಾರಾಷ್ಟ್ರದಿಂದ ಬಂದಿರುವ 13 ವರ್ಷದ ಬಾಲಕಿ, 25 ವರ್ಷದ ಯುವಕ, 30, 49 ಹಾಗೂ 54 ವರ್ಷದ ಪುರುಷರ ಗಂಟಲು ದ್ರವದ ಮಾದರಿ ನೆಗೆಟಿವ್‌ ಬಂದಿದ್ದು, ಅವರನ್ನು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ಕಾಸರಗೋಡು: ಮೂವರಿಗೆ ಕೋವಿಡ್‌

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ ಮೂವರಲ್ಲಿ ಕೋವಿಡ್–19 ದೃಢಪಟ್ಟಿದ್ದು, ಆರು ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರಲ್ಲಿ ಇಬ್ಬರು ಮಹಾರಾಷ್ಟ್ರ ಹಾಗೂ ಒಬ್ಬರು ಕುವೈತ್‌ನಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ಕುವೈತ್‌ನಿಂದ ಬಂದಿದ್ದ 38 ವರ್ಷದ ವ್ಯಕ್ತಿ, ಮಹಾರಾಷ್ಟ್ರದಿಂದ ಬಂದಿದ್ದ 33 ವರ್ಷ ಹಾಗೂ 63 ವರ್ಷದ ವ್ಯಕ್ತಿಗಳಿಗೆ ಸೋಂಕು ತಗಲಿದೆ. ಇವರೆಲ್ಲರೂ ಕ್ವಾರಂಟೈನ್‌ನಲ್ಲಿ ಇದ್ದರು. ಇದೀಗ ಕಾಸರಗೋಡು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 150 ಕ್ಕೇರಿದೆ. ಈ ಪೈಕಿ 108 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 587 ಮಂದಿಯ ವೈದ್ಯಕೀಯ ವರದಿ ಲಭಿಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು