ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಸು ತಗ್ಗಿದ ಕೋವಿಡ್‌–19 ಅಬ್ಬರ

211 ಜನರಿಗೆ ಸೋಂಕು ದೃಢ: 209 ಮಂದಿ ಗುಣಮುಖ
Last Updated 23 ಸೆಪ್ಟೆಂಬರ್ 2020, 3:20 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಎರಡು ದಿನಗಳಿಂದ ಕೋವಿಡ್‌–19 ಅಬ್ಬರ ತುಸು ತಗ್ಗಿದೆ. ನಿತ್ಯವೂ 300 ರ ಗಡಿ ದಾಟುತ್ತಿದ್ದ ಸೋಂಕಿತ ಸಂಖ್ಯೆ ಎರಡು ದಿನಗಳಿಂದ 200 ಆಸುಪಾಸಿನಲ್ಲಿದೆ. ಮಂಗಳವಾರ ಮತ್ತೆ 211 ಮಂದಿಗೆ ಸೋಂಕು ದೃಢವಾಗಿದ್ದು, 209 ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟಿರುವ ನಾಲ್ವರಿಗೆ ಕೋವಿಡ್–19 ಇರುವುದು ಖಚಿತವಾಗಿದೆ.

ಶೀತ ಜ್ವರ (ಐಎಲ್‌ಐ) ಲಕ್ಷಣಗಳಿಂದ 94 ಜನರಿಗೆ, ಪ್ರಾಥಮಿಕ ಸಂಪರ್ಕದಿಂದ 61 ಮಂದಿಗೆ, ತೀವ್ರ ಉಸಿರಾಟದ ತೊಂದರೆಯಿಂದ 12 ಜನರಿಗೆ ಕೋವಿಡ್–19 ಪತ್ತೆಯಾಗಿದೆ. ಇನ್ನು 44 ಜನರ ಸೋಂಕಿನ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ.

ಮಂಗಳೂರು ತಾಲ್ಲೂಕಿನಲ್ಲಿ 111, ಬಂಟ್ವಾಳದಲ್ಲಿ 43, ಪುತ್ತೂರಿನಲ್ಲಿ 17, ಸುಳ್ಯದಲ್ಲಿ 1, ಬೆಳ್ತಂಗಡಿ ತಾಲ್ಲೂಕಿನಲ್ಲಿ 19, ಬೇರೆ ಜಿಲ್ಲೆಗಳ 20 ಮಂದಿಗೆ ಸೋಂಕು ತಗಲಿದೆ. ಈ ಪೈಕಿ 65 ಪುರುಷರು, 47 ಮಹಿಳೆಯರು ಸೇರಿದಂತೆ 112 ಜನರಿಗೆ ರೋಗ ಲಕ್ಷಣಗಳು ಕಂಡು ಬಂದಿವೆ. 56 ಪುರುಷರು, 43 ಮಹಿಳೆಯರು ಸೇರಿದಂತೆ 99 ಜನರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

209 ಗುಣಮುಖ: ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 39 ಹಾಗೂ ಹೋಂ ಐಸೋಲೇಷನ್‌ನಲ್ಲಿದ್ದ 179 ಜನರು ಸೇರಿದಂತೆ 209 ಜನರು ಮಂಗಳವಾರ ಗುಣಮುಖರಾಗಿದ್ದಾರೆ. ಅವರ ಗಂಟಲು ದ್ರವದ ಮಾದರಿ ವರದಿ ನೆಗೆಟಿವ್ ಬಂದಿದ್ದು, ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ನಾಲ್ಕು ಸಾವು: ಜಿಲ್ಲೆಯಲ್ಲಿ ಮೃತಪಟ್ಟಿರುವ ನಾಲ್ವರಿಗೆ ಕೋವಿಡ್–19 ಇರುವುದು ಮಂಗಳವಾರ ದೃಢವಾಗಿದೆ. ಅನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಗಳೂರು ತಾಲ್ಲೂಕಿನ ಇಬ್ಬರು, ಬಂಟ್ವಾಳ ಹಾಗೂ ಬೇರೆ ಜಿಲ್ಲೆಯ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಕಾಸರಗೋಡು: 197 ಮಂದಿಗೆ ಕೋವಿಡ್

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 197 ಮಂದಿಗೆ ಕೋವಿಡ್-19 ದೃಢವಾಗಿದೆ. 190 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ವಿದೇಶದಿಂದ ಬಂದ ಇಬ್ಬರು, ಇತರ ರಾಜ್ಯಗಳಿಂದ ಬಂದ 5 ಮಂದಿಗೆ ಸೋಂಕು ದೃಢವಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ಮಂಗಳವಾರ 225 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 8,711 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಒಟ್ಟು 6,694 ಮಂದಿ ಗುಣಮುಖರಾಗಿದ್ದಾರೆ. 1,947 ಸಕ್ರಿಯ ಪ್ರಕರಣಗಳಿದ್ದು, ಮೃತರ ಸಂಖ್ಯೆ 70 ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT