ಉಪ್ಪಳದಲ್ಲಿ ಸಿಪಿಎಂ ಕಾರ್ಯಕರ್ತನ ಕೊಲೆ

7
ಮಂಜೇಶ್ವರ ತಾಲ್ಲೂಕಿನಲ್ಲಿ ಬಂದ್‌: ಹಲವೆಡೆ ಪ್ರತಿಭಟನೆ

ಉಪ್ಪಳದಲ್ಲಿ ಸಿಪಿಎಂ ಕಾರ್ಯಕರ್ತನ ಕೊಲೆ

Published:
Updated:
Deccan Herald

ಕಾಸರಗೋಡು: ಉಪ್ಪಳದ ಸೋಂಕಾಲಿನಲ್ಲಿ ಭಾನುವಾರ ರಾತ್ರಿ ಸಿಪಿಎಂ ಕಾರ್ಯಕರ್ತ ಅಬೂಬಕ್ಕರ್ ಸಿದ್ದಿಕ್ (24) ಅವರನ್ನು ಇರಿದು ಕೊಲೆ ಮಾಡಲಾಗಿದೆ.

ರಾತ್ರಿ 11 ಗಂಟೆಗೆ ಬೈಕ್‌ಗಳಲ್ಲಿ ಬಂದ ತಂಡವೊಂದು ಈ ಕೊಲೆ ಮಾಡಿದ್ದು, ಆರೋಪಿಗಳು ತಲೆಮೆರೆಸಿಕೊಂಡಿದ್ದರು. ಕೊಲೆ ನಡೆಯುತ್ತಿದ್ದ ವೇಳೆ ಉಂಟಾದ ಗದ್ದಲದಿಂದ ಸ್ಥಳೀಯರು ಜಮಾಯಿಸಿದ್ದು, ರಕ್ತದ ಮಡುವಿನಲ್ಲಿದ್ದ ಸಿದ್ದಿಕ್ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಿಯೇ ಅವರು ಮೃತಪಟ್ಟಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಳ ಪ್ರತಾಪನಗರದ ಅಶ್ವತ್ ಹಾಗೂ ಕಾರ್ತಿಕ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಉಳಿದ ಆರೋಪಿಗಳಿಗೆ ಶೋಧ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಸಿದ್ದಿಕ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಉಪ್ಪಳಕ್ಕೆ ತರಲಾಯಿತು.

ಖತಾರ್‌ನಲ್ಲಿ ಉದ್ಯೋಗಳಲ್ಲಿದ್ದ ಸಿದ್ದಿಕ್ ಇತ್ತೀಚೆಗೆ ಊರಿಗೆ ಬಂದಿದ್ದರು. ಸೋಂಕಾಲು ಮತ್ತು ಸಮೀಪ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ ಮಾಡುವುದನ್ನು ಸಿದ್ಧಿಕ್ ವಿರೋಧಿಸಿದ್ದರು. ಈ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ.

ಸಿಪಿಎಂ ಆರೋಪ: ಕೊಲೆ ಮಾಡಿದ ಆರೋಪಿಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು ಎಂದು ಸಿಪಿಎಂ ಆರೋಪಿಸಿದೆ.

ಕೊಲೆ ಖಂಡಿಸಿ, ಮಂಜೇಶ್ವರ ತಾಲ್ಲೂಕಿನಲ್ಲಿ ಸೋಮವಾರ ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆಯ ತನಕ ಸಿಪಿಎಂ ಮುಷ್ಕರಕ್ಕೆ ಕರೆ ನೀಡಿದ್ದು, ಮಧ್ಯಾಹ್ನ 12 ಗಂಟೆಗೆ ಅಂಗಡಿಗಳು ಮುಚ್ಚಿದ್ದವು. ಮಂಜೇಶ್ವರ, ಕುಂಬಳೆ , ಬದಿಯಡ್ಕ, ಕಾಸರಗೋಡು, ಮುಳ್ಳೇರಿಯಾ ಮುಂತಾದೆಡೆಗಳಲ್ಲೂ ಪ್ರತಿಭಟನಾ ಮೆರವಣಿಗೆ ನಡೆದವು.

ಸಂಬಂಧ ಇಲ್ಲ: ಸಿದ್ದಿಕ್ ಹತ್ಯೆಯಲ್ಲಿ ಬಿಜೆಪಿ ಸಂಘ ಪರಿವಾರಕ್ಕೂ ಹಾಗೂ ಕಾರ್ಯಕರ್ತರಿಗೆ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೆ ಹೇಳಿದ್ದಾರೆ.

ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಪಟ್ಟಂತೆ ಈ ಕೊಲೆಯಾಗಿದೆ. ಆದರೆ ಸಿಪಿಎಂ ಈ ಘಟನೆಯನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !