ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕ್ರಿಪ್ಟೊ ಕರೆನ್ಸಿ: ₹3 ಕೋಟಿ ವಂಚನೆ ಆರೋಪ

ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲು
Last Updated 4 ಫೆಬ್ರುವರಿ 2023, 6:53 IST
ಅಕ್ಷರ ಗಾತ್ರ

ಮಂಗಳೂರು: ಕ್ರಿಪ್ಟೊ ಕರೆನ್ಸಿ ವ್ಯವಹಾರಕ್ಕೆ ಹೂಡಿಕೆ ಮಾಡಿಸಿಕೊಂಡು ₹3 ಕೋಟಿ ವಂಚಿಸಿರುವುದಾಗಿ ಆರೋಪಿಸಿ, ಕಣ್ಣೂರು ಬೋರುಗುಡ್ಡೆಯ ನಿವಾಸಿಯೊಬ್ಬರು ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮುಹಮ್ಮದ್ ಶಫದ್ ಸಿ.ಕೆ. ಮತ್ತು ಮುಹಮ್ಮದ್ ಅಫೀದ್ ಸಿ.ಕೆ. ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಣ್ಣೂರು ಬೋರುಗುಡ್ಡೆಯ ವ್ಯಕ್ತಿಗೆ ಮುಹಮ್ಮದ್ ಶಫದ್ ಎಂಬಾತ 2020ರ ಜನವರಿಯ ಮೊದಲ ವಾರದಲ್ಲಿ ತಾನು ಕ್ರಿಪ್ಟೊ ಕರೆನ್ಸಿ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದು, ಯಾರಾದರೂ ಒಳ್ಳೆಯ ಹೂಡಿಕೆದಾರರು ಇದ್ದರೆ ತಿಳಿಸಿ ಎಂದಿದ್ದಾರೆ. ದೂರುದಾರ ವ್ಯಕ್ತಿ ಮುಹಮ್ಮದ್ ಶಫದ್‌ನನ್ನು ಭೇಟಿಯಾಗಿದ್ದು, ಆತ ಲ್ಯಾಪ್‌ಟಾಪ್‌ನಲ್ಲಿ ಕ್ರಿಪ್ಟೊ ವ್ಯವಹಾರದ ಮಾಹಿತಿ ನೀಡುತ್ತ ತಿಂಗಳಿಗೆ ಶೇ 25 ಲಾಭಾಂಶ ನೀಡುವುದಾಗಿ ತಿಳಿಸಿದ್ದ ಎನ್ನಲಾಗಿದೆ.

ಜನವರಿ ಮೂರನೇ ವಾರದಲ್ಲಿ ಮುಹಮ್ಮದ್ ಶಫದ್ ಮತ್ತು ಆತನ ತಮ್ಮ ಮುಹಮ್ಮದ್ ಅಫೀದ್ ದೂರುದಾರರ ಮನೆಗೆ ಭೇಟಿ ನೀಡಿದಾಗ, ₹ 35 ಲಕ್ಷ ನಗದನ್ನು ಆರೋಪಿ ಸಹೋದರರಿಗೆ ನೀಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಒಂದು ತಿಂಗಳ ಬಳಿಕ ಮುಹಮ್ಮದ್ ಶಫದ್, ವಾಟ್ಸ್‌ಆ್ಯಪ್‌ ಮೂಲಕ ದೂರುದಾರರಿಗೆ ಒಂದು ತಿಂಗಳಲ್ಲಿ ₹8.75 ಲಕ್ಷ ಲಾಭಾಂಶ ಬಂದಿರುವುದಾಗಿ ಕ್ರಿಪ್ಟೊ ಕರೆನ್ಸಿಯ ಅಕೌಂಟ್ ತೋರಿಸಿದ್ದಾರೆ. ಕೋವಿಡ್ ಕಾರಣದಿಂದ ಲಾಭಾಂಶ ವಿಳಂಬವಾಗಿದ್ದು, ಮುಂದಿನ ಎರಡು ತಿಂಗಳಲ್ಲಿ ಅಪ್‌ಡೇಟ್ ಆಗುತ್ತದೆ ಎಂದು ನಂಬಿಸಿದ್ದಾರೆ. ಬಳಿಕ ಮತ್ತೆ ಕರೆ ಮಾಡಿ ಲಾಭಾಂಶದ ಬಗ್ಗೆ ನಂಬಿಸಿದ್ದಾರೆ. ಜಾಸ್ಮಿನ್ ಹಂಝ್‌ ಎಂಬುವರ ಹೆಸರು ಸೂಚಿಸಿ ಅವರ ಮೂಲಕ ದೂರುದಾರರಿಂದ ₹7 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ದೂರುದಾರರು ತನ್ನ ಸ್ನೇಹಿತರಿಂದ ಹಣ ಸಂಗ್ರಹಿಸಿ ಆರೋಪಿಗಳಿಗೆ ₹3 ಕೋಟಿ ನೀಡಿರುವುದಾಗಿ ಹೇಳಿದ್ದು, ನಂತರ ಆರೋಪಿಗಳು ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ.

2022ರಲ್ಲಿ ಬೆಂಗಳೂರಿನಲ್ಲಿ ಕ್ರಿಪ್ಟೊ ಕರೆನ್ಸಿ ವಂಚನೆ ಪ್ರಕರಣದಲ್ಲಿ ಮುಹಮ್ಮದ್ ಶಫದ್ ಮತ್ತು ಮುಹಮ್ಮದ್ ಅಫೀದ್ ಭಾಗಿಯಾಗಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆರೋಪಿಗಳಾದ ಇವರಿಬ್ಬರ ಜತೆ, ಸಾದಿಕ್, ಜಾಸ್ಮಿನ್, ಮುಹಮ್ಮದ್ ಬಶೀರ್ ವಿರುದ್ಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT