ಬುಧವಾರ, ನವೆಂಬರ್ 20, 2019
21 °C

ಅಪಘಾತ: ಮೂರು ಮಂದಿ ಆಸ್ಪತ್ರೆಗೆ ದಾಖಲು

Published:
Updated:
Prajavani

ಮುಡಿಪು: ಮರಳು ಸಾಗಣೆಯ ಟಿಪ್ಪರ್ ಲಾರಿ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 13 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಗುರುವಾರ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಟಿಪ್ಪರ್ ಹಾಗೂ ಬಸ್‌ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡಿರುವ ನರಿಂಗಾನ ಬೋಳದಪದವಿನ ಪ್ರಜ್ಞಾ(21), ಕಾಲೇಜು ವಿದ್ಯಾರ್ಥಿನಿ ಅನುಷಾ ವರ್ಕಾಡಿ(19) ಹಾಗೂ ಬಸ್ ಚಾಲಕ ಮೌರಿಸ್ (55) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸಣ್ಣಪುಟ್ಟ ಗಾಯಗೊಂಡ 13 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಕೇರಳ-ಕರ್ನಾಟಕ ಗಡಿ ಭಾಗ ತೌಡುಗೋಳಿಯಿಂದ ಸ್ಟೇಟ್‌ಬ್ಯಾಂಕ್ ಕಡೆ ಸಂಚರಿಸುತ್ತಿದ್ದ ಬಲೆತ್ತೋಡು ಖಾಸಗಿ ಬಸ್ ಮಂಜನಾಡಿ ದೇವಸ್ಥಾನ ರಸ್ತೆಯಾಗಿ ಸಂಚರಿಸುತ್ತಿದ್ದಾಗ ಅದೇ ರಸ್ತೆಯಲ್ಲಿ ನಾಟೆಕಲ್‌ನಿಂದ ಮಂಜನಾಡಿ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ.

ಮರಳು ಸಾಗಣೆ ಲಾರಿಗಳ ಸಂಚಾರದಿಂದಾಗಿ ರಸ್ತೆ ಹಾಳಾಗಿದ್ದು, ಅಪಘಾತ ಸಂಭವಿಸುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)