ಗುರುವಾರ , ಆಗಸ್ಟ್ 5, 2021
23 °C
ಗಡಿ ಭಾಗದ ಪಿಎಚ್‌ಸಿಗೆ ಬರುವ ರೋಗಿಗಳಿಗೆ ಗುರುತಿನ ಚೀಟಿ ಕಡ್ಡಾಯ

ಮಂಗಳೂರು: ಕರ್ನಾಟಕದ ಸರಕು ವಾಹನಗಳಿಗೆ ಪಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕರ್ನಾಟಕದಿಂದ ಕಾಸರಗೋಡಿಗೆ ತರಕಾರಿ, ಹಣ್ಣು ಹಂಪಲು ತರುವ ವಾಹನಗಳಿಗೆ ಪಾಸ್ ಕಡ್ಡಾಯಗೊಳಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕೊರೊನಾ ನಿಯಂತ್ರಣ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಈ ಪಾಸ್‌ಗಳನ್ನು ನೀಡಲಿದ್ದು, ವಾಹನ ಚಾಲಕ ಹಾಗೂ ಇತರ ಸಿಬ್ಬಂದಿ ಏಳು ದಿನಗಳಿಗೊಮ್ಮೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಗಾಗಿ, ವೈದ್ಯಕೀಯ ಪ್ರಮಾಣಪತ್ರ ಪಡೆಯಬೇಕು ಎಂದು ತಿಳಿಸಿದೆ.

ವೈದ್ಯಕೀಯ ಪರೀಕ್ಷಾ ಪ್ರಮಾಣಪತ್ರ ಹಾಗೂ ಆರ್‌ಟಿಒ ಒದಗಿಸಿದ ಪಾಸ್ ಇದ್ದಲ್ಲಿ ಮಾತ್ರ ಕರ್ನಾಟಕದಿಂದ ತರಕಾರಿ ಹಾಗೂ ಹಣ್ಣುಹಂಪಲು ತರುವ ಲಾರಿಗಳಿಗೆ ಪ್ರವೇಶ ನೀಡಲಾಗುವುದು. ಈ ಕುರಿತು ಹಾಲು, ತರಕಾರಿ ವ್ಯಾಪಾರಿಗಳ ಸಭೆಯನ್ನು ಶೀಘ್ರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕರೆಯುವಂತೆ ಸಭೆಯಲ್ಲಿ ಸೂಚಿಸಲಾಗಿದೆ.

ಗುರುತಿನ ಚೀಟಿ ಕಡ್ಡಾಯ: ಗಡಿ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆಗಾಗಿ ಬರುವವರಿಗೆ ಗುರುತು ಚೀಟಿ ಕಡ್ಡಾಯ ಮಾಡಲಾಗಿದೆ. ಪಾಣತ್ತೂರು ಸೇರಿದಂತೆ ಗಡಿಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇತರ ರಾಜ್ಯಗಳ ಕಾರ್ಮಿಕರಲ್ಲಿ ಕೆಲವರಿಗೆ ಕೋವಿಡ್ ಸೋಂಕು ದೃಢವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ವಿವಾಹ ಸಮಾರಂಭಗಳಿಗೆ ಇದೇ 31ರವರೆಗೆ ಪಾಸ್ ನೀಡುವುದಿಲ್ಲ. ಅಲ್ಲದೇ ವಿವಾಹ ಸಮಾರಂಭಗಳಿಗೆ ತೆರಳುವವರಿಗೆ ಇದೇ 31 ವರೆಗೆ ಹೊಸದಾಗಿ ಪಾಸ್ ನೀಡುವುದಿಲ್ಲ. ಈಗಾಗಲೇ ಪಾಸ್ ಪಡೆದವರಲ್ಲಿ 5 ಮಂದಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಸಭೆ ತಿಳಿಸಿದೆ.

65 ವರ್ಷಕ್ಕಿಂತ ಅಧಿಕ ಹಾಗೂ 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾರ್ವಜನಿಕ ಸಂಚಾರಕ್ಕೆ ಅನುಮತಿ ಇಲ್ಲ. ಸರ್ಕಾರಿ, ಖಾಸಗಿ ಬಸ್ ಸೇರಿದಂತೆ ಸಾರ್ವಜನಿಕ ವಾಹನಗಳಲ್ಲಿ ಅವರು ಸಂಚರಿಸುವಂತಿಲ್ಲ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಫುಟ್‌ಬಾಲ್, ಕ್ರಿಕೆಟ್ ಸೇರಿದಂತೆ ಕ್ರೀಡಾ ಸ್ಪರ್ಧೆ ನಡೆಸಲು 31 ವರೆಗೆ ಅನುಮತಿಯಿಲ್ಲ. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಕ್ಲಬ್‌ಗಳಿಗೆ ಮಾಹಿತಿ ನೀಡಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.

ಹೆಚ್ಚುವರಿ ಸಿಬ್ಬಂದಿ ನಿಯೋಜನೆ: ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸರ ಜತೆಗೆ ಕಂದಾಯ, ಅರಣ್ಯ, ಸಾರಿಗೆ, ಅಬಕಾರಿ ಇಲಾಖೆಗಳ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ.

ಎಣ್ಮಕಜೆ ಪಂಚಾಯಿತಿ ಗಡಿ ಪ್ರದೇಶದಲ್ಲಿ ತಾತ್ಕಾಲಿಕ ಪಡಿತರ ಅಂಗಡಿಯೊಂದನ್ನು ಆರಂಭಿಸಲು ಜಿಲ್ಲಾ ಆಹಾರ ವಿತರಣೆ ಅಧಿಕಾರಿಗೆ ಆದೇಶ ನೀಡಲಾಗಿದೆ. ವಾರ್ಡ್ ಮಟ್ಟದ ಜಾಗ್ರತಾ ಸಮಿತಿ ಚಟುವಟಿಕೆಗಳನ್ನು ಚುರುಕುಗೊಳಿಸಲು ನಿರ್ಧರಿಸಲಾಗಿದೆ.

ಕಾಸರಗೋಡು: ಮೊದಲ ಸಾವು

ಕೋವಿಡ್‌–19 ಸೋಂಕಿನಿಂದ ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಸಾವು ಸಂಭವಿಸಿದೆ. ಮಂಗಳವಾರ ಸಂಜೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟ ಮೊಗ್ರಾಲ್ ಪುತ್ತೂರು ನಿವಾಸಿಗೆ ಕೋವಿಡ್‌–19 ದೃಢವಾಗಿದೆ.

ಹುಬ್ಬಳ್ಳಿಯಲ್ಲಿ ವ್ಯಾಪಾರಿಯಾಗಿದ್ದ ಮೊಗ್ರಾಲ್ ಪುತ್ತೂರು ನಿವಾಸಿಯನ್ನು ಮಂಗಳವಾರ ಗಂಭೀರ ಸ್ಥಿತಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಿಸಿದ ಕೆಲವೇ ನಿಮಿಷಗಳಲ್ಲಿ ಅವರು ಮೃತಪಟ್ಟಿದ್ದರು.

ನಾಲ್ವರಿಗೆ ಸೋಂಕು

ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಒಂದು ವರ್ಷದ ಮಗು ಸೇರಿದಂತೆ ನಾಲ್ವರಿಗೆ ಕೋವಿಡ್–19 ದೃಢಪಟ್ಟಿದೆ.

ಜೂನ್ 4ರಂದು ಸೌದಿಯಿಂದ ಬಂದ ಮಂಜೇಶ್ವರದ 55 ವರ್ಷದ ಮಹಿಳೆ ಹಾಗೂ ಒಂದು ವರ್ಷದ ಮೊಮ್ಮಗ, ಜೂನ್‌ 24 ರಂದು ಕುವೈತ್‌ನಿಂದ ಬಂದಿದ್ದ ಕಾಞಂಗಾಡ್‌ನ 39 ವರ್ಷದ ಹಾಗೂ ಒಮನ್‌ನಿಂದ ಬಂದಿದ್ದ 49 ವರ್ಷದ ಪಳ್ಳಿಕೆರೆ ನಿವಾಸಿಗೆ ಸೋಂಕು ದೃಢಪಟ್ಟಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು