ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಸ್ಟ್ ನೆರಳಿನಲ್ಲಿ ಬೆಳಗಿದ ದಡ್ಡಲಕಾಡು ಸರ್ಕಾರಿ ಶಾಲೆ

₹4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಮಕ್ಕಳ ಸಂಖ್ಯೆಯಲ್ಲೂ ದಾಖಲೆ
Last Updated 12 ಜೂನ್ 2022, 7:47 IST
ಅಕ್ಷರ ಗಾತ್ರ

ಮಂಗಳೂರು: ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಏಳು ವರ್ಷಗಳ ಹಿಂದೆ ಮಕ್ಕಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿತ್ತು. ಸ್ಥಳೀಯರಾದ ಪ್ರಕಾಶ್‌ ಅಂಚನ್‌ ನೇತೃತ್ವದ ಶ್ರೀದುರ್ಗಾ ಚಾರಿಟಬಲ್‌ ಟ್ರಸ್ಟ್‌ ಶಾಲೆಯನ್ನು ದತ್ತು ಪಡೆದು ಸುಮಾರು ₹ 4 ಕೋಟಿ ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟಿದೆ.

ಸರ್ಕಾರದ ಅನುದಾನವಿಲ್ಲದೆ ಹಂತಹಂತವಾಗಿ ಎರಡು ಮಹಡಿಯ ಸುಸಜ್ಜಿತ ಕಟ್ಟಡ, ಬಸ್‌ ಸೌಲಭ್ಯ, ಕಂಪ್ಯೂಟರ್‌ ಲ್ಯಾಬ್‌, ಡಿಜಿಟಲ್‌ ಗ್ರಂಥಾಲಯವನ್ನು ಟ್ರಸ್ಟ್‌ನಿಂದ ಕಲ್ಪಿಸಲಾಗಿದೆ. ಅದರ ಫಲವಾಗಿ ಇಂದು ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 1,200ಕ್ಕೆ ತಲುಪಿದೆ.

‘2015–16ನೇ ಸಾಲಿನಲ್ಲಿ ಈ ಶಾಲೆಯಲ್ಲಿ ಕೇವಲ 28 ಮಕ್ಕಳಿದ್ದರು. ಮಕ್ಕಳಿಗೆ ಪುಸ್ತಕ ವಿತರಣೆಗಾಗಿ ಶಾಲೆಗೆ ಆಕಸ್ಮಿಕವಾಗಿ ಭೇಟಿ ನೀಡಿದೆ. ಶಾಲಾ ಕಟ್ಟಡ ಶಿಥಿಲಗೊಂಡು ಕುಸಿಯುವ ಸ್ಥಿತಿಯಲ್ಲಿತ್ತು. ನನ್ನಂತೆ ನನ್ನ ಊರಿನ ಬಡ ಮಕ್ಕಳು ಆರ್ಥಿಕ ಅಡಚಣೆಯಿಂದಾಗಿ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸಂಕಲ್ಪ ಮಾಡಿ, ಟ್ರಸ್ಟ್‌ನಿಂದ ಶಾಲೆಯನ್ನು ದತ್ತು ಪಡೆದು, ಮೂಲಸೌಕರ್ಯ ಕಲ್ಪಿಸಲು ಮುಂದಾದೆವು’ ಎನ್ನುತ್ತಾರೆ ಪ್ರಕಾಶ್‌ ಅಂಚನ್‌.

‘ಮೊದಲ ಹಂತದಲ್ಲಿ ₹ 1.5 ಕೋಟಿ ವೆಚ್ಚದಲ್ಲಿ ಹೈಟೆಕ್‌ ಶೌಚಾಲಯ, 8 ಕೊಠಡಿಯ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಮಕ್ಕಳ ಸಂಖ್ಯೆ ಜಾಸ್ತಿಯಾದಂತೆ ಎರಡನೇ ಹಂತದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಮೊದಲ ಮಹಡಿಯಲ್ಲಿ 8 ಕೊಠಡಿ ನಿರ್ಮಿಸಿದೆವು. ಪೌಢಶಾಲೆಯಾಗಿ ಮೇಲ್ದರ್ಜೆಗೆ ಏರಿಸಿದ ಬಳಿಕ ಮತ್ತೆ ಕೊಠಡಿ ಕೊರತೆಯಾಯಿತು. ಹೀಗಾಗಿ, ಮೂರನೇ ಹಂತದಲ್ಲಿ ₹ 1.5 ಕೋಟಿ ವೆಚ್ಚದಲ್ಲಿ ಎರಡನೇ ಮಹಡಿಯಲ್ಲಿ ತರಗತಿ ಕೊಠಡಿ ಮತ್ತು ಸಭಾಂಗಣ ನಿರ್ಮಿಸಿ, ಮೇ 7ರಂದು ಲೋಕಾರ್ಪಣೆ ಮಾಡಿದ್ದೇವೆ. ನಾಲ್ಕನೇ ಹಂತದಲ್ಲಿ ಮಕ್ಕಳಿಗೆ ಭೋಜನಾಲಯ ನಿರ್ಮಿಸುವ ಚಿಂತನೆಯಿದೆ’ ಎಂದು ಹೇಳುತ್ತಾರೆ.

‘ಶಾಲೆಯಲ್ಲಿ 8 ಶಿಕ್ಷಕರು ಸರ್ಕಾರದಿಂದ ನೇಮಕಗೊಂಡವರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ 24 ಗೌರವ ಶಿಕ್ಷಕರನ್ನು ಟ್ರಸ್ಟ್‌ನಿಂದ ನೇಮಿಸಿ, ವೇತನ ನೀಡಲಾಗುತ್ತದೆ. ಪಠ್ಯ ಶಿಕ್ಷಣದ ಜತೆಗೆ ಯೋಗ, ಸಂಗೀತ, ನೃತ್ಯ, ಯಕ್ಷಗಾನ, ಭರತನಾಟ್ಯ, ಕೃಷಿ, ಕರಾಟೆ, ಕ್ರೀಡಾ ತರಬೇತಿ ನೀಡುತ್ತಿದ್ದೇವೆ. ಪ್ರಸಕ್ತ ವರ್ಷ 1ನೇ ತರಗತಿಗೆ 112 ವಿದ್ಯಾರ್ಥಿಗಳ ದಾಖಲಾತಿ ಆಗಿದ್ದು, ಇನ್ನೂ ಬೇಡಿಕೆ ಬರುತ್ತಿದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ರಮಾನಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT