ಭಾನುವಾರ, ಸೆಪ್ಟೆಂಬರ್ 19, 2021
28 °C
ಬೆಳ್ತಂಗಡಿ: ‘ಸಿ’ ದರ್ಜೆ ದೇವಸ್ಥಾನಗಳ ಅರ್ಚಕರು, ಸಿಬ್ಬಂದಿಗೆ ಕೋವಿಡ್‌ ಪ್ಯಾಕೇಜ್‌

ಬೆಳ್ತಂಗಡಿ: ಅರ್ಚಕರಿಗೆ ಸೇರಿ 103 ಮಂದಿಗೆ ₹ 3.09 ಲಕ್ಷ ಜಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳ್ತಂಗಡಿ: ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಧಾರ್ಮಿಕ ಕೇಂದ್ರಗಳ ಬಾಗಿಲು ಮುಚ್ಚಿದ್ದರಿಂದ ‘ಸಿ’ ದರ್ಜೆ ದೇವಸ್ಥಾನಗಳ ಅರ್ಚಕರು ಮತ್ತು ಸಿಬ್ಬಂದಿ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಅರಿತ ಸರ್ಕಾರ ಅರ್ಚಕರಿಗೆ ಮತ್ತು ಸಿಬ್ಬಂದಿಗೆ ಕೋವಿಡ್‌ ಪ್ಯಾಕೇಜ್‌ ಘೋಷಣೆ ಮಾಡಿತ್ತು. ಅದರಂತೆ ತಾಲ್ಲೂಕಿನ 31 ದೇವಸ್ಥಾನಗಳ 103 ಮಂದಿಗೆ ತಲಾ ₹ 3000 ದಂತೆ ಒಟ್ಟು ₹ 3.09 ಲಕ್ಷ ಖಾತೆಗಳಿಗೆ ಜಮೆಯಾಗಿದೆ.

ರಾಜ್ಯದ ‘ಸಿ’ ದರ್ಜೆಯ ದೇವಸ್ಥಾನಗಳ ಅರ್ಚಕರಿಗೆ ಸರ್ಕಾರದ ಪರಿಹಾರ ಘೋಷಣೆಯಾಗುತ್ತಿದ್ದಂತೆ ಅದನ್ನು ಫಲಾನುಭವಿಗಳಿಗೆ ತಲುಪಿಸಲು ಶಾಸಕ ಹರೀಶ್ ಪೂಂಜ ಮುಂದಾಳತ್ವದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮುತುವರ್ಜಿ ವಹಿಸಿದ್ದರು. ತಾಲ್ಲೂಕಿನ ಎಲ್ಲಾ ಸಿ ದರ್ಜೆ ದೇವಸ್ಥಾನಗಳ ಅರ್ಚಕರ ಜತೆ ಅಲ್ಲಿನ ಸಿಬ್ಬಂದಿಗೆ ಪರಿಹಾರ ಸಿಗಲೇ ಬೇಕು ಎಂಬುದು ಅವರ ಕಾಳಜಿಯ ಉದ್ದೇಶವಾಗಿತ್ತು. ಹೀಗಾಗಿ, ತಾಲ್ಲೂಕಿನ ಶಾಸಕರ ಕಚೇರಿ ಶ್ರಮಿಕದಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿ ಅವರಿಂದ ಅರ್ಜಿಯನ್ನು ಖುದ್ದಾಗಿ ಸ್ವೀಕರಿಸಿದ್ದು, ಮಾತ್ರವಲ್ಲ ಅದನ್ನು ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಿದ ಪರಿಣಾಮವಾಗಿ ಇದೀಗ ರಾಜ್ಯದಲ್ಲೇ ಪ್ರಥಮ ಎಂಬಂತೆ ತಾಲ್ಲೂಕಿನ 31 ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿಗೆ ಪರಿಹಾರದ ಹಣ ಲಭಿಸುವಂತಾಗಿದೆ.

‘ಸಿ ದರ್ಜೆ ದೇವಸ್ಥಾನದಲ್ಲಿ ಕೇವಲ ಅರ್ಚಕರು ಮಾತ್ರವಲ್ಲದೆ, ಪರಿಚಾರಕರು, ಡೋಲುಗಂಟೆಯವರು, ಅಡುಗೆಯವರು, ಸ್ವಚ್ಛತೆ ಮಾಡುವವರು ಎಲ್ಲರೂ ಇದ್ದಾರೆ. ಹಾಗಾಗಿ, ದೇವಸ್ಥಾನದ ಸೇವಾ ಕಾರ್ಯಕ್ಕಾಗಿ ತನ್ನ ಸಮಯ ಕೊಡುವ ಅವರು ಲಾಕ್‌ಡೌನ್ ಕಾರಣದಿಂದಾಗಿ ಸಮಸ್ಯೆಗೆ ಒಳಗಾಗಿದ್ದಾರೆ. ಕೆಲವು ದೇವಸ್ಥಾನಗಳಲ್ಲಿ ಅರ್ಚಕರು ಮಾತ್ರ ಇದ್ದರೆ, ಮತ್ತೆ ಕೆಲವೆಡೆ 5ಕ್ಕಿಂತ ಅಧಿಕ ಮಂದಿ ದೇವಸ್ಥಾನದ ನಾನಾ ಕೆಲಸ ನಿರ್ವಹಿಸುವ ಸಿಬ್ಬಂದಿ ಇದ್ದಾರೆ. ಎಲ್ಲರೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವಾಗ ಎಲ್ಲರಿಗೂ ಪರಿಹಾರ ದೊರೆಯಬೇಕು ಎಂಬುದು ನಮ್ಮ ಕಾಳಜಿಯಾಗಿತ್ತು. ಶಾಸಕ ಹರೀಶ್ ಪೂಂಜರ ವಿಶೇಷವಾದ ಮುತುವರ್ಜಿ, ದೇವಸ್ಥಾನಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಹಕಾರದಿಂದ ಎಲ್ಲರಿಗೂ ಈ ಪರಿಹಾರ ಸಿಗಲು ಸಾಧ್ಯವಾಗಿದೆ’ ಎನ್ನುತ್ತಾರೆ ದೇವೇಂದ್ರ ಹೆಗ್ಡೆ ಕೊಕ್ರಾಡಿ.

ಧಾರ್ಮಿಕ ಪರಿಷತ್‌ನ ಸದಸ್ಯನಾಗಿ ದೇವಸ್ಥಾನದ ಎಲ್ಲ ಸಿಬ್ಬಂದಿಗೂ ಪರಿಹಾರ ಸಿಗುವಂತೆ ಮಾಡಿದ ತೃಪ್ತಿ ಇದೆ. ಕಳುಹಿಸಿದ ಎಲ್ಲ ಅರ್ಜಿಗಳನ್ನು ಪರಿಹಾರಕ್ಕೆ ಪರಿಗಣಿಸಲಾಗಿದೆ.

- ದೇವೇಂದ್ರ ಹೆಗ್ಡೆ ಕೊಕ್ರಾಡಿ, ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ

ದೇವಸ್ಥಾನಗಳ ಸಿಬ್ಬಂದಿಗೂ ಪರಿಹಾರ ನೀಡಿರುವುದು ಉತ್ತಮ ನಡೆ. ಶಾಸಕ ಹರೀಶ್‌ ಪೂಂಜ, ದೇವೇಂದ್ರ ಹೆಗ್ಡೆ ಅವರ ಮುತುವರ್ಜಿಯಿಂದ ಇದು ಸಾಧ್ಯವಾಗಿದೆ.

- ಭುವನೇಶ್ ಗೇರುಕಟ್ಟೆ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ನಾಳ ದುರ್ಗಾಪರಮೇಶ್ವರಿ ದೇವಸ್ಥಾನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.