ಬುಧವಾರ, ನವೆಂಬರ್ 13, 2019
25 °C

ಪುತ್ತೂರು | ಒಂಟಿ ವ್ಯಕ್ತಿ ನಿಗೂಢ ಸಾವು: ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಮೃತದೇಹ

Published:
Updated:
Prajavani

ಪುತ್ತೂರು: ಹೊರವಲಯದ ಪಾಂಗಳಾಯಿ ಎಂಬಲ್ಲಿನ ಮನೆಯೊಂದರಲ್ಲಿ ಏಕಾಂಗಿಯಾಗಿ ವಾಸ್ತವ್ಯವಿದ್ದ ವ್ಯಕ್ತಿಯೊಬ್ಬರ ಮೃತದೇಹ ಬುಧವಾರ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನ ಕಾರಣ ನಿಗೂಢವಾಗಿದೆ.

ಪಾಂಗಾಳಾಯಿ ನಿವಾಸಿ ಚಂದ್ರಶೇಖರ ಪೂಜಾರಿ (57) ಮೃತಪಟ್ಟವರು. ಅವರ ಮನೆಯ ಕಡೆಯಿಂದ ಕಳೆದ 3 ದಿನಗಳಿಂದೀಚೆಗೆ ದುರ್ವಾಸನೆ ಹರಡಿತ್ತು. ಕೊನೆಗೆ  ಸಂಶಯಗೊಂಡ ಸ್ಥಳೀಯ ಮಹಿಳೆಯೊಬ್ಬರು ಬುಧವಾರ ಮನೆಗೆ ತೆರಳಿ ಪರಿಶೀಲಿಸಿದಾಗ,  ಬಾಗಿಲು, ಚಿಲಕ ಹಾಕಿಕೊಂಡಿತ್ತು. ಮನೆಯೊಳಗೆ ನೊಣಗಳು ಹಾರಾಡುತ್ತಿದ್ದದು ಕಂಡು ಬಂದಿತ್ತು.  ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಗರ ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಒಡೆದು ಮನೆ ಪ್ರವೇಶಿಸಿ ಪರಿಶೀಲಿಸಿದಾಗ ಮಲಗುವ ಕೊಠಡಿಯ ಮಂಚದ ಕೆಳಗಡೆ ಚಂದ್ರಶೇಖರ್ ಅವರ ಮೃತದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು. ಅಸ್ಥಿಪಂಜರ ಸ್ಥಿತಿಯಲ್ಲಿತ್ತು.

ಈ ಹಿಂದೆ ಪುತ್ತೂರಿನ ಬಸ್ ನಿಲ್ದಾಣದ ಸಮೀಪ ಹಿಂದೂ ಮಿಲಿಟರಿ ಹೋಟೆಲ್ ನಡೆಸುತ್ತಿದ್ದ ಬಾಬು ಪೂಜಾರಿ ಅವರ 5 ಹೆಣ್ಣು ಮತ್ತು 5 ಗಂಡು ಮಕ್ಕಳಲ್ಲಿ ಚಂದ್ರಶೇಖರ್ 7ನೇಯವರಾಗಿದ್ದರು. ಟೈಲರಿಂಗ್ ವೃತ್ತಿ ನಡೆಸುತ್ತಿದ್ದು, 10 ವರ್ಷಗಳಿಂದ ವೃತ್ತಿ ನಡೆಸುತ್ತಿರಲಿಲ್ಲ. ಮೂಲ ಮನೆಯಾದ ಪಾಂಗಾಳಾಯಿ ಮನೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದರು. ಯಾರೊಂದಿಗೂ ಬೆರೆಯದೆ,  ಏನನ್ನು ಕೊಟ್ಟರೂ ತಿನ್ನುತ್ತಿರಲಿಲ್ಲ.  ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

ಕಳೆದ ಇದೇ 7 ರಂದು ಚಂದ್ರಶೇಖರ ಪೂಜಾರಿ ಅವರು ವಾಸ್ತವ್ಯವಿದ್ದ ಪಾಂಗಳಾಯಿಯ ಮನೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಅವರ ಅಣ್ಣ ಪ್ರಭಾಕರ್ ಎಂಬವರು ಬಂದು ಹೋಗಿದ್ದರು. ಆ ಬಳಿಕ ಚಂದ್ರಶೇಖರ ಅವರನ್ನು ಸ್ಥಳಿಯರು ಯಾರೂ ನೋಡಿಲ್ಲ ಎಂಬ ಮಾಹಿತಿ ಲಭಿಸಿದೆ.

ಯಾವಾಗಲೂ ಮನೆಯಲ್ಲಿ ಬಾಗಿಲು ಚಿಲಕ ಹಾಕಿಯೇ ಒಳಗಡೆ ಇರುತ್ತಿದ್ದ ಚಂದ್ರಶೇಖರ್ ಅವರು ತಮ್ಮ ಕುಟುಂಬದ ಸಹೋದರ ಸಹೋದರಿಯರು ಬಂದಾಗ ಮಾತ್ರ ಬಾಗಿಲು ತೆಗೆಯುತ್ತಿದ್ದರು. ಯಾರ ಸಂಪರ್ಕವೂ ಅವರಿಗಿರಲಿಲ್ಲ. ಇದೇ 9ರಂದೇ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ನಗರ ಠಾಣೆಯ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ನೇತೃತ್ವದಲ್ಲಿ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಶವದ ಮಹಜರು ಪ್ರಕ್ರಿಯೆ ನಡೆಸಲಾಯಿತು. ಮರಣೋತ್ತರ ವರದಿಯ ಬಳಿಕವಷ್ಟೇ ಸಾವಿನ ಕಾರಣ ತಿಳಿದು ಬರಬೇಕಿದೆ.  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)