ಗುರುವಾರ , ಆಗಸ್ಟ್ 22, 2019
21 °C
ಕಟೀಲು ದೇವಳದ ಅರ್ಚಕರ ಮನೆ ಡಕಾಯಿತಿ ಪ್ರಕರಣ

ತಲೆಮರೆಸಿಕೊಂಡಿದ ಆರೋಪಿಯ ಬಂಧನ

Published:
Updated:
Prajavani

ಮಂಗಳೂರು: 2016ರಲ್ಲಿ ಕಟೀಲು ದೇವಸ್ಥಾನದ ಅರ್ಚಕ ವಾಸುದೇವ ಅಸ್ರಣ್ಣ ಅವರ ಮನೆಯಲ್ಲಿ ಡಕಾಯಿತಿ ನಡೆಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ಸೋಮೇಶ್ವರದ ನಿವಾಸಿ ಚಂದ್ರಹಾಸ ಅಲಿಯಾಸ್ ಸೋಮೇಶ್ವರ ಚಂದ್ರ (42) ಬಂಧಿತ ಆರೋಪಿ. ಮುಂಬೈಯಲ್ಲಿ ಹೋಟೆಲ್‌ ನಡೆಸುತ್ತಿದ್ದ ಈತ, ಅಲ್ಲಿಯೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ. ಊರಿಗೆ ಬಂದಿರುವ ಮಾಹಿತಿ ಆಧರಿಸಿ ದಕ್ಷಿಣ ಉಪ ವಿಭಾಗದ ಎಸಿಪಿ ಟಿ.ಕೋದಂಡರಾಮ್‌ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

2016ರ ಅಕ್ಟೋಬರ್‌ 4ರಂದು ಬೆಳಗ್ಗಿನ ಜಾವ ವಾಸುದೇವ ಅಸ್ರಣ್ಣ ಅವರ ಮನೆಗೆ ನುಗ್ಗಿದ ಆರೋಪಿಗಳು ಮಾರಕಾಸ್ತ್ರ ಮತ್ತು ರಿವಾಲ್ವರ್‌ ತೋರಿಸಿ, ಮನೆಯಲ್ಲಿದ್ದವರನ್ನು ಕಟ್ಟಿ ಹಾಕಿದ್ದರು. 80 ಪವನ್‌ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಬಜ್ಪೆ ಠಾಣೆ ಪೊಲೀಸರು, ಏಳು ಆರೋಪಿಗಳನ್ನು ಬಂಧಿಸಿದ್ದರು. ಚಂದ್ರಹಾಸ ತಲೆಮರೆಸಿಕೊಂಡಿದ್ದ. ಈಗ ಆರೋಪಿಯನ್ನು ಬಂಧಿಸಿದ ಬಜ್ಪೆ ಠಾಣೆ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನಲ್ಲಿ ಕೊಲೆಯತ್ನ ಪ್ರಕರಣದಲ್ಲಿ ಚಂದ್ರಹಾಸನಿಗೆ ಏಳು ವರ್ಷ ಜೈಲು ಶಿಕ್ಷೆಯಾಗಿತ್ತು. ಮಂಗಳೂರಿನ ಉಳ್ಳಾಲ, ಕಾವೂರು, ಬರ್ಕೆ ಮತ್ತು ಕದ್ರಿ ಪೊಲೀಸ್‌ ಠಾಣೆಗಳಲ್ಲೂ ಆರೋಪಿಯ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.

Post Comments (+)