ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಗಂಟೆ ಅಡುಗೆ, 197 ಖಾದ್ಯ!

Last Updated 8 ಮೇ 2018, 19:30 IST
ಅಕ್ಷರ ಗಾತ್ರ

ಕೂದಲು, ಉಗುರು, ಗಡ್ಡ ಬೆಳೆಸಿ ದಾಖಲೆ ಪುಟ ಸೇರಿದವರಿದ್ದಾರೆ. ಕಷ್ಟಕರವಾದ ಸಾಧನೆಗಳ ಮೂಲಕ ದಾಖಲೆ ಬರೆದವರೂ ಇದ್ದಾರೆ. ಮಂಡ್ಯದ 24 ವರ್ಷದ ಶೆಫ್‌ ಶರತ್‌ ಕುಮಾರ್‌ ಸತತ 60 ಗಂಟೆ ನಿಂತುಕೊಂಡೇ 197 ಬಗೆಯ ಅಡುಗೆ ಮಾಡುವ ಮೂಲಕ ವಿಶಿಷ್ಟ ದಾಖಲೆ ಮಾಡಿದ್ದಾರೆ. ಈ ಸಾಧನೆ ‘ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌’ನಲ್ಲಿ ದಾಖಲಾಗಿದೆ.

ಬೆನ್ನಿನ ಮೇಲೆ ಪುಟ್ಟದೊಂದು ನೀರಿನ ಚೀಲ, ಅದಕ್ಕೊಂದು ಪೈಪ್‌. ದಣಿವಾದಾಗ ಪೈಪ್‌ ಬಾಯಿಗಿಟ್ಟು ಎರಡು ಗುಟುಕಷ್ಟೇ ನೀರು ಹೀರಿಕೊಳ್ಳುತ್ತಿದ್ದರು. ಮೂರು ಒಲೆ ಉರಿಯುತ್ತಿತ್ತು. ಒಂದರಲ್ಲಿ ಬೀಟ್‌ರೂಟ್‌ ಹಲ್ವಾ ಬೇಯುತ್ತಿತ್ತು. ಪಕ್ಕದಲ್ಲಿಯೇ ಮತ್ತೊಂದು ಖಾದ್ಯದ ತಯಾರಿ ನಡೆಯುತ್ತಿತ್ತು. ಪಿಜ್ಜಾ ಬೇಸ್‌ ತಯಾರಿಸಿ ಓವನ್‌ನಲ್ಲಿ ಇಟ್ಟು ಅದು ಬೇಯುವುದರೊಳಗೆ ಹಲ್ವಾ ತಯಾರಾಗಿತ್ತು. ಅಷ್ಟರಲ್ಲಿ ಚಿಕನ್‌ ಮಾಂಸ ತೊಳೆದು ಅದಕ್ಕೆ ಖಾರ ಮಸಾಲೆ ಹಚ್ಚಿಟ್ಟರು. ಪಿಟ್ಜಾ ಬೇಸ್‌ ರೆಡಿಯಾಗುತ್ತಿದ್ದಂತೆ ಓವನ್‌ನಿಂದ ಹೊರತೆಗೆದು ವೆಜ್, ನಾನ್‌ವೆಜ್‌ ಎರಡೂ ಬಗೆಯ ಪಿಟ್ಜಾ ಸಿದ್ಧಪಡಿಸಿ ಮತ್ತೆ ಬೇಯಲು ಓವನ್‌ನೊಳಗೆ ಇಟ್ಟರು. ಅಷ್ಟರಲ್ಲಿ ಮಸಾಲೆ ಸೇರಿದ ಚಿಕನ್‌ ಕರಿಯಲು ಶುರು ಮಾಡಿದರು. ಅದು ಕರಿಯುತ್ತಿದ್ದಂತೆ ಪಕ್ಕದ ಒಲೆಯಲ್ಲಿ ದೊಡ್ಡದೊಂದು ಬಾಣಲಿ ಇಟ್ಟು ಚಿಕನ್ ಚಿಲ್ಲಿ ತಯಾರಿಸಿದರು. ಮಧ್ಯೆ ಮಧ್ಯೆ ಬಗೆ ಬಗೆಯ ಕುಕ್ಕೀಸ್‌, ಕೇಕ್, ಬಿಸ್ಕತ್‌ಗಳು ಸಿದ್ಧಗೊಳ್ಳುತ್ತಿದ್ದವು. ಹೀಗೆ ಸಿಹಿ ಪೊಂಗಲ್ ತಯಾರಿಯಿಂದ ಆರಂಭಿಸಿ ಪಾಯಸದಲ್ಲಿ ಅಡುಗೆ ಮ್ಯಾರಥಾನ್‌ ಕೊನೆಗೊಂಡಿತು. ಕೆಲವು ಅಡುಗೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ, ಅವುಗಳನ್ನು ವೀಕ್ಷಕರು, ಸ್ವಯಂಸೇವಾ ಸಂಸ್ಥೆಗಳ ಬಡ ಮಕ್ಕಳಿಗೆ ಹಂಚಿದ್ದಾರೆ. ವೀಕ್ಷಕರ, ಸ್ವಯಂಸೇವಕರು, ಕಾಲೇಜು ಸಿಬ್ಬಂದಿ ಮೂರು ದಿನಗಳ ಕಾಲ ಶರತ್‌ ಕೈರುಚಿ ಸವಿದಿದ್ದಾರೆ.

ಮೂರು ದಿನ ನಿದ್ದೆ, ವಿಶ್ರಾಂತಿ ಪಡೆಯದೇ, ಹೊಟ್ಟೆ ತುಂಬಾ ಊಟವನ್ನೂ ಸೇವಿಸದೇ ಅಡುಗೆ ಮಾಡಿ ದಾಖಲೆ ಬರೆದ ಶರತ್‌ಗೆ ವೇದಿಕೆ ಒದಗಿಸಿದ್ದು ಆತ ಕಲಿತ ಎಂ.ಎಸ್‌. ರಾಮಯ್ಯ ಕಾಲೇಜು. ಇಲ್ಲಿಯೇ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮುಗಿಸಿ ಒಂದು ವರ್ಷದಿಂದ ಅಮೆರಿಕದ ಹಡಗಿನಲ್ಲಿ  ಶೆಫ್‌ ಆಗಿರುವ ಶರತ್‌ಗೆ 60 ಗಂಟೆ ಅಡುಗೆ ಮಾಡಿ ದಾಖಲೆ ಬರೆಯಲು ನೆರವಾದವರು ಆತನಿಗೆ ಪಾಠ ಮಾಡಿದ ಶಿಕ್ಷಕರು, ಜೊತೆಗೆ ಕಲಿತ ಸ್ನೇಹಿತರು. ಸ್ವಯಂ ಸೇವಕರಾಗಿ ದುಡಿದವರು ಕಿರಿಯ ವಿದ್ಯಾರ್ಥಿಗಳು. ಶರತ್‌ ಅಡುಗೆ ಮಾಡುತ್ತಿದ್ದರೆ ಸ್ನೇಹಿತರು ಆಗಾಗ ಚಾಕೊಲೆಟ್‌, ಸುಲಿದ ಬಾಳೆಹಣ್ಣನ್ನು ಶರತ್‌ ಬಾಯಿಗಿಡುತ್ತಿದ್ದರು. ಅದು ಬಿಟ್ಟರೆ ಅವರು ಮೂರೂ ದಿನವೂ ಗಟ್ಟಿ ಆಹಾರ ಸೇವಿಸಿಯೇ ಇಲ್ಲ. 

‘ಹಡಗಿನಲ್ಲಿ ಬರೆ ಮಾಂಸಾಹಾರ ತಯಾರಿಸುತ್ತಿದ್ದೆ. ಇಲ್ಲಿ ಭಿನ್ನ ಬಗೆಯ ಖಾದ್ಯ ತಯಾರಿಸುವ ಅವಕಾಶ ಸಿಕ್ಕಿತು’ ಎಂಬ ಖುಷಿ ಶರತ್‌ ಅವರಿಗಿದೆ. ಭಾರತೀಯ ಅಡುಗೆಗಳಲ್ಲಿ ಬಿರಿಯಾನಿ ಇವರ ಇಷ್ಟದ ತಿನಿಸಂತೆ. ಅದನ್ನು ತಯಾರಿಸುವುದೂ ಖುಷಿಯ ಕೆಲಸ ಎನ್ನುತ್ತಾರೆ.

ಬ್ರೇಕ್‌ ತೆಗೆದುಕೊಳ್ಳದೆ ಶರತ್‌ ಅಡುಗೆ ಮಾಡುತ್ತಿದ್ದರೆ ಅವರ ಶಿಕ್ಷಕರು ಒಬ್ಬರಾದ ಮೇಲೆ ಒಬ್ಬರು ಬಂದು ಮಾತನಾಡಿಸಿ ಉತ್ಸಾಹ ಕುಂದದಂತೆ ನೋಡಿಕೊಳ್ಳುತ್ತಿದ್ದರು. ಅಡುಗೆ ಸಾಮಗ್ರಿಗಳನ್ನು ತಡ ಮಾಡದೇ ಪೂರೈಸುತ್ತಿದ್ದ ಕಿರಿಯ ವಿದ್ಯಾರ್ಥಿಗಳ ಉತ್ಸಾಹ ತಾವೇ ದಾಖಲೆ ಬರೆದಂತಿತ್ತು. ಮಂಡ್ಯದಿಂದ ಬಂದಿದ್ದ ಅಪ್ಪ, ಅಮ್ಮ ಸಂಬಂಧಿಗಳು ಪಾಳಿಯಂತೆ ಬಂದು ಬೆಂಬಲ ನೀಡುತ್ತಿದ್ದರು. ಪ್ರೊಫೆಸರ್‌ಗಳೂ ಹಗಲೂ, ರಾತ್ರಿ ಪಾಳಿಯಲ್ಲಿ ಇದ್ದು ತಮ್ಮ ವಿದ್ಯಾರ್ಥಿಯ ಸಾಧನೆಗೆ ಪ್ರೋತ್ಸಾಹ ನೀಡಿದ್ದರು. ಫ್ರೀಡಂ ರಿಫೈಂಡ್‌ ಸನ್‌ಫ್ಲವರ್‌ ಆಯಿಲ್‌ ಕಂಪೆನಿ ಪ್ರಾಯೋಜಕತ್ವ ವಹಿಸಿತ್ತು.


ಷೆಫ್‌ ಶರತ್‌ಗೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಪ್ರಶಸ್ತಿ ಪತ್ರ ನೀಡುತ್ತಿರುವ ತೀರ್ಪುಗಾರ ಹರೀಶ್‌ ಆರ್‌.

‘ಯಾವುದೇ ಒತ್ತಡವಿಲ್ಲದೆ ಶಾಂತಚಿತ್ತದಿಂದ ಅಡುಗೆ ಮಾಡುತ್ತಿರುವುದು ನೋಡಿದಾಗಲೇ ಈ ಹುಡುಗ ಗುರಿ ತಲುಪುತ್ತಾನೆ ಎನ್ನಿಸಿತ್ತು’ ಎಂದು ಇಂಡಿಯಾ ಬುಕ್‌ ಆಫ್‌   ರೆಕಾರ್ಡ್‌ನ ದಕ್ಷಿಣ ಭಾರತದ ತೀರ್ಪುಗಾರ ಹರೀಶ್‌ ಹೇಳುತ್ತಾರೆ. ಯಾವುದೇ ಕ್ಷೇತ್ರವಿರಲಿ ಇಂಥಾ ದಾಖಲೆಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಮಾಡಿಬಿಡಬೇಕು. ಎಳೆ ವಯಸ್ಸಿನಲ್ಲಿ ದೇಹ ಸಹಕರಿಸುತ್ತದೆ. ಶರತ್‌ಗೆ ಕೇವಲ 24 ವರ್ಷ. ಹಾಗಾಗಿ ಈ ಸಾಧನೆ ಮಾಡಲು ಆತನಿಗೆ ಸಾಧ್ಯವಾಗಿದೆ ಎಂದು ಹರೀಶ್‌ ಹೇಳುತ್ತಾರೆ.

**
ಈಗಾಗಲೇ 53 ಗಂಟೆ ಅಡುಗೆ ಮಾಡಿದ್ದ ದಾಖಲೆ ಬೇರೆಯವರ ಹೆಸರಿನಲ್ಲಿತ್ತು. ನಾನು 60 ಗಂಟೆಯ ಗುರಿ ಇಟ್ಟುಕೊಂಡಿದ್ದೆ. ಆರಂಭದ ಒಂದು ದಿನ ಮುಗಿಯುವುದರೊಳಗೆ ಬೆನ್ನುನೋವು ಬಾಧಿಸಿತ್ತು. ಆದರೂ ಛಲ ಬಿಡದೇ ಮುಂದುವರಿಸಿದೆ. 54 ಗಂಟೆ ಮಾಡಿದರೂ ಸಾಕಿತ್ತು. ಆದರೆ ನನಗೆ 60 ಗಂಟೆಯ ನಂತರವೂ ಕೆಲ ಗಂಟೆ ಮುಂದುವರಿಸುವ ಮನಸ್ಸಿತ್ತು. ಕಾರಣಾಂತರದಿಂದ ನಿಲ್ಲಿಸಬೇಕಾಯಿತು. ರಜೆಯ ಮೇಲೆ ಬಂದಿರುವ ಕಾರಣ ಪ್ರಾಯೋಜಕರನ್ನು ಹುಡುಕುವುದೂ ಸಾಧ್ಯವಾಗಿಲ್ಲ. ಫ್ರೀಡಂ ರಿಫೈಂಡ್‌ ಆಯಿಲ್‌ ಕಂಪೆನಿ ಪ್ರಾಯೋಜಕತ್ವ ವಹಿಸಿತ್ತು. ಒಟ್ಟು

₹6 ಲಕ್ಷ ವೆಚ್ಚವಾಗಿದೆ. ಇದರಲ್ಲಿ ಅರ್ಧ ವೆಚ್ಚವನ್ನು ‘ಫ್ರೀಡಂ’ ಭರಿಸಿದೆ.

–ಶರತ್‌ ಕುಮಾರ್‌, ಷೆಫ್

**
ನಿಯಮ ಹೀಗಿತ್ತು:
ಪ್ರತಿ ಗಂಟೆಗೊಮ್ಮೆ ಐದು ನಿಮಿಷ ವಿಶ್ರಾಂತಿ ಪಡೆಯಬಹುದು. ಐದು ನಿಮಿಷಗಳ ವಿಶ್ರಾಂತಿಯನ್ನು ಉಳಿಸಿಕೊಂಡು ಒಂದೇ ಸಲ ತೆಗೆದುಕೊಳ್ಳಬಹುದು. ಪೂರ್ತಿ ಬೇಯಿಸುವ ಖಾದ್ಯಗಳನ್ನೇ ಸಿದ್ದಪಡಿಸಬೇಕು (ಬರ್ಗರ್‌, ಸ್ಯಾಂಡ್‌ವಿಚ್‌ ಮಾಡುವಂತಿಲ್ಲ). ಖಾದ್ಯ ಸರಿಯಿಲ್ಲ ಎಂದರೆ ತೀರ್ಪುಗಾರರು ತಿರಸ್ಕರಿಸಬಹುದು. ಮತ್ತೊಮ್ಮೆ ಅದೇ ಖಾದ್ಯ ತಯಾರಿಸಬೇಕು. ನೋವಿನ ಮಾತ್ರೆಗಳನ್ನು ತೆಗೆದುಕೊಳ್ಳುವಂತಿಲ್ಲ. ಅಡುಗೆ ಮಾಡುವುದರ ನಡುವೆ ಸುಮ್ಮನೆ ನಿಲ್ಲುವಂತಿಲ್ಲ. ಕುಳಿತುಕೊಳ್ಳಲು ಅವಕಾಶವಿಲ್ಲ. ಈ ಯಾವುದಾದರೂ ಒಂದು ನಿಯಮ ಉಲ್ಲಂಘನೆಯಾದರೂ ಸ್ಪರ್ಧೆ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT