ಅಕ್ರಮ ದನ ಸಾಗಣೆ: ಗಾಳಿಯಲ್ಲಿ ಗುಂಡು

7

ಅಕ್ರಮ ದನ ಸಾಗಣೆ: ಗಾಳಿಯಲ್ಲಿ ಗುಂಡು

Published:
Updated:

ಸುಳ್ಯ: ಇಲ್ಲಿನ ಕರ್ನಾಟಕ-ಕೇರಳ ಗಡಿಭಾಗ ಕೂರ್ನಡ್ಕ ಎಂಬಲ್ಲಿ ಅಕ್ರಮ ದನ ಸಾಗಾಟ ಆರೋಪಿಗಳ ಮೇಲೆ ಅರಣ್ಯ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಅಕ್ರಮ ದನ ಸಾಗಾಟ ಆರೋಪಿಗಳ ವಾಹನ ತಡೆದಾಗ ಆರೋಪಿಗಳು ಅಧಿಕಾರಿಗಳ ಮೇಲೆ ದಾಳಿ ನಡೆಸಲು ಬಂದಾಗ ಅನಿವಾರ್ಯವಾಗಿ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿದಾಗ ಆರೋಪಿಗಳು ವಾಹನ ಮತ್ತು ದನ ಬಿಟ್ಟು ಓಡಿ ಹೋಗಿದ್ದಾರೆ.

ವಿವರ: ಗಡಿಭಾಗದಿಂದ ಕೇರಳ ಕಡೆಗೆ ಅಕ್ರಮ ಬೀಟಿ ಮರ ಸಾಗಾಟ ಆಗುತ್ತಿತ್ತು ಎಂದು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಕೆಲವು ದಿನಗಳ ಹಿಂದೆ ಬಂತೆನ್ನಲಾಗಿದೆ. ಇದಕ್ಕಾಗಿ ಅಧಿಕಾರಿಗಳ ತಂಡ ಶನಿವಾರ ರಾತ್ರಿ ಇಡೀ ದಿನ ಅ ಭಾಗದಲ್ಲಿ ಗಸ್ತು ನಡೆಸುತ್ತಿದ್ದರೆನ್ನಲಾಗಿದೆ.

ಹೀಗೆ ಕಾರ್ಯಾಚರಣೆಯಲ್ಲಿದ್ದಾಗ ಪಿಕಪ್ ವಾಹನ ಒಂದು ಕೇರಳ ಕಡೆಗೆ ವೇಗವಾಗಿ ಬಂತೆನ್ನಲಾಗಿದೆ. ಈ ವೇಳೆ ವಾಹನ ನಿಲ್ಲಿಸಲು ಸೂಚನೆ ನೀಡಿದರೂ ಅವರು ನಿಲ್ಲಿಸದೇ ಇದ್ದಾಗ ಬಲತ್ಕಾರವಾಗಿ ಅರಣ್ಯ ಅಧಿಕಾರಿಗಳು ವಾಹನ ತಡೆದರು. ಅ ಹೊತ್ತಿಗೆ ವಾಹನದಲ್ಲಿದ್ದವರು ಮಾರಕಾಯುಧಗಳಿಂದ ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಬಂದರೆನ್ನಲಾಗಿದೆ. ಈ ಸಂದರ್ಭ ಸ್ವಯಂ ರಕ್ಷಣೆಗೆ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿದರೆನ್ನಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳು ಅಲ್ಲಿಂದ ಕಾಡಿನ ದಾರಿಯಲ್ಲಿ ಓಡಿ ಹೋಗಿ ಪರಾರಿಯಾಗಿದ್ದಾರೆ. ಈ ವೇಳೆ ವಾಹನ ತಪಾಸಣೆ ಮಾಡುವಾಗ ಅದರಲ್ಲಿ ಮರದ ಬದಲು ಮೂರು ದನ ಇತ್ತು. ದನ, ವಾಹನ ಸಹಿತ ಅಧಿಕಾರಿಗಳು ವಶಪಡಿಸಿಕೊಂಡು ಸುಳ್ಯ ಪೊಲೀಸರಿಗೆ ಹಸ್ತಾಂತರಿಸಿದಾಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸಿದಾಗ ಪರಾರಿಯಾದ ಆರೋಪಿಗಳು ಗಾಯ ಆಗಿದೆ ಎಂದು ಕೇರಳದ ಕಣ್ಣೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !