ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ತುಳುವರು ಕನ್ನಡದ ರಾಯಭಾರಿಗಳು: ಡಾ.ಮಹೇಶ್ ಜೋಶಿ
Last Updated 4 ಫೆಬ್ರುವರಿ 2023, 5:12 IST
ಅಕ್ಷರ ಗಾತ್ರ

ಉಜಿರೆ/ಬೆಳ್ತಂಗಡಿ: ‘ಕನ್ನಡವನ್ನು ಉಳಿಸಿ, ಬೆಳೆಸುವಲ್ಲಿ ಕರಾವಳಿಗರ ಕೊಡುಗೆ ಅಪಾರ. ಕರಾವಳಿಗರು ಶುದ್ಧ ಕನ್ನಡ ಬರೆಯುವವರು, ಮಾತನಾಡುವವರಾಗಿದ್ದು, ಅವರು ಕನ್ನಡದ ರಾಯಭಾರಿಗಳು’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಹೇಳಿದರು.

ಉಜಿರೆಯಲ್ಲಿ ಕುಂಬ್ಳೆ ಸುಂದರರಾವ್ ಪ್ರಾಂಗಣದಲ್ಲಿ ಸಾ.ರಾ. ಅಬೂಬಕ್ಕರ್ ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬರೆಯುವಂತೆ ಓದುವ, ಓದುವಂತೆ ಮಾತನಾಡುವ, ಮಾತನಾಡಿದಂತೆ ನಡೆದುಕೊಳ್ಳುವ ಕರಾವಳಿಯ ಜನರು ಶ್ರಮಜೀವಿಗಳು ಹಾಗೂ ಅಪಾರ ಹೃದಯ ಶ್ರೀಮಂತಿಕೆ ಹೊಂದಿದವರು. ಆಂತರಿಕವಾಗಿ ಮತ್ತು ಬಹಿರಂಗವಾಗಿ ಪರಿಶುದ್ಧರಾಗಿದ್ದು, ನೇರ ನಡೆ ನುಡಿ ಅವರ ಜೀವನಶೈಲಿಯಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಕೃಷಿ, ಸಾಹಿತ್ಯ, ಧರ್ಮ ಮತ್ತು ಸಂಪ್ರದಾಯಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆ ಎಂದರು.

ಕಿಟ್ಟಲ್ ಹಾಗೂ ಹರ್ಮನ್ ಮೊಗ್ಲಿಂಗ್ ಕನ್ನಡಕ್ಕೆ ನೀಡಿದ ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದ ಅವರು
ಸಂಸ್ಕೃತದಂತೆ ಕನ್ನಡ ಕೂಡ ಒಂದು ಪರಿಪೂರ್ಣ ಭಾಷೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಸಾಹಿತ್ಯ - ಸಾಮರಸ್ಯ - ಸಮೃದ್ಧಿಯ ಆಶಯದೊಂದಿಗೆ ಜಿಲ್ಲಾ ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಪ್ರೊ.ಎಸ್.ಪ್ರಭಾಕರ್, ಸಮ್ಮೇಳನ ಸಂಯೋಜನಾ ಸಮಿತಿಯ ಗೌರವ ಅಧ್ಯಕ್ಷ ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬೆಂಗಳೂರು ಸೋಮಯಾಜಿ ಸಮೂಹ ಸಂಸ್ಥೆಗಳ ರಘುನಾಥ ಸೋಮಯಾಜಿ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ವಿ.ಭಟ್ ಮಾಧವ ಎಂ.ಕೆ, ಪುಷ್ಪಾವತಿ ಆರ್.ಶೆಟ್ಟಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಯದುಪತಿ ಗೌಡ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು, ವಿವಿಧ ತಾಲ್ಲೂಕು ಘಟಕಗಳ ಅಧ್ಯಕ್ಷರು ಉಪ ಸಮಿತಿಗಳ ಸಂಚಾಲಕರು ಉಪಸ್ಥಿತರಿದ್ದರು.

ಶಾಸಕ ಹರೀಶ್ ಪೂಂಜ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದರು.

ಶರತ್‌ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ. ಧನ್ಯವಾದವಿತ್ತರು. ಡಾ. ಕುಮಾರ ಹೆಗ್ಡೆ ಮತ್ತು ಅನುರಾಧ ಕೆ. ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಬೆಳ್ತಂಗಡಿ ವಾಣಿ ಕಾಲೇಜಿನ ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಎಸ್.ಡಿ.ಎಂ.ಕಾಲೇಜಿನ ವಿದ್ಯಾರ್ಥಿಗಳ ರೈತ ಗೀತೆಗೆ ಗೀತರೂಪಕ, ಉದ್ಘಾಟನೆಗೆ ಮುಂಚಿತವಾಗಿ ಸಭಾಂಗಣದ ಮುಖ್ಯದ್ವಾರದಿಂದ ಸಭಾ ವೇದಿಕೆಯವರೆಗೆ ‘ಹಚ್ಚೇವು ಕನ್ನಡದ ದೀಪ’ ಹಾಡಿಗೆ ನೃತ್ಯ ಸಾಹಿತ್ಯಾಭಿಮನಿಗಳ ಮನಸ್ಸಿಗೆ ಮುದ ನೀಡಿತು.

ಸಾಧಕರಿಗೆ ಸನ್ಮಾನ: ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್‌ ಪಡೆದ ಹರಿಕೃಷ್ಣ ಪುನರೂರು, ದೇವದಾಸ್ ಕಾಪಿಕಾಡ್, ರಾಜ್ಯೋತ್ಸವ ಪುರಸ್ಕೃತ ಹಿರಿಯ ನೃತ್ಯಗುರು ಪಿ.ಕಮಲಾಕ್ಷ ಆಚಾರ್ ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿ, ನಾರಾಯಣ ಎಂ. ಸುರತ್ಕಲ್ ಅವರನ್ನು ಸನ್ಮಾನಿಸಲಾಯಿತು.

ಸಾಹಿತ್ಯವು ಸಮಾಜದ ಪ್ರತಿಬಿಂಬ, ಗತಿಬಿಂಬ: ಹೇಮಾವತಿ ವಿ. ಹೆಗ್ಗಡೆ

ಸಮ್ಮೇಳನ ಅಧ್ಯಕ್ಷೆ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಮಾತನಾಡಿ, ‘ಸಾಹಿತ್ಯವು ಸಮಾಜದ ಪ್ರತಿಬಿಂಬ ಹಾಗೂ ಗತಿಬಿಂಬವಾಗಿದೆ. ಸರ್ವರಿಗೆ ಹಿತವನ್ನುಂಟು ಮಾಡುವ ಜೊತೆಗೆ ಸಾಹಿತ್ಯವು ಸರ್ವರ ಮನಸ್ಸನ್ನು ಅರಳಿಸಿ, ಶಾಂತಿ-ನೆಮ್ಮದಿಯೊಂದಿಗೆ ಉತ್ತಮ ಸಂಸ್ಕಾರವನ್ನೂ ನೀಡುತ್ತದೆ’ ಎಂದು ಹೇಳಿದರು.

ಸಾಹಿತ್ಯದಲ್ಲಿ ಶಬ್ದ ಮತ್ತು ಅರ್ಥ ಎರಡರಲ್ಲೂ ಗುಣಗಳಿದ್ದಾಗ ಶಬ್ದದಿಂದ ಅರ್ಥಕ್ಕೆ ಹಿರಿಮೆ, ಅರ್ಥದಿಂದ ಶಬ್ದಕ್ಕೆ ಗರಿಮೆ ಬರಬೇಕು. ಮನುಷ್ಯನ ಸಂವೇದನೆಗಳನ್ನು ಮಾನವೀಯಗೊಳಿಸಿ, ಅಂತಃಕರಣವನ್ನು ಅನಾವರಣಗೊಳಿಸಿ, ಪರಂಪರೆಯ ಮೌಲ್ಯಗಳನ್ನು ಒಡಲಲ್ಲಿ ತುಂಬಿಕೊಂಡು ಪ್ರತಿಯೊಬ್ಬರ ಮನದಲ್ಲಿ ಅರಿವಿನ ಬೆಳಕನ್ನು ನೀಡಿ, ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವ ಶಕ್ತಿ- ಸಾಮರ್ಥ್ಯ ಸಾಹಿತ್ಯಕ್ಕಿದೆ. ಮನುಷ್ಯನ ಅಂತರಂಗವನ್ನು ಸೂಕ್ಷವಾಗಿ ಶೋಧಿಸುವ ಚಿಂತನೆ ಸಾಹಿತ್ಯದ್ದಾಗಿದೆ ಎಂದರು.

ಬಹುಭಾಷಾ ವಿಶಾರದರಾದ ಪಂಪ, ರನ್ನ, ಪೊನ್ನ ಚಾವುಂಡರಾಯ, ಜನ್ನ, ಕುಮಾರವ್ಯಾಸ, ಲಕ್ಷ್ಮೀಶ ಮೊದಲಾದ ಕವಿಗಳು ಸಾಹಿತ್ಯ, ಧರ್ಮ, ಅರ್ಥಶಾಸ್ತ್ರ, ಮೀಮಾಂಸೆ, ಭಾಷಾಶಾಸ್ತ್ರ, ಸಂಗೀತದ ಅಂಶಗಳನ್ನು ತಮ್ಮ ಕಾವ್ಯಗಳಲ್ಲಿ ಅಭಿವ್ಯಕ್ತಿಗೊಳಿಸಿದ್ದಾರೆ. ವಚನಕಾರರು, ಕೀರ್ತನಕಾರರು, ತ್ರಿಪದಿಕಾರರು ತಮ್ಮ ನಡೆ-ನುಡಿಯ ಮೂಲಕ ಜೀವನ ತತ್ವಗಳನ್ನು ಸರಳವಾಗಿ ಜನರಿಗೆ ಬೋಧಿಸಿದರು. ಮನುಷ್ಯ ಸಾರ್ಥಕ ಜೀವನ ನಡೆಸಲು ಭಕ್ತಿ ಮಾರ್ಗವೇ ಸೂಕ್ತ ಎಂದು ಹೇಳಿದರು. ಆತ್ಮಸಾಕ್ಷಿಗನುಗುಣವಾಗಿ ಬದುಕುವುದೇ ನಿಜವಾದ ಭಕ್ತಿ ಎಂದರು. ಇವರ ಚಿಂತನೆ, ಭಾಷೆ, ನಿರೂಪಣೆ ಕನ್ನಡಕ್ಕೆ ಹೊಸತನವನ್ನು ಕೊಟ್ಟಿದೆ. ಇವರು ಷಟ್ಪದಿ, ಕೀರ್ತನೆ, ತತ್ವಪದ ಎಂಬ ಹೊಸ ಸಾಹಿತ್ಯ ಪ್ರಕಾರಗಳನ್ನೆ ಸೃಷ್ಟಿಸಿದರು ಎಂದು ಹೇಳಿದರು.

ಆಧುನಿಕ ಸಾಹಿತ್ಯದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಎಂದು ಸಾಹಿತ್ಯವನ್ನು ವರ್ಗೀಕರಿಸುತ್ತೇವೆ. ಕಥೆ, ಕಾದಂಬರಿ, ಪ್ರಬಂಧ, ಭಾವಗೀತೆ, ಕವನ, ಜೀವನಚರಿತ್ರೆ, ನಾಟಕ ಮೊದಲಾದ ಪ್ರಕಾರಗಳಲ್ಲಿ ಆಧುನಿಕ ಸಾಹಿತ್ಯ ವೈವಿಧ್ಯಮಯವಾಗಿ ಬೆಳೆಯಿತು. ಕುವೆಂಪು, ಕಾರಂತ, ಮಾಸ್ತಿ, ಗೋಕಾಕ, ಬೇಂದ್ರೆ, ಪು.ತಿ.ನ. ಕಂಬಾರ, ಕಾರ್ನಾಡ್, ಅನಂತಮೂರ್ತಿ, ಭೈರಪ್ಪರಂತಹ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಜಗತ್ತಿನ ಸಾಹಿತ್ಯಕ್ಕೆ ಸರಿಸಾಟಿಯಾಗಿ ಬೆಳೆಸಿದರು ಎಂದು ಸ್ಮರಿಸಿದರು.

ಸಾಹಿತ್ಯ ಸಮ್ಮೇಳನಗಳು ಜನರ ಹೃದಯವನ್ನು ಬೆಸೆಯುವ, ಮನಸ್ಸುಗಳನ್ನು ಕಟ್ಟುವ, ಸಂವೇದನೆಗಳನ್ನು ಸೃಜಿಸುವ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ. ಹಿಂದಿನ ಸಾಹಿತ್ಯವನ್ನು ಅರಿತುಕೊಂಡು ಹೊಸ ಸಾಹಿತ್ಯ ರಚನೆ ಬಗ್ಗೆ ಚಿಂತನೆ ಮಾಡುವಂತೆ ಪ್ರೇರೇಪಿಸುತ್ತವೆ.
ಶಿಕ್ಷಕರು ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಮಕ್ಕಳಲ್ಲಿ ಭಾಷಾಭಿಮಾನ, ಸಾಹಿತ್ಯಾಸಕ್ತಿ ಮತ್ತು ಓದುವ ಸಂಸ್ಕೃತಿ ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.

ಆಧುನಿಕ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಿಗೆ ಸಾಹಿತ್ಯವನ್ನು ತಲುಪಿಸುವ ಪ್ರಯತ್ನ ಮಾಡಬೇಕು. ಡಿಜಿಟಲ್ ಮಾಧ್ಯಮದ ಮೂಲಕ ನೂರಾರು ಬರಹಗಾರರು ರೂಪಗೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಕ್ಕೆ ಶಿಕ್ಷಣ ಮಾಧ್ಯಮವಾಗಬಲ್ಲ ಎಲ್ಲ ಅರ್ಹತೆಗಳಿದ್ದು ಪ್ರಾಥಮಿಕದಿಂದ ಪ್ರೌಢಶಾಲಾ ಶಿಕ್ಷಣದವರೆಗೆ ಕನ್ನಡವನ್ನು ಶಿಕ್ಷಣದ ಮಾಧ್ಯಮವಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿ ಮನೆಯಲ್ಲಿಯೂ ಒಂದು ಸಣ್ಣ ಗ್ರಂಥಾಲಯವಿರಬೇಕು. ಆಗ ಮನೆಯಲ್ಲಿ ಹಿರಿಯರೊಂದಿಗೆ ಕಿರಿಯರೂ ಓದುವ ಹವ್ಯಾಸ ಬೆಳೆಸಿಕೊಳ್ಳಲು ಅನುಕೂಲವಾಗುತ್ತದೆ. ಓದುವ ಹವ್ಯಾಸ ಬಾಲ್ಯದಿಂದಲೇ ಮೂಡಿದರೆ ಮಕ್ಕಳಲ್ಲಿ ಮಾನವೀಯತೆಯ ಸಂವೇದನೆಗಳು ಬೆಳೆಯುತ್ತವೆ. ಆಗ ಸುಸಂಸ್ಕೃತ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ಕಲೆ ಮತ್ತು ಸಾಹಿತ್ಯ ಮಾನಸಿಕ ನೆಮ್ಮದಿ ಮತ್ತು ಶಾಂತಿಯನ್ನು ನೀಡುತ್ತದೆ. ಇಂದು ಸಾಹಿತ್ಯ ಓದುವ ವಿಧಾನಗಳು ಬದಲಾಗಿರಬಹುದು. ಆದರೆ, ಸಾಹಿತ್ಯಾಸಕ್ತಿ ಆಸ್ವಾದಿಸುವ ಮನೋಭಾವ ಕಡಿಮೆಯಾಗಿಲ್ಲ ಎಂದು ಹೇಮಾವತಿ ಹೆಗ್ಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT