ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪನ: ಗುಳೆ ಹೊರಟ ಗ್ರಾಮಸ್ಥರು

ಸಂಪಾಜೆ: ಮತ್ತೆ, ಮತ್ತೆ ಕಂಪನ, ಭಾರಿ ಮಳೆ– ಸ್ಥಳೀಯರು ಕಂಗಾಲು
Last Updated 3 ಜುಲೈ 2022, 2:37 IST
ಅಕ್ಷರ ಗಾತ್ರ

ಸುಳ್ಯ: ಸಂಪಾಜೆ ಭಾಗದಲ್ಲಿ ಶನಿವಾರ ನಸುಕಿನಲ್ಲಿ ಹಾಗೂ ಮಧ್ಯಾಹ್ನ ಮತ್ತೆ ಭೂಕಂಪನ ಸಂಭವಿಸಿದ್ದು, ವಾರದಲ್ಲಿ 5 ಬಾರಿ ಭೂಮಿ ಕಂಪಿಸಿದೆ. ಇಲ್ಲಿನ ಸುಮಾರು 25 ಕುಟುಂಬಗಳು ಈಗಾಗಲೇ ಗುಳೆ ಹೊರಟಿವೆ. ಕೆಲವರು ಪೇಟೆಯಲ್ಲಿ ಬಾಡಿಗೆ ಮನೆ ಪಡೆದು ಹಾಗೂ ಸಂಬಂಧಿಕರ ಮನೆಗೆ ವಾಸ್ತವ್ಯ ಬದಲಿಸಿದ್ದಾರೆ.

‘ಶನಿವಾರ ನಸುಕಿನಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿತು. ಸುಮಾರು 3ಗಂಟೆಗೆ ಈ ಘಟನೆ ನಡೆದಿದೆ. ರಾತ್ರಿ ಗಾಢ ನಿದ್ರೆಯಲ್ಲಿ ಇದ್ದೆವು. ಆಗ ಕಂಪನದ ಜೊತೆ ಶಬ್ದವೂ ಕೇಳಿ ಬಂತು. ಮಳೆಯೂ ತುಂಬಾ ಬರುತಿತ್ತು. ಜೀವ ಭಯದಿಂದ ಅಂಗಳಕ್ಕೆ ಬಂದು ನಿಂತೆವು. ಕೆಲವು ಸೆಕೆಂಡುಗಳ ಕಾಲ ಈ ಭೂಮಿ ನಲುಗಿದೆ’ ಎಂದು ಅಲ್ಲಿನ ಅಬ್ದುಲ್ ಖಾದರ್ ಹೇಳಿದರು.

ಸಂಪಾಜೆ, ಗೂನಡ್ಕ, ತೋಡಿಕಾನ, ಕುಂಡಾಡು, ಪತ್ತುಕುಂಜ, ಚೆಂಬು ಮತ್ತಿತರ ಕಡೆಗಳಲ್ಲಿ ಭೂ ಕಂಪನ ಆಗಿದೆ ಎಂದು ಸಾರ್ವಜನಿಕರು ತಿಳಿಸಿದರು. ಆದರೆ, ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿಗಾ ಕೇಂದ್ರದ ಭೂಕಂಪನ ಮಾಪಕದಲ್ಲಿ ಈ ಬಗ್ಗೆ ದಾಖಲಾಗಿಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

‘ಶನಿವಾರ ಮಧ್ಯಾಹ್ನ 1.45 ಕ್ಕೆ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ನಿರಂತರ ಲಘು ಭೂಕಂಪನಗಳು ಆಗುತ್ತಿರುವುದು ಜನರನ್ನು ಆತಂಕಕ್ಕೆ ತಳ್ಳಿದೆ. ಜೂನ್‌ 25 ರಂದು ಕರಿಕೆ ಸಮೀಪ, ಜೂನ್‌ 28ರಂದು ಎರಡು ಬಾರಿ, ಜುಲೈ1 ರಂದು ಎರಡು ಬಾರಿ ಚೆಂಬು ಸಮೀಪ ಭೂಕಂಪನ ಉಂಟಾಗಿತ್ತು.

ಭಾರಿ ಮಳೆ: ಈ ಭಾಗದಲ್ಲಿ ಶುಕ್ರವಾರ ರಾತ್ರಿ ಭಾರಿ ಮಳೆ ಸುರಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಸುಮಾರು 25 ಮನೆಗಳಿಗೆ ಹಾನಿ ಸಂಭವಿಸಿದೆ.

ಇನ್ನು ಹಲವಾರು ಮನೆಗಳಿಗೆ ಅಪಾಯ ಎದುರಾಗಿದೆ. ಸಂಜೆ ಮಳೆ ಪ್ರಮಾಣ ಕಡಿಮೆ ಆಗಿದೆ.

ಸಂಪಾಜೆಯಲ್ಲಿ ಬರೆ ಕುಸಿದು ಮನೆಗಳಿಗೆ ಹಾನಿ ಸಂಭವಿಸಿದರೂ, ಮನೆಗಳು, ಕೃಷಿ ಭೂಮಿ ಜಲಾವೃತವಾಗಿದ್ದರೂ ರಕ್ಷಣಾ ಕಾರ್ಯಾಚರಣೆ ನಡೆದಿಲ್ಲ ಎಂದು ಸಾರ್ವಜನಿಕರು ಆಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರಂತರ ಭೂ ಕಂಪನ, ಮಳೆ ಆವಾಂತರದಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ.ಯಾವುದೇ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಬಂದಿಲ್ಲ ಎಂದು ದೂರಿದ್ದಾರೆ.

‘ನಿರಂತರ ಮಳೆ, ಭೂಕಂಪನದಿಂದ ಭಯಭೀತರಾಗಿರುವ ಕುಟುಂಬಗಳು ಅಲ್ಲಿಂದ ಗುಳೆ ಹೋಗುತ್ತಿದ್ದಾರೆ. ಚೆಂಬು ಭಾಗದಿಂದ ಕೆಲವು ಮನೆ ಮಂದಿ ಸುಳ್ಯದ ಪೇಟೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾರೆ. ನಾವು ಅನಿವಾರ್ಯವಾಗಿ ಮನೆ ಬಿಟ್ಟು ಬರಬೇಕಾಯಿತು’ ಎಂದು ಶಿವರಾಮ ಹೇಳಿದರು.

‘ಸುಮಾರು 25 ಮನೆಯವರು ಊರು ಬಿಟ್ಟು ದೂರದಲ್ಲಿ ಸಂಬಂಧಿಕರ ಮನೆ ಸೇರಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ಭಾಗದಿಂದ ಇನ್ನು ನೂರಾರು ಮಂದಿ ಗುಳೆ ಹೋಗುವ ಸಾಧ್ಯತೆ ಇರುತ್ತದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT