ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿಯಲ್ಲಿ ಭೀಮಾ ನಾಯ್ಕ, ಕಂಪ್ಲಿಯಲ್ಲಿ ಗಣೇಶ ’ಕೈ’ ಹಿಡಿದ ಮತದಾರರು

ಆನಂದ್‌ ಸಿಂಗ್‌, ಪರಮೇಶ್ವರ ದಾಖಲೆ ಸೃಷ್ಟಿ
ಅಕ್ಷರ ಗಾತ್ರ

ಹೊಸಪೇಟೆ: ವಿಜಯನಗರ ಸಾಮಾನ್ಯ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಗೆಲುವು ದಾಖಲಿಸುವ ಮೂಲಕ ಆನಂದ್‌ ಸಿಂಗ್‌ ಹೊಸ ದಾಖಲೆ ನಿರ್ಮಾಣ ಮಾಡಿದರು.

ಜತೆಗೆ ಪಕ್ಷಕ್ಕಿಂತ ತಾನೇ ಮುಖ್ಯ ಎಂಬುದನ್ನು ಸಾಬೀತು ಮಾಡಿದರು. ಈ ಕ್ಷೇತ್ರದಿಂದ ಹಿಂದಿನ ಎರಡು ಚುನಾವಣೆಗಳಲ್ಲಿ ಸತತವಾಗಿ ಗೆದ್ದು ಆನಂದ್‌ ಸಿಂಗ್‌ ದಾಖಲೆ ನಿರ್ಮಿಸಿದ್ದರು. ಈಗ ಮೂರನೇ ಬಾರಿ ಗೆಲ್ಲುವುದರೊಂದಿಗೆ ‘ಹ್ಯಾಟ್ರಿಕ್‌’ ವಿಜಯ ದಾಖಲಿಸಿದರು.

2008, 2013ರಲ್ಲಿ ಆನಂದ್‌ ಸಿಂಗ್‌ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು. ಟಿಪ್ಪು ಸುಲ್ತಾನ್‌ ಜಯಂತಿಯಲ್ಲಿ ಭಾಗವಹಿಸಿ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದ ಆನಂದ್‌ ಸಿಂಗ್‌, ಚುನಾವಣೆಯ ಹೊಸ್ತಿಲಿನಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದರು. ಜತೆಗೆ ಆ ಪಕ್ಷದ ಟಿಕೆಟ್‌ ಗಿಟ್ಟಿಸಿ ಚುನಾವಣೆಗೆ ಸ್ಪರ್ಧಿಸಿದರು. ಆರಂಭದಲ್ಲಿ ಕಾಂಗ್ರೆಸ್‌ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಆನಂದ್‌ ಸಿಂಗ್‌ ಅವರು ಒಬ್ಬೊಬ್ಬರನ್ನೇ ವಿಶ್ವಾಸಕ್ಕೆ ತೆಗೆದುಕೊಂಡರು. ಪಕ್ಷದಿಂದ ಮುನಿಸಿಕೊಂಡು ದೂರ ಉಳಿದಿದ್ದ ಅವರ ಸಹೋದರ, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್‌ ಸಿಂಗ್‌ ಕೂಡ ಚುನಾವಣೆಗೆ ಎರಡು ವಾರಗಳು ಉಳಿದಿರುವಾಗ ಅವರ ಪರ ಪ್ರಚಾರಕ್ಕೆ ದುಮುಕಿ ಶಕ್ತಿ ತುಂಬಿದರು.

ಆನಂದ್‌ ಸಿಂಗ್‌ ಅವರ ಎದುರಾಳಿ, ಬಿಜೆಪಿ ಅಭ್ಯರ್ಥಿ ಎಚ್‌.ಆರ್‌.ಗವಿಯಪ್ಪ ಅವರು ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ ತೊರೆದು ಆ ಪಕ್ಷಕ್ಕೆ ಸೇರಿದರು. ಗವಿಯಪ್ಪನವರು ಮೂರು ದಶಕಗಳಿಂದ ರಾಜಕೀಯದಲ್ಲಿ ಇದ್ದಾರೆ. ಆದರೆ, ಜನರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇರಲಿಲ್ಲ. ಚುನಾವಣೆಯ ಸಂದರ್ಭದಲ್ಲಷ್ಟೇ ಕಾಣಿಸಿಕೊಳ್ಳುತ್ತಾರೆ ಎಂಬು ಆರೋಪ ಇತ್ತು. ಹೀಗಾಗಿ ಜನ ಆನಂದ್‌ ಸಿಂಗ್‌ ಅವರ ಕೈಹಿಡಿದರು. ಆನಂದ್‌ ಸಿಂಗ್‌ ಅವರ ದೊಡ್ಡಪ್ಪನ ಮಗ ದೀಪಕ್‌ ಸಿಂಗ್‌, ಕಾಂಗ್ರೆಸ್‌ನಿಂದ ಬಂಡಾಯವೆದ್ದು ಜೆ.ಡಿ.ಎಸ್‌.ನಿಂದ ಸ್ಪರ್ಧಿಸಿದ್ದರು. ಆದರೆ, ಜನ ಅವರನ್ನು ತಿರಸ್ಕರಿಸಿದ್ದಾರೆ.


ಪರಮೇಶ್ವರ ನಾಯ್ಕ ದಾಖಲೆ:
ಹೂವಿನಹಡಗಲಿ ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಪಿ.ಟಿ. ಪರಮೇಶ್ವರ ನಾಯ್ಕ ಅವರು ಕ್ಷೇತ್ರದಿಂದ ಸತತ ಎರಡು ಸಲ ಗೆಲ್ಲುವುದರ ಮೂಲಕ ಹೊಸ ದಾಖಲೆ ಸೃಷ್ಟಿಸಿದರು.
ಸ್ವಾತಂತ್ರ್ಯ ಬಂದ ನಂತರದಿಂದ 2013ರ ವರೆಗೆ ನಡೆದ ಚುನಾವಣೆಗಳಲ್ಲಿ ಸತತವಾಗಿ ಈ ಕ್ಷೇತ್ರದಿಂದ ಎರಡು ಸಲ ಯಾರೂ ಗೆದ್ದಿರಲಿಲ್ಲ. ಒಂದು ಸಲ ಎಂ.ಪಿ. ಪ್ರಕಾಶ್‌ ಅವರು ಸಾರ್ವತ್ರಿಕ ಚುನಾವಣೆ ಹಾಗೂ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ, ಹಿಂದಿನ ಚುನಾವಣೆಯಲ್ಲಿ ಗೆದ್ದಿದ್ದ ಪರಮೇಶ್ವರ ನಾಯ್ಕ ಅವರು ಪುನರಾಯ್ಕೆ ಆಗುವುದರೊಂದಿಗೆ ನೂತನ ದಾಖಲೆ ಸೃಷ್ಟಿಸಿದರು. ಹಿಂದಿನ ಚುನಾವಣೆಯ ವರೆಗೆ ಈ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲುತ್ತಿದ್ದರೋ ರಾಜ್ಯದಲ್ಲಿ ಆ ಪಕ್ಷವೇ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿತ್ತು. ಆದರೆ, ಈ ಸಲ ಅದನ್ನು ಮತದಾರರು ಸುಳ್ಳಾಗಿಸಿದ್ದಾರೆ.
ಓದೋ ಗಂಗಪ್ಪನವರು ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದು ಪರಮೇಶ್ವರ ನಾಯ್ಕ ಅವರ ಗೆಲುವಿಗೆ ಸಹಕಾರಿಯಾಯಿತು. ಓದೋ ಗಂಗಪ್ಪನವರ ಸ್ಪರ್ಧೆಯಿಂದ ಬಿಜೆಪಿಯ ಸಾಂಪ್ರದಾಯಿಕ ಮತಗಳು ವಿಭಜನೆಯಾದವು. ಇದರಿಂದ ಪರಮೇಶ್ವರ ನಾಯ್ಕ ಗೆಲುವು ಸುಲಭವಾಯಿತು. ಬಿಜೆಪಿಯ ಬಿ. ಚಂದ್ರ ನಾಯ್ಕ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಕೂಡ್ಲಿಗಿಯಲ್ಲಿ ಡಿವೈಎಸ್ಪಿಯಾಗಿದ್ದ ಅನುಪಮಾ ಶೆಣೈ ಅವರ ವರ್ಗಾವಣೆ ವಿವಾದದಿಂದ ಪರಮೇಶ್ವರ ನಾಯ್ಕ ಸಚಿವ ಸ್ಥಾನ ಕಳೆದುಕೊಂಡಿದ್ದರು. ಇದರಿಂದ ಪಕ್ಷ  ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಸಚಿವರಿದ್ದಾಗ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಆದರೆ, ಸಚಿವ ಸ್ಥಾನ ಕಳೆದುಕೊಂಡ ನಂತರ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ₹1,500 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ಕೊಡಿಸಿದ್ದರು.

ಕಂಪ್ಲಿಯಲ್ಲಿ ಬದಲಾವಣೆಗಾಗಿ ಮತ:
ಕಂಪ್ಲಿ ಪರಿಶಿಷ್ಟ ಪಂಗಡ (ಎಸ್ಟಿ) ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜೆ.ಎನ್‌. ಗಣೇಶ ಗೆಲುವು ಸಾಧಿಸಿದ್ದಾರೆ.
ಜೆ.ಎನ್‌.ಗಣೇಶ ಅವರಿಗೆ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿತ್ತು. ಹೀಗಾಗಿ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಕ್ಷೇತ್ರದ ಹಾಲಿ ಶಾಸಕ ಟಿ.ಎಚ್‌. ಸುರೇಶಬಾಬು ಅವರಿಗೆ ತೀವ್ರ ಪೈಪೋಟಿ ನೀಡಿದ್ದರು. ಈ ಸಲ ಕಾಂಗ್ರೆಸ್‌ ಅವರನ್ನು ಕಣಕ್ಕಿಳಿಸಿತ್ತು. ಅಂತಿಮವಾಗಿ ಅವರು ಗೆಲುವು ಸಾಧಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಸೋತಿದ್ದ ಅವರ ಪರ ಕ್ಷೇತ್ರದಲ್ಲಿ ಅನುಕಂಪದ ಅಲೆ ಕೂಡ ಇತ್ತು. ಗಣೇಶ ಅವರ ಗೆಲುವಿಗಾಗಿ ಕಾಂಗ್ರೆಸ್‌ ಹಿರಿಯ ಮುಖಂಡ ನಾರಾ ಸೂರ್ಯನಾರಾಯಣ ರೆಡ್ಡಿ ಅವರು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದರು.
2008ರಲ್ಲಿ ಬಿಜೆಪಿ, 2013ರಲ್ಲಿ ಬಿ.ಎಸ್‌.ಆರ್‌. ಕಾಂಗ್ರೆಸ್‌ನಿಂದ ಗೆದ್ದಿದ್ದ ಟಿ.ಎಚ್‌. ಸುರೇಶಬಾಬು ಈ ಸಲದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಚುನಾವಣೆಗೂ ಮುನ್ನ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಅಂತಿಮವಾಗಿ ಬಿಜೆಪಿ ಹುರಿಯಾಳು ಆಗಿ ಕಣಕ್ಕಿಳಿದಿದ್ದರು. ಎರಡು ಅವಧಿಗೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿರಲಿಲ್ಲ. ಜತೆಗೆ ಜನರೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಅಂತಿಮವಾಗಿ ಜನ ಬದಲಾವಣೆ ಬಯಸಿ, ಗಣೇಶ ಅವರನ್ನು ಆಯ್ಕೆ ಮಾಡಿದ್ದಾರೆ.


ಭೀಮಾ ನಾಯ್ಕ ಕೈಹಿಡಿದ ಅಭಿವೃದ್ಧಿ:
ಹೊಸಪೇಟೆ: ಹಗರಿಬೊಮ್ಮನಹಳ್ಳಿ ಪರಿಶಿಷ್ಟ ಜಾತಿ (ಎಸ್ಸಿ) ಮೀಸಲು ಕ್ಷೇತ್ರದಿಂದ ಕಾಂಗ್ರೆಸ್‌ನ ಎಲ್‌.ಬಿ.ಪಿ. ಭೀಮಾ ನಾಯ್ಕ ಜಯ ಗಳಿಸಿದ್ದಾರೆ.
2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದ್ದರಿಂದ ಭೀಮಾ ನಾಯ್ಕ ಜೆ.ಡಿ.ಎಸ್‌.ನಿಂದ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ನಂತರದ ದಿನಗಳಲ್ಲಿ ಕಾಂಗ್ರೆಸ್‌ ಜತೆ ಗುರುತಿಸಿಕೊಂಡು, ಮಾನಸಿಕವಾಗಿ ಆ ಪಕ್ಷದ ಚಟುವಟಿಕೆಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಂಡರು. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಮತ ಕೂಡ ಚಲಾಯಿಸಿದರು. ದಿನಗಳು ಕಳೆದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಭೀಮಾ ನಾಯ್ಕ ಅವರು ಕ್ಷೇತ್ರಕ್ಕೆ ₹1,500 ಕೋಟಿಗೂ ಹೆಚ್ಚು ಅನುದಾನ ತಂದು ಕೆಲಸ ಮಾಡಿಸಿದರು. ನನೆಗುದಿಗೆ ಬಿದ್ದಿದ್ದ ಮಾಲವಿ ಜಲಾಶಯ, ಚಿಲವಾರು ಬಂಡಿ ಏತ ನೀರಾವರಿ ಯೋಜನೆಗೆ ಚಾಲನೆ ಕೊಡಿಸಲು ಶ್ರಮಿಸಿದರು. ನಿರಂತರವಾಗಿ ಕ್ಷೇತ್ರದ ಜನತೆ ಜತೆ ಸಂಪರ್ಕದಲ್ಲಿ ಇದ್ದರು. ಈ ಎಲ್ಲ ಅಂಶಗಳು ಚುನಾವಣೆಯಲ್ಲಿ ಅವರ ಗೆಲುವಿಗೆ ಸಹಕಾರಿಯಾಯಿತು.
ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಅಸ್ಪೃಶ್ಯ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆಂದು ಆ ಸಮುದಾಯದವರು ಕಾಂಗ್ರೆಸ್‌ ವರಿಷ್ಠರ ಮೇಲೆ ಒತ್ತಡ ಹೇರಿದ್ದರು. ಟಿಕೆಟ್‌ ಕೈ ತಪ್ಪಿದ್ದರಿಂದ ಕಾಂಗ್ರೆಸ್‌ ವಿರುದ್ಧ ಮತ ಚಲಾವಣೆ ಮಾಡುವುದಾಗಿ ಆ ಸಮುದಾಯದ ಮುಖಂಡರು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದರು. ಅಲ್ಲದೇ ಆ ಸಮುದಾಯದ ಪರಮೇಶ್ವರಪ್ಪ ಎಂಬುವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ಇದು ಭೀಮಾ ನಾಯ್ಕ ಅವರಿಗೆ ಮುಳುವಾಗಬಹುದು ಎಂದು ಭಾವಿಸಲಾಗಿತ್ತು. ಆದರೆ, ಮತದಾರರು ಅದಕ್ಕೆ ತದ್ವಿರುದ್ಧವಾದ ಜನಾದೇಶ ಕೊಟ್ಟಿದ್ದಾರೆ.

ಆನಂದ್‌ ಸಿಂಗ್‌ ಗೆಲುವಿಗೆ ಕಾರಣವಾದ ಐದು ಅಂಶಗಳು

* ಕ್ಷೇತ್ರದ ಅಭಿವೃದ್ಧಿಗೆ ಕೆಲಸ
* ಜನರೊಂದಿಗೆ ನಿರಂತರ ಸಂಪರ್ಕ
* ಎಲ್ಲ ಸಮಾಜದೊಂದಿಗೆ ಉತ್ತಮ ಬಾಂಧವ್ಯ
* ಬಹಿರಂಗವಾಗಿ ಪ್ರಗತಿಪರ ಸಂಘಟನೆಗಳ ಬೆಂಬಲ
* ಬಿಜೆಪಿಯ ಗವಿಯಪ್ಪ ಜನರಿಂದ ದೂರವಿದ್ದದ್ದು
ಪರಮೇಶ್ವರ ನಾಯ್ಕ ಗೆಲುವಿಗೆ ಕಾರಣವಾದ ಐದು ಅಂಶಗಳು
* ಹೆಚ್ಚಿನ ಅನುದಾನ ತಂದು ಕೆಲಸ
* ಕೊನೆಯ 2 ವರ್ಷ ಕ್ಷೇತ್ರದಲ್ಲೇ ಠಿಕಾಣಿ
* ಪಕ್ಷದಲ್ಲಿನ ಸಂಘಟನೆ, ಒಗ್ಗಟ್ಟಿಗೆ ಒತ್ತು
* ಬಿಜೆಪಿಯ ಒಳಜಗಳದಿಂದ ಲಾಭ
* ವಿಭಜನೆಯಾಗದ ಸಾಂಪ್ರದಾಯಿಕ ಮತಗಳು

ಗಣೇಶ ಗೆಲುವಿಗೆ ಕಾರಣವಾದ ಐದು ಅಂಶಗಳು
* ಬದಲಾವಣೆ ಬಯಸಿದ ಕ್ಷೇತ್ರದ ಜನ
* ಹಿಂದಿನ ಅವಧಿಯಲ್ಲಿ ಅಭಿವೃದ್ಧಿಗೆ ಹಿನ್ನಡೆ
* ಜೆ.ಎನ್‌.ಗಣೇಶಗೆ ಅನುಕಂಪದ ಗೆಲುವು
* ಗಣೇಶಗೆ ಸೂರ್ಯನಾರಾಯಣ ರೆಡ್ಡಿ ಬಲ
* ಸುರೇಶಬಾಬು ಕ್ಷೇತ್ರದಿಂದ ದೂರ ಉಳಿದದ್ದು
ಭೀಮಾ ನಾಯ್ಕ ಗೆಲುವಿಗೆ ಕಾರಣವಾದ ಐದು ಅಂಶಗಳು
* ನನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಚಾಲನೆ
* ನಿರಂತರವಾಗಿ ಕ್ಷೇತ್ರದ ಜನರೊಂದಿಗೆ ಸಂಪರ್ಕ
* ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಲಾಭ
* ಬಿಜೆಪಿ, ಜೆ.ಡಿ.ಎಸ್‌. ಮತ ವಿಭಜನೆ ಲಾಭ
* ಭೀಮಾ ನಾಯ್ಕ ವ್ಯಕ್ತಿಗತ ವರ್ಚಸ್ಸು ಕೆಲಸ

ವಿಜಯನಗರ
ಆನಂದ್‌ ಸಿಂಗ್‌ (ಕಾಂಗ್ರೆಸ್‌) 83,214 (8,228 ಗೆಲುವಿನ ಅಂತರ)
ಎಚ್‌.ಆರ್‌.ಗವಿಯಪ್ಪ (ಬಿಜೆಪಿ) 74,986
ದೀಪಕ್‌ ಸಿಂಗ್‌ (ಜೆ.ಡಿ.ಎಸ್‌.) 3,835
ಟಿ.ಎಸ್‌. ಶೀಲಾ (ಪಕ್ಷೇತರ) 638
ಜಿ. ಶಫಿ ಸಾಬ್‌ (ಪಕ್ಷೇತರ) 463
ಎಸ್‌. ಅಲೀಂ ಬಾಷಾ (ಪಕ್ಷೇತರ) 227
ಪ.ಯ.ಗಣೇಶ (ಪಕ್ಷೇತರ) 196
ಎಸ್‌.ಎಂ. ಮನೋಹರ್‌ (ಪಕ್ಷೇತರ) 178
ಎಲ್‌.ಎಸ್‌. ಬಶೀರ್‌ ಅಹಮ್ಮದ್‌ (ಪಕ್ಷೇತರ) 173
ಕೆ. ಉಮೇಶ್‌ (ಪಕ್ಷೇತರ) 136
ನೋಟಾ 1754


ಕಂಪ್ಲಿ
ಜೆ.ಎನ್.ಗಣೇಶ (ಕಾಂಗ್ರೆಸ್) 8,0592 (5,555 ಗೆಲುವಿನ ಅಂತರ)
ಟಿ.ಎಚ್‌. ಸುರೇಶಬಾಬು (ಬಿಜೆಪಿ) 75,037
ಕೆ. ರಾಘವೇಂದ್ರ (ಜೆ.ಡಿ.ಎಸ್‌.) 4,832
ವಿ.ಎಸ್‌. ಶಿವಶಂಕರಪ್ಪ (ಸಿಪಿಐಎಂ)1111
ಬಿ. ಶಾಂತಿಲಕ್ಷ್ಮಿ (ಪಕ್ಷೇತರ) 1217
ಗಾಲಿ ಮಲ್ಲಯ್ಯ (ಪಕ್ಷೇತರ) 846
ನೋಟಾ 2,125


ಹೂವಿನಹಡಗಲಿ
ಪಿ.ಟಿ. ಪರಮೇಶ್ವರ ನಾಯ್ಕ (ಕಾಂಗ್ರೆಸ್‌) 54,097 (9,178 ಗೆಲುವಿನ ಅಂತರ)
ಬಿ. ಚಂದ್ರ ನಾಯ್ಕ (ಬಿಜೆಪಿ) 28,255
ಕಾಯಣ್ಣನವರ ಪುತ್ರಪ್ಪ (ಜೆ.ಡಿ.ಎಸ್‌.) 8,327
ಓದೋ ಗಂಗಪ್ಪ (ಪಕ್ಷೇತರ) 44,919
ಎಲ್‌. ಕೃಷ್ಣ ನಾಯ್ಕ (ಎಂ.ಇ.ಪಿ.) 1,534
ವಿ. ಹರೀಶಕುಮಾರ (ಕೆ.ಪಿ.ಜೆ.ಪಿ.) 824
ನೋಟಾ    2,024

ಹಗರಿಬೊಮ್ಮನಹಳ್ಳಿ
ಎಲ್‌.ಬಿ.ಪಿ. ಭೀಮಾ ನಾಯ್ಕ (ಕಾಂಗ್ರೆಸ್‌) 77,564 (7,607 ಗೆಲುವಿನ ಅಂತರ)
ಕೆ. ನೇಮರಾಜ ನಾಯ್ಕ (ಬಿಜೆಪಿ) 69,957
ಎಸ್‌. ಕೃಷ್ಣ ನಾಯ್ಕ (ಜೆ.ಡಿ.ಎಸ್‌.) 5,090
ಬಿ. ಮಾಳಮ್ಮ (ಸಿಪಿಐಎಂ) 1,486
ಎಚ್‌. ಅಜ್ಜಯ್ಯ (ಪಕ್ಷೇತರ) 675
ಸಿ.ಎಚ್‌. ಲಿಂಗಪ್ಪ ಚಲುವಾದಿ (ಪಕ್ಷೇತರ) 257
ಸಂತೋಷ ಗುಳೇದಟ್ಟಿ (ಪಕ್ಷೇತರ) 305
ವಿ. ಹನುಮಂತಪ್ಪ (ಪಕ್ಷೇತರ) 520
ಎಲ್‌. ಪರಮೇಶ್ವರ (ಪಕ್ಷೇತರ) 17,025
ನೋಟಾ 1,341

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT